

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ 137ನೇ ಜನ್ಮದಿನವನ್ನು ಇಂದು ಶನಿವಾರ ನವೆಂಬರ್ 14 ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರ, ರಾಜ್ಯ ನಾಯಕರು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನೂ ಇಂದು ಆಚರಿಸಲಾಗುತ್ತಿದೆ.
ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ ಎಂದು ಮೋದಿ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು ಅವರ ಪಾತ್ರ ಹಾಗೂ ಸ್ವಾತಂತ್ರ್ಯಾನಂತರದ ಆರಂಭಿಕ ವರ್ಷಗಳಲ್ಲಿ ಅವರು ನೀಡಿದ ನಾಯಕತ್ವವನ್ನು ಸ್ಮರಿಸಿದರು. ನಮ್ಮ ರಾಷ್ಟ್ರದ ನಿರ್ಮಾಣದ ಆರಂಭಿಕ ವರ್ಷಗಳ ಮೇಲೆ ಅವರ ಕೊಡುಗೆ ಅಚ್ಚಳಿಯದ ಮುದ್ರೆ ಮೂಡಿಸಿದೆ ಎಂದು ರಾಜನಾಥ್ ಸಿಂಗ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ದೆಹಲಿಯ ಶಾಂತಿವನದಲ್ಲಿರುವ ನೆಹರು ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಇತರ ಕಾಂಗ್ರೆಸ್ ನಾಯಕರೊಂದಿಗೆ ರಾಷ್ಟ್ರಧ್ವಜದ ಬಣ್ಣಗಳಲ್ಲಿರುವ ಬಲೂನ್ಗಳನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಿದರು.
ಪ್ರತ್ಯೇಕ ಎಕ್ಸ್ ಪೋಸ್ಟ್ನಲ್ಲಿ ಖರ್ಗೆ ಅವರು ಆಧುನಿಕ ಮತ್ತು ಪ್ರಜಾಪ್ರಭುತ್ವ ಭಾರತಕ್ಕೆ ನೆಹರು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಸ್ಮರಿಸಿದರು. ಸಮಾನತೆ, ಜಾತ್ಯತೀತತೆ ಮತ್ತು ವೈಜ್ಞಾನಿಕ ಚಿಂತನೆಯ ಬಗೆಗಿನ ನೆಹರು ಅವರ ಬದ್ಧತೆಯನ್ನು ನೆನಪಿಸಿಕೊಂಡ ಅವರು, ಮಕ್ಕಳ ಶಿಕ್ಷಣಕ್ಕೆ ಅವರು ನೀಡಿದ ಆದ್ಯತೆಯು ಸಮಾನ ಅವಕಾಶಗಳ ಕುರಿತ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಜವಾಹರಲಾಲ್ ನೆಹರು ಅವರು 1889ರ ನವೆಂಬರ್ 14ರಂದು ಇಂದಿನ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರು, 1947ರ ಆಗಸ್ಟ್ 15ರಂದು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದರು. 1964ರ ಮೇ 27ರಂದು ನಿಧನರಾಗುವವರೆಗೂ ಅವರು ಈ ಹುದ್ದೆಯಲ್ಲಿದ್ದರು.
ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದಾಗಿ ನೆಹರು ಅವರನ್ನು ಪ್ರೀತಿಯಿಂದ 'ಚಾಚಾ ನೆಹರು' ಎಂದು ಕರೆಯಲಾಗುತ್ತಿತ್ತು. ಅವರ ನಿಧನದ ಬಳಿಕ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಭಾರತ ನಿರ್ಧರಿಸಿತು. ಇದನ್ನು 'ಬಾಲ ದಿವಸ್' ಎಂದೂ ಕರೆಯಲಾಗುತ್ತದೆ. ವಿಶ್ವಸಂಸ್ಥೆಯು ನವೆಂಬರ್ 20ರಂದು ವಿಶ್ವ ಮಕ್ಕಳ ದಿನವನ್ನು ಆಚರಿಸುತ್ತದೆ.
ಭಾರತದಾದ್ಯಂತ ಶಾಲೆಗಳಲ್ಲಿ ನವೆಂಬರ್ 14ರಂದು ಮಕ್ಕಳಿಗಾಗಿ ಕ್ರೀಡೆಗಳು, ಸ್ಪರ್ಧೆಗಳು ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸರ್ಕಾರಿ ಸಂಸ್ಥೆಗಳೂ ನೆಹರು ಅವರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.