

ಮುಂಬೈ: ಶಾಸನಬದ್ಧ ಕಾರ್ಯವಿಧಾನ ಅನುಸರಿಸದೆ ಕೇವಲ ವಿಶೇಷ ತೀವ್ರ ಪರಿಷ್ಕರಣೆ (SIR) ಕರಡು ಪಟ್ಟಿಯ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಕ್ರಮದ ವಿರುದ್ಧ ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮತದಾರರ ಅರ್ಜಿಗಳನ್ನು ತಿರಸ್ಕರಿಸಲು ಚುನಾವಣಾ ಸಾಫ್ಟ್‌ವೇರ್ ಅನ್ನು ಅವಲಂಬಿಸಿರುವ ಚುನಾವಣಾ ಆಯೋಗದ ಕ್ರಮದ ಬಗ್ಗೆಯೂ ನ್ಯಾಯಾಲಯ ಪ್ರಶ್ನೆಗಳನ್ನು ಎತ್ತಿದೆ.
ನ್ಯಾಯಮೂರ್ತಿಗಳಾದ ಅಮಿತ್ ಎಸ್. ಜಾಮ್ಸಂದೇಕರ್ ಮತ್ತು ವಾಲ್ಮೀಕಿ ಮೆನೆಜಸ್ ಅವರ ವಿಭಾಗೀಯ ಪೀಠವು, ಸಾಫ್ಟ್‌ವೇರ್ ವ್ಯವಸ್ಥೆ ಅಧಿಕಾರಿಗಳಿಗೆ ಅರ್ಜಿಯನ್ನು ತಿರಸ್ಕರಿಸುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ನೀಡಲಿಲ್ಲ ಎಂಬ ಚುನಾವಣಾ ಆಯೋಗದ ಹೇಳಿಕೆಗೆ “ತೀವ್ರ ಕಳವಳಗೊಂಡಿದ್ದೇವೆ” ಎಂದು ಹೇಳಿದೆ.
ಸಾಂತಾ ಕ್ರೂಜ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಹೊಸ ಮನೆಗೆ ಸ್ಥಳಾಂತರಗೊಂಡ ಬಳಿಕ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಅಳಿಸಲಾಗಿದೆ ಎಂದು ಆರೋಪಿಸಿ, ಒಂದೇ ಕುಟುಂಬದ ಆರು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ಅರ್ಜಿದಾರರಾದ ಪರೇಶ್ ಸಾಲ್ಗಾಂವ್ಕರ್ ನೇತೃತ್ವದ ಕುಟುಂಬ, ವಿಳಾಸ ಬದಲಾವಣೆಗಾಗಿ ಬೂತ್ ಮಟ್ಟದ ಅಧಿಕಾರಿಯ ಸೂಚನೆಯಂತೆ ನಮೂನೆ 8 ಸಲ್ಲಿಸಿದ್ದಾಗಿ ತಿಳಿಸಿತು. ಆದರೆ, ಅರ್ಜಿಗಳನ್ನು ಪರಿಶೀಲಿಸುವ ವೇಳೆ ಅವರ ಮತದಾರರ ಗುರುತಿನ ಚೀಟಿ (ಇಪಿಐಸಿ) ವಿವರಗಳು ಚುನಾವಣಾ ನೋಂದಣಿ ಅಧಿಕಾರಿಗಳ ಜಾಲ (ಇರೋನೆಟ್) ವ್ಯವಸ್ಥೆಯಲ್ಲಿ ಲಭ್ಯವಿಲ್ಲ ಎಂದು ಅಧಿಕಾರಿಗಳು ಕಂಡುಕೊಂಡಿದ್ದರು.
ಇರೋನೆಟ್ ಎಂದರೆ ಚುನಾವಣಾ ನೋಂದಣಿ ಅಧಿಕಾರಿಗಳ ಜಾಲ. ಇದು ಚುನಾವಣಾ ಆಯೋಗದ ಅಂತರ್ಜಾಲ ಆಧಾರಿತ ವ್ಯವಸ್ಥೆಯಾಗಿದ್ದು, ಮತದಾರರ ಅರ್ಜಿಗಳ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಗಳ ನಿರ್ವಹಣೆಗೆ ಬಳಸಲಾಗುತ್ತದೆ.
