'ಹಿಂದೆ ಬಡತನ ನಿರ್ಮೂಲನೆ ಬಗ್ಗೆ ಮಾತನಾಡಿದವರು ಕಡತ ಸಿದ್ದಪಡಿಸೋದು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ': ಪ್ರಧಾನಿ ಮೋದಿ; Video

ಕಳೆದ 12 ವರ್ಷಗಳಲ್ಲಿ ಆಲೋಚನೆ-ಚಿಂತನೆಗಳಲ್ಲಿನ ಮಿತಿಗಳನ್ನು ಮೀರುವ ಮೂಲಕ ದೇಶದ ಸಾಮರ್ಥ್ಯವನ್ನು ಅನಾವರಣಗೊಳಿಸಲು, ಅವಕಾಶಗಳನ್ನು ಸೃಷ್ಟಿಸಲು ಮತ್ತು ಬಡವರನ್ನು ಸಬಲೀಕರಣಗೊಳಿಸಲು ಭಾರತ ಹೇಗೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Narendra Modi
ನರೇಂದ್ರ ಮೋದಿ
Updated on: 

ಕಳೆದ 12 ವರ್ಷಗಳಲ್ಲಿ ಆಲೋಚನೆ-ಚಿಂತನೆಗಳಲ್ಲಿನ ಮಿತಿಗಳನ್ನು ಮೀರುವ ಮೂಲಕ ದೇಶದ ಸಾಮರ್ಥ್ಯವನ್ನು ಅನಾವರಣಗೊಳಿಸಲು, ಅವಕಾಶಗಳನ್ನು ಸೃಷ್ಟಿಸಲು ಮತ್ತು ಬಡವರನ್ನು ಸಬಲೀಕರಣಗೊಳಿಸಲು ಭಾರತ ಹೇಗೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೇಶದ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)ಐಐಟಿ, ಖರಗ್‌ ಪುರದ ವಜ್ರ ಮಹೋತ್ಸವ ಸಮಾರಂಭದಲ್ಲಿ ಇಂದು ಮಾತನಾಡಿದ ಮೋದಿ, ಇತಿಮಿತಿಗಳನ್ನು ಮೀರಿ ಸಾಧ್ಯತೆಗಳನ್ನು ಅನಾವರಣಗೊಳಿಸುವ ಸಂಕಲ್ಪವನ್ನು ಭಾರತ ಸ್ಪಷ್ಟವಾಗಿ ಮತ್ತು ದೃಢವಾಗಿ ಸಾರಿದೆ ಎಂದರು.

ದೇಶವು ತನ್ನ ಮಿತಿಗಳನ್ನು ಮೀರಿ ಸಾಧ್ಯತೆಗಳನ್ನು ಅನಾವರಣಗೊಳಿಸಿದಾಗ ಮಾತ್ರ ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಕಳೆದ 12 ವರ್ಷಗಳಲ್ಲಿ ತಮ್ಮ ನೇತೃತ್ವದ ಕೇಂದ್ರ ಸರ್ಕಾರವು ಇತಿಮಿತಿಗಳನ್ನು ಮೀರಿ ಬಡವರನ್ನು ಸಬಲೀಕರಣಗೊಳಿಸಲು ಕೆಲಸ ಮಾಡಿದೆ, ಹಿಂದೆ ಕೆಂಪುಕೋಟೆಯಿಂದ ಬಡತನ ನಿರ್ಮೂಲನೆ ಬಗ್ಗೆ ಮಾತನಾಡುತ್ತಿದ್ದರು. ಆದರೆ ಕಡತಗಳನ್ನು ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ನ್ನು ಟೀಕಿಸಿದರು.

ವಿಶ್ವ ಬ್ಯಾಂಕ್ ವರದಿಯನ್ನು ಉಲ್ಲೇಖಿಸಿದ ಮೋದಿ, ಕಳೆದ 12-13 ವರ್ಷಗಳಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಇದು ದೇಶದ ಧೋರಣೆ ಮತ್ತು ಚಿಂತನೆಯಲ್ಲಾದ ಬದಲಾವಣೆಯ ಫಲಿತಾಂಶ ಎಂದು ಬಣ್ಣಿಸಿದರು.

ಚಿಂತನೆಯ ಗಡಿಗಳನ್ನು ಮೀರುವಾಗ ಮಾತ್ರ ದೇಶ ತನ್ನ ಸಾಮರ್ಥ್ಯವನ್ನು ಕಂಡುಕೊಳ್ಳುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತ ಇದನ್ನೇ ಸಾಧಿಸಿ ತೋರಿಸಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳವು ವಿಚಾರಗಳಿಗೆ ಶಕ್ತಿ ದೊರೆತ ನಾಡು ಹಾಗೂ ರಾಷ್ಟ್ರೀಯ ಚಳವಳಿಗಳು ರೂಪುಗೊಂಡ ನೆಲವಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧನದಲ್ಲಿಡಲು ಬಳಸಿದ್ದ ಶಿಬಿರವಿದ್ದ ಸ್ಥಳದಲ್ಲೇ ಐಐಟಿ ಖಾರಗ್‌ಪುರ ಸ್ಥಾಪನೆಯಾಗಿದೆ ಎಂದು ಉಲ್ಲೇಖಿಸಿದ ಅವರು, ಆ ಸ್ಥಳದಲ್ಲಿ ಬಂಧಿತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಜೀವನ, ಚಿಂತನೆಗಳು ಮತ್ತು ಕಾರ್ಯಗಳಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯುವಂತೆ ಕರೆ ನೀಡಿದರು.

