SIR ವಿವಾದ: ಫಾರ್ಮ್‌-6 ನಿಯಮ ಸರಳಗೊಳಿಸಿದ ಚುನಾವಣಾ ಆಯೋಗ, ಪಟ್ಟಿಯಿಂದ ಹೊರಗುಳಿದವರ ಸೇರ್ಪಡೆಗೆ ವಿಶೇಷ ಅಭಿಯಾನಕ್ಕೆ ಸೂಚನೆ..!

ಮತದಾರರ ನೋಂದಣಿ ನಿರಂತರ ಪ್ರಕ್ರಿಯೆಯಾಗಿದ್ದು, ಎಸ್‌ಐಆರ್ ಸಂದರ್ಭದಲ್ಲಿ ನೋಂದಣಿಯಾಗದ ಕಾರಣಕ್ಕೆ ಯಾವುದೇ ಅರ್ಹ ನಾಗರಿಕರಿಗೆ ನೋಂದಣಿ ಅವಕಾಶ ನಿರಾಕರಿಸಬಾರದು ಎಂದು ಆಯೋಗ ತಿಳಿಸಿದೆ.
Chief Election Commissioner Gyanesh Kumar with Election Commissioners Sukhbir Singh Sandhu and Vivek Joshi.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರೊಂದಿಗಿರುವುದು.
Updated on: 

ನವದೆಹಲಿ: ಇತ್ತೀಚೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ಅರ್ಹ ನಾಗರಿಕರನ್ನು ಮರುಸೇರ್ಪಡೆ ಮಾಡಲು ಭಾರತೀಯ ಚುನಾವಣಾ ಆಯೋಗವು (ECI) ದೇಶಾದ್ಯಂತ ವಿಶೇಷ ಅಭಿಯಾನ ನಡೆಸಲು ಆದೇಶ ಹೊರಡಿಸಿದೆ.

ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇದು ದೇಶಾದ್ಯಂತ ಭಾರಿ ರಾಜಕೀಯ ವಿವಾದ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಚುನಾವಣಾ ಆಯೋಗವು ಈ ಸರಿಪಡಿಸುವ ಕ್ರಮಕ್ಕೆ ಮುಂದಾಗಿದೆ.

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡ ಬಳಿಕ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಗುರುತಿಸಿ, ಮತ್ತೆ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಅಭಿಯಾನ ಕೈಗೊಳ್ಳುವಂತೆ ಭಾರತದ ಚುನಾವಣಾ ಆಯೋಗವು ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಿ ಅಧಿಕಾರಿಗಳಿಗೆ ಸೂಚಿಸಿದೆ.

ಎಸ್‌ಐಆರ್‌ಗೂ ಮುನ್ನದ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಪ್ರಸ್ತುತ ಪಟ್ಟಿಯಲ್ಲಿ ಕಾಣಿಸದಿರುವ ಮತದಾರರು, ಇದೇ ವೇಳೆ ಇನ್ನೂ ನೋಂದಣಿಯಾಗದ ಮೊದಲ ಬಾರಿಗೆ ಮತ ಚಲಾಯಿಸಲಿರುವವರು ಹಾಗೂ ಯುವ ಮತದಾರರನ್ನು ಈ ವಿಶೇಷ ಅಭಿಯಾನದಡಿ ಗುರುತಿಸಿ ನೋಂದಾಯಿಸಲಾಗುತ್ತದೆ.

ಅಕ್ಟೋಬರ್ 1ರಂದು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ಚುನಾವಣಾ ಆಯೋಗ ನಡೆಸಿದ ಸಭೆಯ ಬಳಿಕ ಈ ನಿರ್ದೇಶನ ನೀಡಲಾಗಿದೆ.

ಮತದಾರರ ನೋಂದಣಿ ನಿರಂತರ ಪ್ರಕ್ರಿಯೆಯಾಗಿದ್ದು, ಎಸ್‌ಐಆರ್ ಸಂದರ್ಭದಲ್ಲಿ ನೋಂದಣಿಯಾಗದ ಕಾರಣಕ್ಕೆ ಯಾವುದೇ ಅರ್ಹ ನಾಗರಿಕರಿಗೆ ನೋಂದಣಿ ಅವಕಾಶ ನಿರಾಕರಿಸಬಾರದು ಎಂದು ಆಯೋಗ ತಿಳಿಸಿದೆ.

