

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು "ಕಾಂಪ್ರಮೈಸ್ಡ್ ಪಿಎಂ" (Compromised PM) ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆದಿರುವುದಕ್ಕೆ ಭಾರತೀಯ ಜನತಾ ಪಕ್ಷ (BJP) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಭಾರತದ ಪ್ರಧಾನಿಯೂ ಸಭೆಯ ಮೇಜಿನ ಬಳಿ ಕುಳಿತಿರುತ್ತಿದ್ದರು ಎಂದು ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದರು.
ಮೂವರು ನಾಯಕರು ಸಭೆಯಲ್ಲಿ ಭಾಗವಹಿಸಿರುವ ಚಿತ್ರವನ್ನು ಹಂಚಿಕೊಂಡಿದ್ದ ಅವರು, “ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಭಾರತದ ಪ್ರಧಾನಿಯೂ ಈ ಮೇಜಿನ ಬಳಿ ಕುಳಿತಿರುತ್ತಿದ್ದರು. ರಾಜಿ ಮಾಡಿಕೊಂಡಿರುವ ಪ್ರಧಾನಿಯೊಬ್ಬರು ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಟೀಕಿಸಿದ್ದರು.
ರಾಹುಲ್ ಅವರ ಈ ಪೋಸ್ಟ್‌ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರವೇ ಭಾರತದ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿತ್ತು ಎಂದು ಆರೋಪಿಸಿದೆ.
ಖಾಸಗಿ ವಾಹನಿಯೊಂದರಲ್ಲಿ ಮಾತನಾಡಿರುವ ಬಿಜೆಪಿ ವಕ್ತಾರ ತುಹಿನ್ ಸಿನ್ಹಾ ಅವರು, ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿದ್ದ ವಿಚಾರ ಹಾಗೂ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನಡೆದ ಶರ್ಮ್ ಎಲ್ ಶೇಖ್ ಜಂಟಿ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧದ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ.
ಶಿಮ್ಲಾ ಒಪ್ಪಂದದ ಸಂದರ್ಭದಲ್ಲಿ ಇಂದಿರಾ ಗಾಂಧಿ ರಾಜಿ ಮಾಡಿಕೊಂಡಿದ್ದರು. ಪಾಕಿಸ್ತಾನದ ಸೈನಿಕರನ್ನು ಬಿಡುಗಡೆ ಮಾಡಿದರು. ಆ ಬಳಿಕ ಪಾಕಿಸ್ತಾನ ಭಾರತದ ವಿರುದ್ಧ ಭಯೋತ್ಪಾದನೆಯನ್ನು ರಫ್ತು ಮಾಡಿತು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯ ಶರ್ಮ್ ಎಲ್ ಶೇಖ್ ಜಂಟಿ ಹೇಳಿಕೆಯನ್ನೂ ಉಲ್ಲೇಖಿಸಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ರಾಜಿ ಮಾಡಿಕೊಳ್ಳುವ ಇತಿಹಾಸವಿದೆ ಎಂದು ಆರೋಪಿಸಿದ್ದಾರೆ.
ಬಳಿಕ ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ನಡುವಿನ ತಿಳಿವಳಿಕೆ ಒಪ್ಪಂದವನ್ನೂ ಪ್ರಸ್ತಾಪಿಸಿದ್ದಾರೆ.
ಅಧಿಕಾರದಲ್ಲಿ ಇಲ್ಲದಿದ್ದಾಗ ಕಾಂಗ್ರೆಸ್ ಹೇಗೆ ವರ್ತಿಸುತ್ತದೆ ಎಂಬುದಕ್ಕೆ 2008ರ ಆಗಸ್ಟ್ 7ರಂದು ಬೀಜಿಂಗ್‌ನಲ್ಲಿ ಕಾಂಗ್ರೆಸ್ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ನಡುವೆ ನಡೆದ ರಹಸ್ಯ ತಿಳಿವಳಿಕೆ ಒಪ್ಪಂದವೇ ಸಾಕ್ಷಿ. ಆ ಬಳಿಕ ಚೀನಾದ ಅತಿಕ್ರಮಣಗಳು ಗಣನೀಯವಾಗಿ ಹೆಚ್ಚಾದವು. ಇದರ ಜತೆಗೆ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾದಿಂದ ದೇಣಿಗೆಗಳೂ ಬಂದವು.
ಶರ್ಮ್ ಎಲ್ ಶೇಖ್‌ನಲ್ಲಿನ ಘಟನೆಗಳನ್ನು ಮರೆಯಲು ಸಾಧ್ಯವೇ? 2011ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಶರ್ಮ್ ಎಲ್ ಶೇಖ್‌ನಲ್ಲಿ ಭೇಟಿಯಾಗಿದ್ದರು. 2004ರಿಂದ 2014ರವರೆಗಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚು ರಾಜಿ ಮಾಡಿಕೊಂಡ ಸರ್ಕಾರವನ್ನು ಭಾರತ ಕಂಡಿದೆಯೇ? ಎಂದು ಪ್ರಶ್ನಿಸಿದ್ದಾರೆ.
“ಭಾರತದ ವಿರುದ್ಧ ಅಪಪ್ರಚಾರ ಮಾಡಲು ರಾಹುಲ್ ಗಾಂಧಿ ಹಣ ಪಡೆಯುತ್ತಿದ್ದಾರೆ ಎನಿಸುತ್ತದೆ” ಎಂದೂ ಸಿನ್ಹಾ ಆರೋಪಿಸಿದ್ದಾರೆ.
