ಮಣಿಪುರಕ್ಕೆ RSS ಮುಖ್ಯಸ್ಥ ಭಾಗವತ್ ಭೇಟಿಯಿಂದ ಪ್ರಯೋಜನವೇನು? ಶಾಂತಿ ಸ್ಥಾಪನೆಗೆ ಕೊಡುಗೆ ಏನು..?: ಕಾಂಗ್ರೆಸ್ ಪ್ರಶ್ನೆ

ಮಣಿಪುರಕ್ಕೆ ಶಾಂತಿ ಬೇಕೇ ಹೊರತು ಕೇವಲ ಸಂಘಟನಾತ್ಮಕ ಸಭೆಗಳಲ್ಲ. ನವೆಂಬರ್ 18ರಿಂದ 20ರವರೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಣಿಪುರಕ್ಕೆ ಭೇಟಿ ನೀಡುತ್ತಿರುವುದು ರಾಜ್ಯದಲ್ಲಿ ಮುಂದುವರಿದಿರುವ ಬಿಕ್ಕಟ್ಟಿನ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Mohan Bhagwat
ಮೋಹನ್ ಭಾಗವತ್
Updated on: 

ಇಂಫಾಲ: ಸಂಘರ್ಷಪೀಡಿತ ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭೇಟಿ ಕೊಡುಗೆ ಏನು ಎಂದು ಕಾಂಗ್ರೆಸ್ ಗುರುವಾರ ಪ್ರಶ್ನೆ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮಣಿಪುರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಕೀಶಮ್ ಮೇಘಚಂದ್ರ ಸಿಂಗ್ ಅವರು, ರಾಜ್ಯಕ್ಕೆ ಮತ್ತೊಂದು ಸುತ್ತಿನ ಭರವಸೆಗಳ ಅಗತ್ಯವಿಲ್ಲ. ಬದಲಾಗಿ ಶಾಶ್ವತ ಶಾಂತಿ, ಭದ್ರತೆ, ಸಂತ್ರಸ್ತರ ಪುನರ್ವಸತಿ, ಹೊಣೆಗಾರಿಕೆ ನಿಗದಿ ಹಾಗೂ ವಿಶ್ವಾಸಾರ್ಹ ರಾಜಕೀಯ ಕಾರ್ಯಯೋಜನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಮಣಿಪುರಕ್ಕೆ ಶಾಂತಿ ಬೇಕೇ ಹೊರತು ಕೇವಲ ಸಂಘಟನಾತ್ಮಕ ಸಭೆಗಳಲ್ಲ. ನವೆಂಬರ್ 18ರಿಂದ 20ರವರೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಣಿಪುರಕ್ಕೆ ಭೇಟಿ ನೀಡುತ್ತಿರುವುದು ರಾಜ್ಯದಲ್ಲಿ ಮುಂದುವರಿದಿರುವ ಬಿಕ್ಕಟ್ಟಿನ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಣಿಪುರ ದೀರ್ಘಕಾಲದಿಂದ ಜನಾಂಗೀಯ ಸಂಘರ್ಷವನ್ನು ಎದುರಿಸುತ್ತಿದೆ. ಈ ಹಿಂಸಾಚಾರದಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕುಟುಂಬಗಳು ಮನೆ ತೊರೆದಿದ್ದು, ಮನೆಗಳು ಮತ್ತು ಜೀವನೋಪಾಯದ ಮೂಲಗಳು ನಾಶವಾಗಿವೆ. ವಿವಿಧ ಸಮುದಾಯಗಳ ನಡುವಿನ ಅಂತರವೂ ಹೆಚ್ಚಾಗಿದೆ.

