ಬ್ಯಾಟ್, ಬಾಲ್ ಕುಲ್ಹಡ್ ಚಹಾ: ಮುಂಬೈನಲ್ಲಿ ಸಚಿನ್ ತೆಂಡೂಲ್ಕರ್ ಜೊತೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಬ್ರಿಟನ್ ರಾಜಕುಮಾರ ದಂಪತಿ ಭಾರತ ಪ್ರವಾಸ ಆರಂಭ; Video

ರಾಜಮನೆತನ ದಂಪತಿ ತಮ್ಮ ಪ್ರವಾಸವನ್ನು ಮುಂಬೈಯಿಂದ ಆರಂಭಿಸಿದ್ದು,ನಾಳೆ ಮಂಗಳವಾರ ನಡೆಯಲಿರುವ 'ಅರ್ಥ್‌ಶಾಟ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
Britain prince in Mumbai
ಮುಂಬೈಯಲ್ಲಿ ಸಚಿನ್ ತೆಂಡೂಲ್ಕರ್ ಜೊತೆ
Updated on: 

ಮುಂಬೈ: ಬ್ರಿಟನ್‌ ರಾಜಕುಮಾರ ವಿಲಿಯಂ ಮತ್ತು ರಾಜಕುಮಾರಿ ಕ್ಯಾಥರೀನ್ ಇಂದು ಸೋಮವಾರ ಮೂರು ದಿನಗಳ ಪ್ರವಾಸಕ್ಕಾಗಿ ಭಾರತದ ಮುಂಬೈಗೆ ಆಗಮಿಸಿದ್ದಾರೆ. 2024ರಲ್ಲಿ ಕ್ಯಾಥರೀನ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ಬಳಿಕ ದಂಪತಿ ಒಟ್ಟಾಗಿ ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸ ಇದಾಗಿದೆ.

ರಾಜಮನೆತನ ದಂಪತಿ ತಮ್ಮ ಪ್ರವಾಸವನ್ನು ಮುಂಬೈಯಿಂದ ಆರಂಭಿಸಿದ್ದು,ನಾಳೆ ಮಂಗಳವಾರ ನಡೆಯಲಿರುವ 'ಅರ್ಥ್‌ಶಾಟ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ವಿಲಿಯಂ ಸ್ಥಾಪಿಸಿರುವ ಈ ಪರಿಸರ ಉಪಕ್ರಮದಡಿ, ಹವಾಮಾನ ಬದಲಾವಣೆಯನ್ನು ಎದುರಿಸುವ ಪರಿಹಾರಗಳನ್ನು ವಿಸ್ತರಿಸಲು ಐವರು ವಿಜೇತರಿಗೆ ತಲಾ 1.3 ಮಿಲಿಯನ್ ಡಾಲರ್ (10 ಲಕ್ಷ ಪೌಂಡ್) ಬಹುಮಾನ ನೀಡಲಾಗುತ್ತದೆ.

ಸಾಂಪ್ರದಾಯಿಕ ಡೋಲು-ತಾಷಾ ವಾದ್ಯಗಳೊಂದಿಗೆ ರಾಜ ದಂಪತಿಯನ್ನು ಸ್ವಾಗತಿಸಲಾಯಿತು. ಬಳಿಕ ಬೃಹತ್ ಆಲದ ಮರದ ಕೆಳಗಿದ್ದ ಚಹಾ ಅಂಗಡಿಯಲ್ಲಿ ಮಣ್ಣಿನ ಕುಲ್ಹಡ್‌ಗಳಲ್ಲಿ (ಮಣ್ಣಿನ ಲೋಟ) ನೀಡಲಾದ 'ಕಟಿಂಗ್ ಚಾಯ್' (ಅರ್ಧ ಲೋಟ ಚಹಾ) ಸವಿದರು.

ಈ ಕಾರ್ಯಕ್ರಮದ ವಿವರಗಳನ್ನು ಅತ್ಯಂತ ಗೌಪ್ಯವಾಗಿಡಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಭೇಟಿ ನೀಡಲಿರುವ ಗಣ್ಯರು ಯಾರೆಂಬ ಬಗ್ಗೆಯೂ ಮಾಹಿತಿ ಇರಲಿಲ್ಲ.

2020ರಲ್ಲಿ ಪ್ರಶಸ್ತಿ ಸ್ಥಾಪನೆಯಾದ ಬಳಿಕ ನಡೆಯುತ್ತಿರುವ ಅತಿದೊಡ್ಡ ಸಮಾರಂಭ ಇದಾಗುವ ನಿರೀಕ್ಷೆಯಿದೆ. ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ನಟಿ ಆಲಿಯಾ ಭಟ್, ನಟ ರಾಮಿ ಮಲೇಕ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬ್ರಿಟನ್‌ನ ಜನಪ್ರಿಯ ಪಾಪ್ ಸಂಗೀತ ತಂಡ 'ಟೇಕ್ ದಟ್' ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶನ ನೀಡಲಿದೆ.