ಈ ಅಭಿಯಾನದಡಿ ಬೂತ್ ಮಟ್ಟದ ಅಧಿಕಾರಿಗಳು ಪ್ರಸ್ತುತ ಮತದಾರರ ಪಟ್ಟಿಯನ್ನು ಎಸ್‌ಐಆರ್‌ಗೂ ಮುನ್ನದ ಪಟ್ಟಿಯೊಂದಿಗೆ ಹೋಲಿಕೆ ಮಾಡಿ, ಹಿಂದಿನ ಪಟ್ಟಿಯಲ್ಲಿ ಹೆಸರು ಇದ್ದು ಈಗ ಕಾಣೆಯಾಗಿರುವ ಮತದಾರರ ಬೂತ್‌ವಾರು ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ.

ಬಳಿಕ ಮನೆಮನೆಗೆ ತೆರಳಿ ಅಂತಹ ಮತದಾರರ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿ, ಅರ್ಹರಾಗಿರುವವರಿಗೆ ನಮೂನೆ-6 ಮೂಲಕ ಮತ್ತೆ ನೋಂದಣಿ ಮಾಡಿಕೊಳ್ಳಲು ನೆರವಾಗಲಿದ್ದಾರೆ.

ಪ್ರತಿ ಬೂತ್ ಮಟ್ಟದ ಅಧಿಕಾರಿ ವಾರಕ್ಕೆ ಕನಿಷ್ಠ 20ರಿಂದ 25 ಅಂತಹ ಮತದಾರರನ್ನು ಪರಿಶೀಲಿಸುವಂತೆ ಸೂಚಿಸಲಾಗಿದ್ದು, ಸುಮಾರು ಒಂದು ತಿಂಗಳೊಳಗೆ ಈ ಪರಿಶೀಲನಾ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

Chief Election Commissioner Gyanesh Kumar with Election Commissioners Sukhbir Singh Sandhu and Vivek Joshi.
SIR ಪ್ರಕ್ರಿಯೆ ಪೂರ್ಣಗೊಂಡ ಕೇಂದ್ರಾಡಳಿತ ಪ್ರದೇಶ, ರಾಜ್ಯಗಳಲ್ಲಿ ಫಾರ್ಮ್-6 ರದ್ದು: ಕೇಂದ್ರ ಚುನಾವಣಾ ಆಯೋಗ

ಮನೆಮನೆ ಭೇಟಿ ವೇಳೆ ಎಸ್‌ಐಆರ್ ಬಳಿಕ ಪಟ್ಟಿಯಿಂದ ಹೊರಗುಳಿದಿರುವ ಇತರ ಅರ್ಹ ಮತದಾರರು, ಮೊದಲ ಬಾರಿಗೆ ಮತದಾರರಾಗುವವರು ಹಾಗೂ ಯುವ ಮತದಾರರನ್ನೂ ಗುರುತಿಸಿ, ಅವರ ನೋಂದಣಿಗೆ ಅಧಿಕಾರಿಗಳು ನೆರವು ನೀಡಲಿದ್ದಾರೆ. ಗುರುತಿಸಲಾದ ಪ್ರತಿಯೊಬ್ಬ ಮತದಾರರ ಸ್ಥಿತಿಯನ್ನು ದಾಖಲಿಸಲಾಗುತ್ತದೆ. ನಮೂನೆ-6 ಸಲ್ಲಿಸಿರುವ ವಿಚಾರವನ್ನೂ ದಾಖಲಿಸಲಾಗುತ್ತದೆ.

ಬೂತ್ ಮಟ್ಟದ ಅಧಿಕಾರಿಗಳು ಸಿದ್ಧಪಡಿಸುವ ಪಟ್ಟಿಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು ಹಾಗೂ ಸಂಬಂಧಪಟ್ಟ ಮತದಾರರ ನೋಂದಣಿ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಕ್ಷೇತ್ರ ಪರಿಶೀಲನಾ ವರದಿಗಳೊಂದಿಗೆ ನಮೂನೆ-6 ಅರ್ಜಿಗಳನ್ನು ಸ್ವೀಕರಿಸುವ ಮತದಾರರ ನೋಂದಣಿ ಅಧಿಕಾರಿಗಳು, ಜನಪ್ರತಿನಿಧಿ ಕಾಯ್ದೆ-1950 ಹಾಗೂ ಮತದಾರರ ನೋಂದಣಿ ನಿಯಮಗಳು-1960ರ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ನಾಗರಿಕರಿಗೆ ಮತದಾರರ ನೋಂದಣಿ ಅರ್ಜಿ ಸಲ್ಲಿಸಲು ನೆರವಾಗುವಂತೆ ಬೂತ್ ಮಟ್ಟದ ಶಿಬಿರಗಳನ್ನು ಆಯೋಜಿಸುವಂತೆಯೂ ಚುನಾವಣಾ ಆಯೋಗ ಸೂಚಿಸಿದೆ.