ಮಣಿಪುರದಲ್ಲಿ ಶಾಶ್ವತ ಶಾಂತಿ ಮರುಸ್ಥಾಪಿಸಲು ಭಾಗವತ್ ಅವರ ಭೇಟಿ ಯಾವ ರೀತಿಯ ಸ್ಪಷ್ಟ ಕೊಡುಗೆ ನೀಡಲಿದೆ? ಹಿಂಸಾಚಾರದಿಂದ ಸಂತ್ರಸ್ತರಾದ ಸಮುದಾಯಗಳು ಹಾಗೂ ಸ್ಥಳಾಂತರಗೊಂಡ ಕುಟುಂಬಗಳೊಂದಿಗೆ ಆರ್‌ಎಸ್‌ಎಸ್ ನಾಯಕತ್ವ ನೇರವಾಗಿ ಮಾತುಕತೆ ನಡೆಸಲಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮೈತೇಯಿ, ಕುಕಿ-ಜೋ ಮತ್ತು ನಾಗಾ ಸಮುದಾಯಗಳ ನಡುವೆ ವಿಶ್ವಾಸ ಮರುನಿರ್ಮಾಣ ಹಾಗೂ ಸೌಹಾರ್ದತೆ ಬೆಳೆಸಲು ಯಾವುದೇ ನಿರ್ದಿಷ್ಟ ಕಾರ್ಯಯೋಜನೆ ರೂಪಿಸಲಾಗಿದೆಯೇ ಎಂಬುದನ್ನೂ ಸಿಂಗ್ ಪ್ರಶ್ನಿಸಿದ್ದಾರೆ.

Mohan Bhagwat
'ಅಪ್ಪನ ತೊಡೆ ಮೇಲೆ ಅಮ್ಮ' ಹೇಳಿಕೆ: BJP, RSS ಮನಸ್ಸಿನಲ್ಲಿ ದ್ವೇಷ; ಶಿವ-ಪಾರ್ವತಿ ಫೋಟೋ ಹಾಕಿ ರಾಹುಲ್ ತಿರುಗೇಟು!

ಭಾಗವತ್ ಅವರ ಭೇಟಿಯಿಂದ ಅಳೆಯಬಹುದಾದಂತಹ ಸ್ಪಷ್ಟ ಫಲಿತಾಂಶಗಳನ್ನು ನಿರೀಕ್ಷಿಸಬಹುದೇ ಎಂದು ಕೇಳಿದ್ದಾರೆ.

ದೀರ್ಘಕಾಲದಿಂದ ಮುಂದುವರಿದಿರುವ ಈ ಬಿಕ್ಕಟ್ಟಿಗೆ ಬಿಜೆಪಿ ನೇತೃತ್ವದ ರಾಜಕೀಯ ವ್ಯವಸ್ಥೆಯ ಹೊಣೆಗಾರಿಕೆಯನ್ನು ಆರ್‌ಎಸ್‌ಎಸ್ ನಾಯಕತ್ವ ಪ್ರಶ್ನಿಸಲಿದೆಯೇ? ಎಂದು ಕಾಂಗ್ರೆಸ್ ಶಾಸಕ ಪ್ರಶ್ನಿಸಿದ್ದಾರೆ.

ಸಂಘಟನಾತ್ಮಕ ಚಟುವಟಿಕೆಗಳ ಪರಿಶೀಲನೆ ಮತ್ತು ಶತಮಾನೋತ್ಸವ ಆಚರಣೆಗಳು ಆರ್‌ಎಸ್‌ಎಸ್‌ನ ಆಂತರಿಕ ಕಾರ್ಯಸೂಚಿಯ ಭಾಗವಾಗಿರಬಹುದು. ಆದರೆ ಮಣಿಪುರದ ಜನರ ಸಂಕಷ್ಟವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಣಿಪುರಕ್ಕೆ ಮತ್ತೊಂದು ಸುತ್ತಿನ ಭರವಸೆಗಳು ಬೇಕಾಗಿಲ್ಲ. ಶಾಶ್ವತ ಶಾಂತಿ, ಭದ್ರತೆ, ಪುನರ್ವಸತಿ, ಹೊಣೆಗಾರಿಕೆ ನಿಗದಿ ಮತ್ತು ವಿಶ್ವಾಸಾರ್ಹ ರಾಜಕೀಯ ಕಾರ್ಯಯೋಜನೆ ಬೇಕಾಗಿದೆ. ಸಾವಿರಾರು ಕುಟುಂಬಗಳು ಇನ್ನೂ ನಿರಾಶ್ರಿತರ ಶಿಬಿರಗಳಲ್ಲಿ ಉಳಿದಿರುವಾಗ, ಮನೆಗಳು ಖಾಲಿಯಾಗಿರುವಾಗ, ಜೀವನೋಪಾಯ ನಾಶವಾಗಿರುವಾಗ ಮತ್ತು ಸಮುದಾಯಗಳು ಭಯ ಹಾಗೂ ಅನಿಶ್ಚಿತತೆಯಲ್ಲಿ ಬದುಕುತ್ತಿರುವಾಗ ಜನರು ಅನಿರ್ದಿಷ್ಟಾವಧಿವರೆಗೆ ಕಾಯಬೇಕು ಎಂದು ನಿರೀಕ್ಷಿಸಲಾಗದು ಎಂದು ತಿಳಿಸಿದ್ದಾರೆ.

