ಹಿಂದೂಗಳ ಒಗ್ಗಟ್ಟು ಮುಖ್ಯ, ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆ ಕೇಳುತ್ತೇನೆ: ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ; ಆಗಿದ್ದೇನು?

ಹಿಂದೂಗಳ ನಡುವೆ ಒಡಕು ಉಂಟಾಗುವುದನ್ನು ತಡೆಯಲು ಮತ್ತು ಸಾಮಾಜಿಕ ಐಕ್ಯತೆಯನ್ನು ಕಾಪಾಡಿಕೊಳ್ಳಲು, ತಾನು ಇತ್ತೀಚೆಗೆ ನೀಡಿದ ವಿವಾದಾತ್ಮಕ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಿರುವುದಾಗಿ ಅವರು ತಿಳಿಸಿದರು.
Dhirendra Shastri
ಧೀರೇಂದ್ರ ಶಾಸ್ತ್ರಿonline desk
Updated on: 

ಸನಾತನ ಧರ್ಮಕ್ಕೆ ಬಾಹ್ಯ ಶಕ್ತಿಗಳಿಗಿಂತ ಹೆಚ್ಚಾಗಿ ಹಿಂದೂ ಸಮಾಜದೊಳಗಿನ "ದೋಷಪೂರಿತ ಅಂಶಗಳಿಂದ" (tainted elements) ಹೆಚ್ಚಿನ ಅಪಾಯವಿದೆ ಎಂದು ಬಾಗೇಶ್ವರ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ ಹೇಳಿದ್ದಾರೆ.

ಹಿಂದೂಗಳ ನಡುವೆ ಒಡಕು ಉಂಟಾಗುವುದನ್ನು ತಡೆಯಲು ಮತ್ತು ಸಾಮಾಜಿಕ ಐಕ್ಯತೆಯನ್ನು ಕಾಪಾಡಿಕೊಳ್ಳಲು, ತಾನು ಇತ್ತೀಚೆಗೆ ನೀಡಿದ ವಿವಾದಾತ್ಮಕ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಿರುವುದಾಗಿ ಅವರು ತಿಳಿಸಿದರು.

ಮಧ್ಯಪ್ರದೇಶದಲ್ಲಿ ನಡೆದ ಧಾರ್ಮಿಕ ಪ್ರವಚನವೊಂದರಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣರನ್ನು ಹೋಲಿಸಿ ಮಾತನಾಡಿದ್ದರಿಂದ ಶಾಸ್ತ್ರಿ ಅವರು ಇತ್ತೀಚೆಗೆ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. ನಂತರ, ತಾನು ಯಾವುದೇ ದೇವರಿಗೆ ಅವಮಾನ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಹೇಳಿ ಅವರು ಕ್ಷಮೆಯಾಚಿಸಿದರು.

ಈ ವಿವಾದದ ಹಿನ್ನೆಲೆಯಲ್ಲಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ಶಾಸ್ತ್ರಿ ಅವರ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು ಮತ್ತು ಉತ್ತರ ಪ್ರದೇಶದಲ್ಲಿ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಂತೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು. 2027ರ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವಾಗ, ಶಾಸ್ತ್ರಿ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪ್ರತಾಪಗಢದ ಕುಂಡಾ ಪ್ರದೇಶದ 'ಬೇಟಿ' ಎಂಬಲ್ಲಿ ನಡೆದ 'ರಾಮ ಕಥಾ' ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ನಂತರ, ಮಂಗಳವಾರ ಸಂಜೆ ಸ್ಥಳೀಯ ವರದಿಗಾರರೊಂದಿಗೆ ಮಾತನಾಡಿದ ಶಾಸ್ತ್ರಿ, ಹಿಂದೂಗಳು ಪರಸ್ಪರ ಜಗಳವಾಡಬಾರದು ಎಂಬ ಉದ್ದೇಶದಿಂದಲೇ ತಾನು ಕ್ಷಮೆಯಾಚಿಸಿರುವುದಾಗಿ ಹೇಳಿದರು.

ತಮ್ಮ ನಿಲುವನ್ನು ವಿವರಿಸಿದ ಅವರು, ಪ್ರಾಚೀನ ಕಾಲದಲ್ಲಿ ರಾಕ್ಷಸರು ಮತ್ತು ದುಷ್ಟ ಶಕ್ತಿಗಳು ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿಪಡಿಸುತ್ತಿದ್ದರೆ, ಇಂದಿನ ದಿನಗಳಲ್ಲಿ ಅಂತಹ ಚಟುವಟಿಕೆಗಳನ್ನು ವಿರೋಧಿಸುವವರು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಮೂಲಕ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

Dhirendra Shastri
'ಶ್ರೀಕೃಷ್ಣ ವಕ್ರವಾಗಿದ್ದಾನೆ, ಶ್ರೀರಾಮನಿಗೆ ಹೋಲಿಸಿದರೆ ನಿಲ್ಲುವ ಭಂಗಿಯೇ ಸರಿಯಿಲ್ಲ' ಎಂದಿದ್ದ ಧೀರೇಂದ್ರ ಶಾಸ್ತ್ರಿ ವಿರುದ್ಧ ಪ್ರಕರಣ ದಾಖಲು

"ಕಾಲ ಮತ್ತು ಮಾಧ್ಯಮಗಳು ಬದಲಾಗಿವೆ," ಎಂದು ಅವರು ನುಡಿದರು. 'ರಾಮ ರಾಜ್ಯ'ದ ನಿಜವಾದ ಅರ್ಥವೆಂದರೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ, ಗೌರವ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದು ಎಂದು ಶಾಸ್ತ್ರಿ ಹೇಳಿದರು.

ಭಕ್ತರು ತಮ್ಮ ದೈನಂದಿನ ಜೀವನದಲ್ಲಿ ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು ಹಾಗೂ ಧಾರ್ಮಿಕ ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ಬದ್ಧರಾಗಿರಬೇಕು ಎಂದು ಅವರು ಕರೆ ನೀಡಿದರು.

ತಮ್ಮ ವಿರುದ್ಧ ಬೆದರಿಕೆಗಳು, ವಿರೋಧಗಳು ಅಥವಾ ಒತ್ತಡಗಳು ಏನೇ ಇದ್ದರೂ, "ಸನಾತನ ಧರ್ಮ ಮತ್ತು ಹಿಂದೂ ಸಮಾಜವನ್ನು ಬಲಪಡಿಸುವ ತಮ್ಮ ಅಭಿಯಾನ"ವು ತಾವು ಬದುಕಿರುವವರೆಗೂ ಮುಂದುವರಿಯುತ್ತದೆ ಎಂದು ಅವರು ದೃಢವಾಗಿ ಹೇಳಿದರು.

"ನನ್ನ ಮೇಲೆ ಗುಂಡು ಹಾರಿಸಿದರೂ ಸಹ, ಸನಾತನ ಧರ್ಮವನ್ನು ಪ್ರಸಾರ ಮಾಡುವ ಈ ಅಭಿಯಾನ ನಿಲ್ಲುವುದಿಲ್ಲ," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X