ವ್ಯವಸ್ಥೆಯಲ್ಲಿ ಇಪಿಐಸಿ ದಾಖಲೆ ಕಾಣಿಸದ ಕಾರಣ ಅಧಿಕಾರಿಗಳಿಗೆ “ತಿರಸ್ಕರಿಸಿ” ಎಂಬ ಆಯ್ಕೆಯನ್ನು ಮಾತ್ರ ಬಳಸಲು ಸಾಧ್ಯವಾಗಿತ್ತು ಎಂದು ಅರ್ಜಿದಾರರು ತಿಳಿಸಿದರು.
ಬಳಿಕ ತಮ್ಮ ಇಪಿಐಸಿ ವಿವರಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಮತ್ತು ನಮೂನೆ 8ರ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಿಲ್ಲ ಎಂದು ಕುಟುಂಬಕ್ಕೆ ತಿಳಿಸಲಾಯಿತು.
ನಂತರ ಕುಟುಂಬದ ಸದಸ್ಯರಿಗೆ ನಮೂನೆ 6 ಸಲ್ಲಿಸುವಂತೆ ಸೂಚಿಸಲಾಯಿತು. ನಮೂನೆ 6 ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಬಳಸಲಾಗುತ್ತದೆ. ಆದರೆ, ತಾವು ಈಗಾಗಲೇ ಮತದಾರರಾಗಿದ್ದು, ಅದೇ ಕ್ಷೇತ್ರದೊಳಗೆ ಕೇವಲ ವಿಳಾಸ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದೇವೆ. ಹೀಗಾಗಿ ನಮೂನೆ 6 ಸಲ್ಲಿಸುವಂತೆ ಸೂಚಿಸಿರುವುದು ಸೂಕ್ತವಲ್ಲ ಎಂದು ಅರ್ಜಿದಾರರು ವಾದಿಸಿದರು.
ನ್ಯಾಯಾಲಯವೂ ಇದನ್ನು ಒಪ್ಪಿಕೊಂಡಿದ್ದು, ಕರಡು ಮತದಾರರ ಪಟ್ಟಿಯ ಮೂಲಕ ಮತದಾರರ ಹೆಸರನ್ನು ಅಳಿಸಿ ಬಳಿಕ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸುವಂತೆ ಒತ್ತಾಯಿಸಿದರೆ, ಕಾನೂನುಬದ್ಧ ನಮೂನೆಗಳ ಉದ್ದೇಶವೇ ವ್ಯರ್ಥವಾಗುತ್ತದೆ. “ಇಲ್ಲದಿದ್ದರೆ ನಮೂನೆ 6, 7 ಅಥವಾ 8ಕ್ಕೆ ಯಾವುದೇ ಅರ್ಥವೇ ಇರುವುದಿಲ್ಲ ಎಂದು ಪೀಠ ಹೇಳಿತು.
ಈ ನಮೂನೆಗಳು ಹೊಸ ಮತದಾರರ ಸೇರ್ಪಡೆ, ಹೆಸರು ಅಳಿಸುವಿಕೆ ಸಂಬಂಧಿತ ಅರ್ಜಿಗಳು ಹಾಗೂ ನಿವಾಸ ಬದಲಾಯಿಸುವ ಮತದಾರರ ಅಗತ್ಯಗಳಿಗೆ ಸಂಬಂಧಿಸಿವೆ ಎಂದು ನ್ಯಾಯಾಲಯ ಗಮನಿಸಿತು.
ಇದೇ ವೇಳೆ ಇರೋನೆಟ್ ವ್ಯವಸ್ಥೆಯ ಮೇಲಿನ ಚುನಾವಣಾ ಆಯೋಗದ ಅವಲಂಬನೆಯನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಅವರು ಎಂದಿಗೂ ಹೊಸ ಮತದಾರರಾಗಿರಲಿಲ್ಲ. ಅವರು ಈಗಾಗಲೇ ಮತದಾರರಾಗಿದ್ದರು. ಆದರೆ, ನಿಮ್ಮ ವ್ಯವಸ್ಥೆಯಲ್ಲಿ ಅವರು ಹೊಸ ಮತದಾರರಾದರು ಎಂದು ಹೇಳಿದರು.
