Flydubai ವಿಮಾನ ಹೈಜಾಕ್'ಗೆ ಯತ್ನ; ಕಾಕ್‌ಪಿಟ್‌ನಲ್ಲೇ ಡೆಡ್ಲಿ ಫೈಟ್; 174 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ..!

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಒಬ್ಬ ಹೀರೋ. ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲೂ, ಗಂಭೀರವಾಗಿ ಗಾಯಗೊಂಡಿದ್ದರೂ ಅಪಾರ ಧೈರ್ಯ ಹಾಗೂ ಇತರರ ಜೀವ ರಕ್ಷಿಸುವ ಅಚಲ ಸಂಕಲ್ಪವನ್ನು ಅವರು ಪ್ರದರ್ಶಿಸಿದ್ದಾರೆ.
Prime Minister Narendra Modi hailed Indian pilot Captain Smit Machchhar as a "hero"
ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಾಗೂ ಪ್ರಧಾನಿ ಮೋದಿ.
Updated on: 

ನವದೆಹಲಿ: ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಸಹ ಪೈಲಟ್ ನಡೆಸಿದ ಎನ್ನಲಾದ ಯತ್ನವನ್ನು ವಿಫಲಗೊಳಿಸುವಲ್ಲಿ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ‘ಹೀರೋ’ ಎಂದು ಶ್ಲಾಘಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದರೂ ನೂರಾರು ಪ್ರಯಾಣಿಕರ ಜೀವ ಉಳಿಸಲು ಅವರು ತೋರಿದ ಧೈರ್ಯದಿಂದ ಭಾರೀ ದುರಂತವೊಂದು ತಪ್ಪಿದೆ ಎಂದು ಮೋದಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಕ್ಯಾಪ್ಟನ್ ಸ್ಮಿತ್ ಮಚ್ಚರ್ ಒಬ್ಬ ಹೀರೋ. ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲೂ, ಗಂಭೀರವಾಗಿ ಗಾಯಗೊಂಡಿದ್ದರೂ ಅಪಾರ ಧೈರ್ಯ ಹಾಗೂ ಇತರರ ಜೀವ ರಕ್ಷಿಸುವ ಅಚಲ ಸಂಕಲ್ಪವನ್ನು ಅವರು ಪ್ರದರ್ಶಿಸಿದ್ದಾರೆ.

ಅವರ ಶೌರ್ಯ ನೂರಾರು ಜೀವಗಳನ್ನು ಉಳಿಸಿ, ಭಾರೀ ದುರಂತವನ್ನು ತಪ್ಪಿಸಲು ನೆರವಾಗಿದೆ. ಭಾರತ ಅವರಿಗೆ ಹೆಮ್ಮೆಪಡುತ್ತದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ಬುಧವಾರ ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈಯ FZ1073 ವಿಮಾನದಲ್ಲಿ 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರಿದ್ದರು. ವಿಮಾನ ಹಾರಾಟದಲ್ಲಿದ್ದ ವೇಳೆ ಕಾಕ್‌ಪಿಟ್‌ನಲ್ಲಿ ಪೈಲಟ್ ಮತ್ತು ಸಹ ಪೈಲಟ್ ನಡುವೆ ತೀವ್ರ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.

ಇಸ್ರೇಲಿ ಅಧಿಕಾರಿಗಳು ಹಾಗೂ ಪ್ರಯಾಣಿಕರ ಹೇಳಿಕೆಗಳ ಪ್ರಕಾರ, ಸಹ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಚೂರಿಯಿಂದ ಇರಿದು, ವಿಮಾನದ ನಿಯಂತ್ರಣವನ್ನು ತನ್ನ ಕೈಗೆ ಪಡೆಯಲು ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಬೋಯಿಂಗ್ 737 ವಿಮಾನ ತೀವ್ರವಾಗಿ ಕೆಳಮುಖವಾಗಿ ಇಳಿಯಲು ಆರಂಭಿಸಿದ್ದು, ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಸುಮಾರು 14,000 ಅಡಿ ಎತ್ತರ ಕಳೆದುಕೊಂಡಿದೆ. ನಂತರ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗಾಯಗೊಂಡಿದ್ದರೂ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆದಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ಪ್ರವೇಶಿಸಿ ಸಹ ಪೈಲಟ್‌ನನ್ನು ಹಿಡಿದು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ವರದಿಯಾಗಿದೆ.

ಪ್ರಯಾಣಿಕರಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಫ್ಲೈದುಬೈನ ಕರ್ತವ್ಯದಲ್ಲಿರದ ಇಬ್ಬರು ಪೈಲಟ್‌ಗಳು ಕೂಡ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ನೆರವಾದರು ಎನ್ನಲಾಗಿದೆ.

Prime Minister Narendra Modi hailed Indian pilot Captain Smit Machchhar as a "hero"
ಫ್ಲೈದುಬೈ ವಿಮಾನದಲ್ಲಿ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ: ಚಾಕುವಿನಿಂದ ಇರಿದ ಸಹೋದ್ಯೋಗಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಭಾರತೀಯ ಪೈಲಟ್!

ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಅಜೀಜ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದ್ದು, ಅಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಕರೆತರಲಾಯಿತು. ಬಳಿಕ ಪ್ರಯಾಣಿಕರು ಮತ್ತೊಂದು ವಿಮಾನದ ಮೂಲಕ ಇಸ್ರೇಲ್‌ಗೆ ತಮ್ಮ ಪ್ರಯಾಣ ಮುಂದುವರಿಸಿದರು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಸ್ಮಿತ್ ಮಚ್ಚರ್ ಅವರನ್ನು ‘ರಿಯಲ್ ಹೀರೋ’ ಎಂದು ಬಣ್ಣಿಸಿದ್ದಾರೆ. ಭಾರತೀಯ ಪೈಲಟ್, ಪ್ರಯಾಣಿಕರು ಮತ್ತು ಸಿಬ್ಬಂದಿಯ ಧೈರ್ಯದಿಂದ ಭೀಕರ ವೈಮಾನಿಕ ದುರಂತವೊಂದು ತಪ್ಪಿದೆ ಎಂದು ಅವರು ಹೇಳಿದ್ದಾರೆ.

“ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ನನ್ನ ವಂದನೆಗಳು. ಅವರು ಶೀಘ್ರ ಮತ್ತು ಸಂಪೂರ್ಣವಾಗಿ ಗುಣಮುಖರಾಗಲಿ” ಎಂದು ನೆತನ್ಯಾಹು ತಿಳಿಸಿದ್ದಾರೆ.

ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಧೈರ್ಯ ಹಾಗೂ ಸಮಯಪ್ರಜ್ಞೆಯನ್ನೂ ಅವರು ಶ್ಲಾಘಿಸಿದ್ದಾರೆ.

ಸಹ ಪೈಲಟ್ ಒಮನ್ ದೇಶದ ಪ್ರಜೆಯಾಗಿದ್ದು, ಆತನನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಘಟನೆಗೆ ಕಾರಣವಾದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ವಾಸ್ತವಾಂಶಗಳು ಸಂಪೂರ್ಣವಾಗಿ ಹೊರಬರುವ ಮುನ್ನ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದು ಫ್ಲೈದುಬೈ ಮನವಿ ಮಾಡಿದೆ.

2022ರಲ್ಲಿ ಫ್ಲೈದುಬೈಗೆ ಸೇರ್ಪಡೆಯಾದ ಸ್ಮಿತ್ ಮಚ್ಚರ್ ಇದಕ್ಕೂ ಮೊದಲು ಭಾರತೀಯ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್‌ನಲ್ಲಿ ಸುಮಾರು 11 ವರ್ಷ ಕೆಲಸ ಮಾಡಿದ್ದರು. ಬೋಯಿಂಗ್ 737 ವಿಮಾನ ಹಾರಾಟದಲ್ಲಿ ಅವರಿಗೆ ಅಪಾರ ಅನುಭವವಿದ್ದು, ಸುಮಾರು 9,750 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಚ್ಚರ್ ಅವರನ್ನು ಹೀರೋ ಎಂದು ಶ್ಲಾಘಿಸಿದ್ದಾರೆ. ಈ ಘಟನೆ ಕುರಿತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಮಾತನಾಡಿದ ಬಳಿಕ ಟ್ರಂಪ್ ಭಾರತೀಯ ಪೈಲಟ್‌ನ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.

ಈ ನಾಟಕೀಯ ಘಟನೆಯಿಂದ ವಿಮಾನದಲ್ಲಿ ತುರ್ತು ಎಚ್ಚರಿಕೆಗಳು ಮೊಳಗಿದ್ದು, ಕೆಲಕಾಲ ಅಪಹರಣದ ಆತಂಕವೂ ಮೂಡಿತ್ತು. ಆದರೆ, ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡು ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಹಾಗೂ ಸಹ ಪೈಲಟ್‌ನ ಉದ್ದೇಶದ ಕುರಿತು ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com