ಬಿಜೆಪಿ ವಕ್ತಾರ ಆರ್.ಪಿ. ಸಿಂಗ್ ಕೂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತದ ಬಗ್ಗೆ ನಕಾರಾತ್ಮಕ ನಿರೂಪಣೆಯನ್ನು ಜಾಗತಿಕ ವೇದಿಕೆಗಳಲ್ಲಿ ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಜಾಗತಿಕ ವ್ಯವಸ್ಥೆಯಲ್ಲಿ ಭಾರತ ಗೌರವಯುತ ಸ್ಥಾನ ಹೊಂದಿದೆ. ಪ್ರಧಾನಿ ಮೋದಿ ಅವರು ವಿಶ್ವದ ವಿವಿಧ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ನಾಯಕ ಎಂದು ಗುರುತಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಭಾರತದ ವಿದೇಶಾಂಗ ನೀತಿ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳಿಗೂ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಜಾಗತಿಕ ರಾಜಕೀಯದಲ್ಲಿ ಭಾರತವು ಕೇವಲ ಅಂಚಿನ ಪಾತ್ರ ವಹಿಸುತ್ತಿದೆ ಎಂದು ರಾಹುಲ್ ಹೇಳಿದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರ ಆರಂಭವಾಗಿತ್ತು. ಅಮೆರಿಕ ಮತ್ತು ಇರಾನ್‌ನಂತಹ ಪ್ರಮುಖ ರಾಷ್ಟ್ರಗಳೊಂದಿಗೆ ಪಾಕಿಸ್ತಾನ ಮಾತುಕತೆ ನಡೆಸುತ್ತಿರುವಾಗ, ಭಾರತವು ಸ್ವತಂತ್ರವಾಗಿ ಅಂತಾರಾಷ್ಟ್ರೀಯ ಚರ್ಚೆಗಳನ್ನು ರೂಪಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ ಎಂದು ವಾದಿಸಿದ್ದರು.
ಅಮೆರಿಕದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಭಾರತವು ಹಿಂದಿನಿಂದಲೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತಾ ಬಂದಿದೆ. ವಿವಿಧ ದೇಶಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಸಂಬಂಧಗಳನ್ನು ಹೊಂದಿದ್ದರೂ, ಜಾಗತಿಕ ಬೆಳವಣಿಗೆಗಳ ಕುರಿತು ತನ್ನದೇ ಆದ ನಿಲುವು ಹೊಂದಿತ್ತು ಎಂದು ಹೇಳಿದ್ದರು.
ಭಾರತವು ಯಾವಾಗಲೂ ಭೌಗೋಳಿಕ ರಾಜಕೀಯದ ಬಗ್ಗೆ ಅತ್ಯಂತ ಸೂಕ್ಷ್ಮವಾದ ತಿಳಿವಳಿಕೆಯನ್ನು ಹೊಂದಿತ್ತು. ನಮಗೆ ಪಾಲುದಾರಿಕೆಗಳಿದ್ದವು, ಸಂಬಂಧಗಳಿದ್ದವು. ಆದರೆ, ನಮ್ಮದೇ ಆದ ಸ್ವತಂತ್ರ ನಿಲುವು ಇತ್ತು. ಭಾರತದ ಗಾತ್ರ ಮತ್ತು ಪ್ರಭಾವದ ಆಧಾರದಲ್ಲಿ ಜಾಗತಿಕ ಮಟ್ಟದಲ್ಲಿ ಸಹಜವಾಗಿಯೇ ತನ್ನದೇ ಆದ ಧ್ವನಿಯನ್ನು ಹೊಂದಿದೆ. ಜಾಗತಿಕ ಚರ್ಚೆಗಳಲ್ಲಿ ಭಾರತ ಸಕ್ರಿಯವಾಗಿ ಭಾಗವಹಿಸಬೇಕು. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಭಾರತ ಈಗ ಅಂಚಿನ ಪಾತ್ರಕ್ಕೆ ಸೀಮಿತವಾಗಿದೆ. ಪಾಕಿಸ್ತಾನ ಮಾತ್ರ ಇರಾನ್ ಮತ್ತು ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ರಾಹುಲ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ರಾಹುಲ್ ಗಾಂಧಿಯನ್ನು “ಪಾಕಿಸ್ತಾನದ ಅಭಿಮಾನಿ” ಎಂದು ಕರೆದಿತ್ತು.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ರಾಹುಲ್ ವಿರುದ್ಧ ಕಿಡಿಕಾರಿದ್ದರು. ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಪಾಕಿಸ್ತಾನವನ್ನೇ ಮಾದರಿಯಾಗಿ ಬಿಂಬಿಸಲು ರಾಹುಲ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ರಾಹುಲ್ ಗಾಂಧಿಗೆ ಪಾಕಿಸ್ತಾನದ ಬಗ್ಗೆ ಇಷ್ಟೊಂದು ಆಸಕ್ತಿ ಏಕೆ? ಪ್ರತಿಯೊಂದು ಜಾಗತಿಕ ವೇದಿಕೆಯಲ್ಲೂ ಅವರು ಪಾಕಿಸ್ತಾನದ ಅಭಿಮಾನಿಯಂತೆ ವರ್ತಿಸುತ್ತಾರೆ ಎಂದು ಟೀಕಿಸಿದ್ದರು.