

ಕೇರಳ: ಶಬರಿಮಲೆಗೆ ಭೇಟಿ ನೀಡುವ ಭಕ್ತರು ಇನ್ಮುಂದೆ 'ಅರವಣ ಪಾಯಸ' ಮತ್ತಿತರ ಪ್ರಸಾದಗಳನ್ನು ಇಂಡಿಯಾ ಪೋಸ್ಟ್ ಮೂಲಕ ತಮ್ಮ ಮನೆಗೆ ಕಳುಹಿಸಬಹುದು. ಇದಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿಯ ಸಹಯೋಗದೊಂದಿಗೆ, ಶಬರಿಮಲೆ ದೇವಾಲಯದ ಆವರಣದಲ್ಲಿ ಅಂಚೆ ಇಲಾಖೆಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಿಶೇಷ ಬುಕಿಂಗ್ ಕೌಂಟರ್ ಅನ್ನು ಸ್ಥಾಪಿಸುತ್ತಿದೆ.
ಮುಂಬರುವ ಮಂಡಲ-ಮಕರವಿಳಕ್ಕು ಸಂದರ್ಭದಲ್ಲಿ ದೇಶಾದ್ಯಂತ ಇರುವ ಭಕ್ತರಿಗೆ ಅವರ ಮನೆ ಬಾಗಿಲಿಗೆ ಪ್ರಸಾದವನ್ನು ತಲುಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ. ಅಂಚೆ ಇಲಾಖೆಯ 'ಸ್ಪೀಡ್ ಪೋಸ್ಟ್ ಪಾರ್ಸೆಲ್' ಸೇವೆಯ ಮೂಲಕ ಈ ಪ್ರಸಾದಗಳನ್ನು ತಲುಪಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
41 ದಿನಗಳ ಮಂಡಲ ಯಾತ್ರಾ ಸಮಯವು ನವೆಂಬರ್ 17 ರಂದು ಪ್ರಾರಂಭವಾಗಲಿದೆ. ಶಬರಿಮಲೆ ದೇವಾಲಯದ ಆವರಣದಲ್ಲಿರುವ ದೇವಸ್ವಂ ಮಂಡಳಿಯ ಅರವಣ ಮತ್ತು ಅಪ್ಪಂ ಕೌಂಟರ್‌ಗಳ ಪಕ್ಕದಲ್ಲೇ ಈ ವಿಶೇಷ ಪಾರ್ಸೆಲ್ ಬುಕಿಂಗ್ ಕೇಂದ್ರವು ಕಾರ್ಯನಿರ್ವಹಿಸುತ್ತದೆ. ಅಕ್ಕಿ, ಬೆಲ್ಲ ಮತ್ತು ತುಪ್ಪವನ್ನು ಬಳಸಿ ತಯಾರಿಸುವ 'ಅರವಣ'ವು ಶಬರಿಮಲೆ ದೇವಾಲಯದಲ್ಲಿ ಭಕ್ತರು ಅತಿ ಹೆಚ್ಚು ಬಯಸುವ ಪ್ರಸಾದಗಳಲ್ಲಿ ಒಂದಾಗಿದೆ. 'ಅಪ್ಪಂ' ಕೂಡ ಇಲ್ಲಿನ ಮತ್ತೊಂದು ಪ್ರಮುಖ ಸಿಹಿ ಪ್ರಸಾದವಾಗಿದೆ.
ಭಕ್ತರು ದೇವಾಲಯದ ಆವರಣದಲ್ಲೇ ಪ್ರಸಾದವನ್ನು ಬುಕ್ ಮಾಡಿ, ಅದನ್ನು ತಮ್ಮ ಮನೆ ವಿಳಾಸಕ್ಕೆ ಕಳುಹಿಸಬಹುದು. ಇದರಿಂದ ಭಕ್ತರು ತಮ್ಮ ಯಾತ್ರೆಯನ್ನು ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಈ ಪ್ರಸಾದದ ಪಾರ್ಸೆಲ್‌ಗಳು ಅವರ ಮನೆ ತಲುಪುತ್ತವೆ. ಸನ್ನಿಧಾನದಲ್ಲಿರುವ ಈ ಸೌಲಭ್ಯದ ಹೊರತಾಗಿ ದೇಶಾದ್ಯಂತ ಇರುವ ಯಾವುದೇ ಅಂಚೆ ಕಚೇರಿಗಳ ಮೂಲಕವೂ ಭಕ್ತರು ಪ್ರಸಾದವನ್ನು ಬುಕ್ ಮಾಡಿ ಕಳುಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕ್ರಮದಿಂದ ದೇವಾಲಯದಲ್ಲಿನ ಭಾರಿ ಜನಸಂದಣಿಯ ನಡುವೆ ಭಕ್ತರು ಎದುರಿಸುವ ತೊಂದರೆಗಳನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಭಕ್ತರು ತಮ್ಮ ವಾಪಸಾತಿ ಪ್ರಯಾಣದ ವೇಳೆ ಪ್ರಸಾದದ ಪ್ಯಾಕೆಟ್‌ಗಳನ್ನು ಹೊತ್ತುಕೊಂಡು ಹೋಗುವ ಅಗತ್ಯವಿಲ್ಲದೆ, ತಮಗೆ ಬೇಕಾದಷ್ಟು ಪ್ರಮಾಣದಲ್ಲಿ ಪ್ರಸಾದವನ್ನು ಆರ್ಡರ್ ಮಾಡಬಹುದು.
ಈ ಸೇವೆಯು ಸುಲಭ ಬುಕಿಂಗ್, ಸುರಕ್ಷಿತ ಪ್ಯಾಕೇಜಿಂಗ್ ಮತ್ತು ದೇಶಾದ್ಯಂತ ವಿಶ್ವಾಸಾರ್ಹ ವಿತರಣೆಯನ್ನು ಖಾತ್ರಿಪಡಿಸುತ್ತದೆ. ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ಮತ್ತು ಕೇರಳ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಅಮಿತಾಭ್ ಸಿಂಗ್ ಅವರು ಈ ವಿಷಯವನ್ನು ಪ್ರಕಟಿಸಿದ್ದಾರೆ. ಪ್ರಸಕ್ತ ಸಾಲಿನ ಮಂಡಲ ಋತುವು ಪ್ರಾರಂಭವಾಗುವಾಗ, ಅಂದರೆ ಮುಂದಿನ ವಾರದಿಂದಲೇ ಈ ವಿಶೇಷ ಪಾರ್ಸೆಲ್ ಬುಕಿಂಗ್ ಕೇಂದ್ರ ಕಾರ್ಯನಿರ್ವಹಿಸಲು ಪ್ರಾರಂಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.