ಕಳೆದ ಆರು ವರ್ಷಗಳಲ್ಲಿ ಅರ್ಥ್‌ಶಾಟ್ ಉಪಕ್ರಮಕ್ಕೆ ಭಾರತ ಅಸಾಧಾರಣ ಕೊಡುಗೆ ನೀಡಿದೆ. ಇತರ ಯಾವುದೇ ದೇಶಕ್ಕಿಂತ ಹೆಚ್ಚಿನ ಅರ್ಥ್‌ಶಾಟ್ ಅಂತಿಮ ಸುತ್ತಿನ ಸ್ಪರ್ಧಿಗಳು ಮತ್ತು ವಿಜೇತರನ್ನು ಭಾರತ ಹೊಂದಿದೆ ಎಂದು ವಿಲಿಯಂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದ ಕ್ರಿಕೆಟ್, ಫ್ಯಾಷನ್ ಮತ್ತು ಚಲನಚಿತ್ರ ಕ್ಷೇತ್ರಗಳನ್ನು ಬಿಂಬಿಸುವ ಕಾರ್ಯಕ್ರಮಗಳಲ್ಲೂ ರಾಜ ದಂಪತಿ ಭಾಗವಹಿಸಲಿದ್ದಾರೆ. ಬಳಿಕ ನವದೆಹಲಿಗೆ ತೆರಳಲಿದ್ದು, ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿದೆ.

ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಲಿಯಂ ಮತ್ತು ಕ್ಯಾಥರೀನ್ ಅವರು ಮೋದಿ ಅವರನ್ನು ಭೇಟಿಯಾಗಿದ್ದರು. ಆಗ ವಿಲಿಯಂ, ರಾಜ ಮೂರನೇ ಚಾರ್ಲ್ಸ್ ಅವರ ಹಿರಿಯ ಪುತ್ರನಾಗಿದ್ದರೂ, ಬ್ರಿಟನ್ ಸಿಂಹಾಸನದ ಉತ್ತರಾಧಿಕಾರಿಯಾಗಿರಲಿಲ್ಲ.

ಕ್ಯಾಥರೀನ್ ಅವರ ಪಾಲಿಗೆ ಈ ಪ್ರವಾಸ ವಿದೇಶಗಳಲ್ಲಿ ರಾಜಮನೆತನದ ಅಧಿಕೃತ ಕಾರ್ಯಕ್ರಮಗಳಿಗೆ ಮರಳುವ ಮಹತ್ವದ ಸಂದರ್ಭವಾಗಿದೆ. 2024ರ ಮಾರ್ಚ್‌ನಲ್ಲಿ ಹೊಟ್ಟೆಯ ಶಸ್ತ್ರಚಿಕಿತ್ಸೆ ಬಳಿಕ ತಾವು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರು ಪ್ರಕಟಿಸಿದ್ದರು. ಸಾಮಾನ್ಯವಾಗಿ ಕೇಟ್ ಎಂದು ಕರೆಯಲ್ಪಡುವ ಕ್ಯಾಥರೀನ್, ಕಳೆದ ಜನವರಿಯಲ್ಲಿ ತಾವು ಕ್ಯಾನ್ಸರ್‌ನಿಂದ ಚೇತರಿಕೆಯ ಹಂತದಲ್ಲಿದ್ದು, ಕಾಯಿಲೆ ಉಪಶಮನಗೊಂಡಿದೆ ಎಂದು ತಿಳಿಸಿದ್ದರು. ಬಳಿಕ ಹಂತ ಹಂತವಾಗಿ ಸಾರ್ವಜನಿಕ ಕರ್ತವ್ಯಗಳಿಗೆ ಮರಳಿದ್ದಾರೆ.

ಇದಕ್ಕೂ ಮೊದಲು, ಮೇ ತಿಂಗಳಲ್ಲಿ ಒಬ್ಬರೇ ಇಟಲಿಗೆ ಭೇಟಿ ನೀಡಿದ್ದ ಅವರು, ಕ್ಯಾನ್ಸರ್ ಪತ್ತೆಯಾದ ಬಳಿಕ ಕೈಗೊಂಡ ಮೊದಲ ವಿದೇಶಿ ಅಧಿಕೃತ ಪ್ರವಾಸ ಅದಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X