ಮತದಾರರ ಹೆಸರನ್ನು ಅಳಿಸುವ ಮೊದಲು ಸಂಬಂಧಪಟ್ಟ ವ್ಯಕ್ತಿಗೆ ವಿಚಾರಣೆ ನಡೆಸಲು ಅವಕಾಶ ನೀಡದೆ ಹೆಸರು ತೆಗೆದುಹಾಕಲು ಯಾವ ಕಾನೂನು ಅವಕಾಶ ನೀಡುತ್ತದೆ ಎಂಬುದನ್ನೂ ನ್ಯಾಯಾಲಯ ಚುನಾವಣಾ ಆಯೋಗವನ್ನು ಪ್ರಶ್ನಿಸಿತು.
ಕಾನೂನಿನಿಂದ ತೋರಿಸಿ... ವಿಚಾರಣೆ ನಡೆಸದೆ ಹೆಸರು ಅಳಿಸಲು ನಿಮಗೆ ಅಧಿಕಾರ ನೀಡಿರುವುದು ಎಲ್ಲಿದೆ? ಎಂದು ಪೀಠ ಪ್ರಶ್ನಿಸಿತು.
ಅಧಿಕಾರಿಗಳು ತಮ್ಮ ವಿವೇಚನೆ ಬಳಸುವ ಬದಲು ಸಾಫ್ಟ್‌ವೇರ್ ವ್ಯವಸ್ಥೆಯನ್ನೇ ಅವಲಂಬಿಸಿರುವಂತೆ ಕಂಡುಬರುತ್ತಿದೆ ಎಂದು ನ್ಯಾಯಾಲಯ ಹೇಳಿತು.
ನಿಮ್ಮ ಅಧಿಕಾರಿಗಳು ಅಸಹಾಯಕರಾಗಿ, ಎಲ್ಲವನ್ನೂ ವ್ಯವಸ್ಥೆಯ ಮೇಲೆ ಹಾಕಿದಂತಾಗಿದೆ. ವ್ಯವಸ್ಥೆಯೇ ಅರ್ಜಿಯನ್ನು ತಿರಸ್ಕರಿಸಿದೆ ಎಂದು ಆದೇಶದಲ್ಲಿ ದಾಖಲಿಸಿದ್ದಾರೆ. ಇದರಿಂದ ನಾವು ತೀವ್ರವಾಗಿ ಕಳವಳಗೊಂಡಿದ್ದೇವೆ ಎಂದು ಪೀಠ ಹೇಳಿತು.
ಆಡಳಿತಾತ್ಮಕ ಸಾಫ್ಟ್‌ವೇರ್ ವ್ಯವಸ್ಥೆಯು ಕಾನೂನುಬದ್ಧ ನಿಯಮಗಳನ್ನು ಮೀರಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.
ನಮೂನೆ 8ರ ಅರ್ಜಿ ಬಂದಾಗ ಮತದಾರ ನಿಜವಾಗಿಯೂ ನಿವಾಸ ಬದಲಾಯಿಸಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಹೇಳಿದರು.
ಅದೇ ವೇಳೆ, ಇಂತಹ ರೀತಿಯಲ್ಲಿ ಹೆಸರುಗಳನ್ನು ಅಳಿಸುವುದರಿಂದ ಉಂಟಾಗಬಹುದಾದ ವ್ಯಾಪಕ ಪರಿಣಾಮಗಳ ಬಗ್ಗೆಯೂ ಪೀಠ ಕಳವಳ ವ್ಯಕ್ತಪಡಿಸಿತು.
ನಿವಾಸ ಬದಲಾಯಿಸಿರುವ ಹೆಚ್ಚಿನ ಸಂಖ್ಯೆಯ ಮತದಾರರು ಇದೇ ರೀತಿಯ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಗಮನಿಸಿತು. ಇಲ್ಲಿ ಕೇವಲ ಒಂದು ಕುಟುಂಬವಿದೆ. ಇದೇ ರೀತಿಯಾಗಿ ಹಲವರು ನಿವಾಸ ಬದಲಾಯಿಸಿರುವ ಪರಿಸ್ಥಿತಿಯನ್ನು ಊಹಿಸಿ ನೋಡಿ ಎಂದು ಪೀಠ ಹೇಳಿತು.