ಇಲ್ಲಿ ತಂಗಿದ್ದ ಸ್ವಾತಂತ್ರ್ಯ ಹೋರಾಟಗಾರರು ದಿನವಿಡೀ ಏನು ಮಾತನಾಡಿರಬಹುದು, ಏನು ಯೋಚಿಸಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ ಎಂದು ಸಂಸ್ಥೆಯ ವಿದ್ಯಾರ್ಥಿಗಳಿಗೆ ಹೇಳಿದ ಅವರು, ಅವರ ಆಲೋಚನೆಗಳು ಮತ್ತು ತ್ಯಾಗಗಳು ಇಂದಿಗೂ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಿವೆ, ಈ ಸಂಸ್ಥೆ 75 ವರ್ಷಗಳ ಪಯಣವನ್ನು ಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ ಎಂದರು.

Narendra Modi
'ನೀವು ನನ್ನ ನಿಜವಾದ ಸ್ನೇಹಿತರು, ಹಿಂಜರಿಕೆ ಇಲ್ಲದೇ ಸಲಹೆ ನೀಡಿ': ಉದ್ಯಮ ವಲಯಕ್ಕೆ ಪ್ರಧಾನಿ ಮೋದಿ; ಭಾರಿ ಬದಲಾವಣೆಯ ಸುಳಿವು?

ಭಾರತದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ದೇಶದ ಕೈಗಾರಿಕಾ ಮತ್ತು ಎಂಜಿನಿಯರಿಂಗ್ ಬೆಳವಣಿಗೆಯವರೆಗಿನ ಅನೇಕ ಬದಲಾವಣೆಗಳಿಗೆ ಐಐಟಿ ಖರಗ್‌ಪುರ ಸಾಕ್ಷಿಯಾಗಿದೆ. 75 ವರ್ಷಗಳ ಅವಧಿಯಲ್ಲಿ, ಎತ್ತಿನಗಾಡಿಗಳ ಯುಗದಿಂದ ಬುಲೆಟ್ ರೈಲುಗಳ ಯುಗಕ್ಕೆ ತಲುಪಿರುವ ಪರಿವರ್ತಿತ ಭಾರತದಲ್ಲಿನ ಹಲವು ಬದಲಾವಣೆಗಳನ್ನು ಇದು ಕಂಡಿದೆ, 'ವಿಕಸಿತ ಭಾರತ' ಗುರಿಯತ್ತ ದೇಶ ಸಾಗುತ್ತಿರುವ ಸಂದರ್ಭದಲ್ಲಿ, ಐಐಟಿ ಖಾರಗ್‌ಪುರದ 75 ವರ್ಷಗಳ ಅನುಭವವು ದೇಶದ ಅಭಿವೃದ್ಧಿ ಮತ್ತು ನಾವೀನ್ಯತೆಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮೋದಿ ಹೇಳಿದರು.

ಭಾರತದ ಭವಿಷ್ಯ ರೂಪಿಸುವಲ್ಲಿ ಈ ಸಂಸ್ಥೆಯ ಶಿಕ್ಷಣ, ಸಂಶೋಧನೆ ಮತ್ತು ತಾಂತ್ರಿಕ ಪ್ರಗತಿಯ ಕೊಡುಗೆ ಮಹತ್ವದ್ದಾಗಿರಲಿದೆ. ಕ್ಯಾಂಪಸ್‌ನ ತಜ್ಞರು, ಶಿಕ್ಷಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಂದ ತುಂಬಿದ್ದ ನೇತಾಜಿ ಭವನ ಆಡಿಟೋರಿಯಂನಲ್ಲಿ ಸುಮಾರು 30 ನಿಮಿಷಗಳ ಭಾಷಣ ಮಾಡಿದ ಮೋದಿ, ಕೈಗಾರಿಕಾ ಬೆಳವಣಿಗೆಯಲ್ಲಿ, ವಿಶೇಷವಾಗಿ ಸೆಮಿಕಂಡಕ್ಟರ್‌ಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಮಹತ್ವದ ಪ್ರಗತಿಯನ್ನು ಉಲ್ಲೇಖಿಸಿದರು. ಈ ಪ್ರಗತಿಯು ದೇಶವನ್ನು 'ಆತ್ಮನಿರ್ಭರ'ವಾಗಲು ನೆರವಾಗಿದೆ ಎಂದರು.

2014ರಲ್ಲಿ ಪ್ರಧಾನಿಯಾದ ಬಳಿಕ ಭಾರತದ ಮೊದಲ ಐಐಟಿಯ ವಜ್ರ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೋದಿ ಮೊದಲ ಬಾರಿಗೆ ಐಐಟಿ ಖರಗ್‌ಪುರಕ್ಕೆ ಭೇಟಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X