ಬಿಜೆಪಿ ಆಡಳಿತ ವ್ಯವಸ್ಥೆಯ ಮೇಲೆ ಆರ್‌ಎಸ್‌ಎಸ್ ನಾಯಕತ್ವಕ್ಕೆ ಪ್ರಭಾವವಿದ್ದರೆ, ಆ ಪ್ರಭಾವವನ್ನು ಶಾಂತಿ, ಸಾಮರಸ್ಯ ಮತ್ತು ಸಹಜ ಸ್ಥಿತಿಯ ಮರುಸ್ಥಾಪನೆಗಾಗಿ ಅರ್ಥಪೂರ್ಣ ಹಾಗೂ ನಿರ್ಣಾಯಕ ಕ್ರಮಗಳಾಗಿ ಪರಿವರ್ತಿಸಬೇಕು ಎಂದು ಮಣಿಪುರದ ಜನರು ನಿರೀಕ್ಷಿಸುವ ಹಕ್ಕು ಹೊಂದಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಹೇಳಿದೆ.

ಮೂರು ದಿನಗಳ ಭೇಟಿಗಾಗಿ ಮೋಹನ್ ಭಾಗವತ್ ಬುಧವಾರ ಮಧ್ಯಾಹ್ನ ಇಂಪಾಲ್‌ಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಆರ್‌ಎಸ್‌ಎಸ್‌ನ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಪ್ರಗತಿಯನ್ನು ಅವರು ಪರಿಶೀಲಿಸಲಿದ್ದಾರೆ. ಅಲ್ಲದೆ, ಸಂಘಟನೆಯ ಶತಮಾನೋತ್ಸವ ಆಚರಣೆಯ ಭಾಗವಾಗಿ ರಾಜ್ಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆಯೂ ಅವಲೋಕನ ನಡೆಸಲಿದ್ದಾರೆ ಎಂದು ಆರ್‌ಎಸ್‌ಎಸ್‌ನ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

2023ರ ಮೇ ತಿಂಗಳಲ್ಲಿ ಕಣಿವೆ ಪ್ರದೇಶದ ಮೈತೇಯಿ ಮತ್ತು ಗುಡ್ಡಗಾಡು ಪ್ರದೇಶದ ಕುಕಿ ಸಮುದಾಯಗಳ ನಡುವೆ ಆರಂಭವಾದ ಜನಾಂಗೀಯ ಸಂಘರ್ಷದಲ್ಲಿ ಈವರೆಗೆ ಕನಿಷ್ಠ 306 ಮಂದಿ ಮೃತಪಟ್ಟಿದ್ದಾರೆ. 49 ಮಂದಿ ನಾಪತ್ತೆಯಾಗಿದ್ದು, ಸಾವಿರಾರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇದೇ ವರ್ಷ ಫೆಬ್ರವರಿಯಿಂದ ಗುಡ್ಡಗಾಡು ಜಿಲ್ಲೆಗಳಲ್ಲಿ ಕುಕಿ ಮತ್ತು ನಾಗಾ ಸಮುದಾಯಗಳ ನಡುವಿನ ಘರ್ಷಣೆಗಳಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X