ರಾತ್ರಿ ಆಶ್ರಯ ಕೇಂದ್ರಗಳು, ಕಾರ್ಮಿಕರ ವಸತಿ ಪ್ರದೇಶಗಳು, ನಿರಾಶ್ರಿತರು ಹಾಗೂ ಇತರ ಅಂಚಿನ ಸಮುದಾಯಗಳಿಗಾಗಿ ವಿಶೇಷ ಶಿಬಿರಗಳನ್ನು ನಡೆಸುವಂತೆ ತಿಳಿಸಲಾಗಿದೆ.

ಎಸ್‌ಐಆರ್ ವೇಳೆ ‘ಗೈರು’, ‘ಸ್ಥಳಾಂತರಗೊಂಡ’, ‘ಮೃತ’ ಹಾಗೂ ‘ನಕಲಿ/ಪುನರಾವರ್ತಿತ’ ಮತದಾರರು ಎಂದು ವರ್ಗೀಕರಿಸಲಾದ ಎಎಸ್‌ಡಿಡಿ ಪಟ್ಟಿಗಳನ್ನು ಈಗಾಗಲೇ ಸ್ಥಳೀಯ ಸರ್ಕಾರಿ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಅವುಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಸಂಬಂಧಪಟ್ಟ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ಗಳಲ್ಲೂ ಅಪ್‌ಲೋಡ್ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.

ವಿಶೇಷ ಅಭಿಯಾನ ಪೂರ್ಣಗೊಂಡ ಬಳಿಕವೂ ಮತದಾರರ ನೋಂದಣಿ ಅಧಿಕಾರಿಗಳು ಬೂತ್‌ವಾರು ಪಟ್ಟಿಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಮೂಲಕ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಗುರುತಿಸಿ ಅವರ ನೋಂದಣಿಗೆ ನೆರವಾಗಲು ಮತ್ತೊಂದು ಅವಕಾಶ ಕಲ್ಪಿಸಲಾಗುತ್ತದೆ.

ಶೈಕ್ಷಣಿಕ ಸಂಸ್ಥೆಗಳು, ಸ್ಥಳೀಯ ಜಾಗೃತಿ ಕಾರ್ಯಕ್ರಮಗಳು, ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (SVEEP) ಚಟುವಟಿಕೆಗಳು ಸೇರಿದಂತೆ ವಿವಿಧ ವೇದಿಕೆಗಳ ಮೂಲಕ ಜಾಗೃತಿ ಹಾಗೂ ಜನಸಂಪರ್ಕ ಅಭಿಯಾನಗಳನ್ನು ನಡೆಸುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಅಭಿಯಾನದ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆಯೂ ಆಯೋಗ ತಿಳಿಸಿದೆ.

ಎಸ್‌ಐಆರ್ ಮೂಲಕ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಆರೋಪಿಸಿವೆ.

ಎಸ್‌ಐಆರ್ ಬಳಿಕ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತದಾರರ ಪಟ್ಟಿಯಲ್ಲಿ ಶೇ.10.2ರಷ್ಟು ಕಡಿತವಾಗಿದ್ದು, 60 ಲಕ್ಷಕ್ಕೂ ಹೆಚ್ಚು ಮೃತ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಚುನಾವಣಾ ಪ್ರಾಧಿಕಾರ ಹಾಗೂ ರಾಜ್ಯ ಅಧಿಕಾರಿಗಳು ಹಂಚಿಕೊಂಡಿರುವ ಅಂಕಿಅಂಶಗಳು ತೋರಿಸುತ್ತವೆ.

ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಚುನಾವಣಾ ಆಯೋಗದೊಳಗೇ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ನಡುವೆಯೇ ಈ ವಿಶೇಷ ಅಭಿಯಾನದ ನಿರ್ಧಾರ ಹೊರಬಿದ್ದಿದೆ. ಆದರೆ, ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com