ಸಂಸದ ಚಂದ್ರಶೇಖರ್ ಆಜಾದ್ ವಿರುದ್ಧ ಜಾಮೀನು ರಹಿತ ವಾರಂಟ್; ಆಸ್ತಿ ಜಪ್ತಿಗೆ ಕೋರ್ಟ್ ಆದೇಶ!

2018ರಲ್ಲಿ ಸಾಹಿಬಾಬಾದ್‌ನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಹಲ್ಲೆ ಮತ್ತು ನಿಂದನೆ ನಡೆಸಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
MP Chandrashekhar Azad
ಚಂದ್ರಶೇಖರ್ ಆಜಾದ್
Updated on: 

ಗಾಜಿಯಾಬಾದ್: ಎಂಟು ವರ್ಷಗಳ ಹಿಂದಿನ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಆಜಾದ್ ಸಮಾಜ ಪಕ್ಷದ ಅಧ್ಯಕ್ಷ ಮತ್ತು ನಗೀನಾ ಲೋಕಸಭಾ ಕ್ಷೇತ್ರದ ಸಂಸದ ಚಂದ್ರಶೇಖರ್ ಆಜಾದ್ ವಿರುದ್ಧ ಗಾಜಿಯಾಬಾದ್‌ನ ಸಂಸದರು ಮತ್ತು ಶಾಸಕರ (MP-MLA) ವಿಶೇಷ ನ್ಯಾಯಾಲಯ ಶುಕ್ರವಾರ ಜಾಮೀನು ರಹಿತ ವಾರಂಟ್ (NBW) ಹೊರಡಿಸಿದೆ. ಅಲ್ಲದೆ, ಅವರ ಆಸ್ತಿಯನ್ನು ಜಪ್ತಿ ಮಾಡುವ ಕ್ರಮ ಕೈಗೊಳ್ಳುವಂತೆಯೂ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಲಯದ ವಿಚಾರಣೆ ವೇಳೆ ಆಜಾದ್ ಹಾಜರಾಗಿರಲಿಲ್ಲ. ಬಳಿಕ ಕೋರ್ಟ್ ಈ ಆದೇಶ ಹೊರಡಿಸಿತು. 2018ರಲ್ಲಿ ಸಾಹಿಬಾಬಾದ್‌ನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಹಲ್ಲೆ ಮತ್ತು ನಿಂದನೆ ನಡೆಸಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಕೇಸ್ ನ ವಿಚಾರಣೆಯು ಗಾಜಿಯಾಬಾದ್‌ನಲ್ಲಿರುವ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಆಜಾದ್ ವಿರುದ್ಧ ಈ ಹಿಂದೆಯೇ ಬಂಧನ ವಾರಂಟ್ ಹೊರಡಿಸಲಾಗಿದ್ದರೂ ಅವರು ವಿಚಾರಣೆಗೆ ಗೈರುಹಾಜರಾಗುತ್ತಲೇ ಬಂದಿದ್ದಾರೆ ಎಂದು ದೂರುದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ತರುವಾಯ, ವಕೀಲರು ಮತ್ತೊಂದು ಜಾಮೀನು ರಹಿತ ವಾರಂಟ್ ಹೊರಡಿಸುವಂತೆ ಹಾಗೂ ಸಂಸದರ ಆಸ್ತಿಯನ್ನು ಜಪ್ತಿ ಮಾಡುವ ಕ್ರಮ ಕೈಗೊಳ್ಳುವಂತೆ ಕೋರಿದರು.

ದೂರುದಾರ ಧರ್ಮೇಂದ್ರ ಕುಮಾರ್ ಅವರ ಆರೋಪವೇನು? 2018ರಲ್ಲಿ ಸಾಹಿಬಾಬಾದ್ ಪ್ರದೇಶದ ವೃಂದಾವನ ಗಾರ್ಡನ್‌ನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಕುಮಾರ್ ಪಾಲ್ಗೊಂಡಿದ್ದರು. ಆಜಾದ್ ಕೂಡ ತಮ್ಮ ಬೆಂಬಲಿಗರೊಂದಿಗೆ ಅಲ್ಲಿ ಉಪಸ್ಥಿತರಿದ್ದರು. ಆಜಾದ್ ಅವರ ಬೆಂಬಲಿಗರು ವಿವಾಹ ಸಮಾರಂಭಕ್ಕೆ ಯಾಕೆ ಶಸ್ತ್ರಾಸ್ತ್ರಗಳನ್ನು ತಂದಿದ್ದಾರೆ ಎಂದು ಕುಮಾರ್ ಪ್ರಶ್ನಿಸಿದ್ದರು ಎನ್ನಲಾಗಿದೆ. ನಂತರ, ಆಜಾದ್ ಮತ್ತು ಸುಮಾರು 15 ಮಂದಿ ತಮ್ಮನ್ನು ನಿಂದಿಸಿ ಹಲ್ಲೆ ನಡೆಸಿದರು ಎಂದು ಅವರು ಆರೋಪಿಸಿದ್ದಾರೆ. ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ದೂರಿನಲ್ಲಿದೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 323 ಮತ್ತು 305ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ. ಈ ಆರೋಪಗಳು ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿದ್ದು, ನ್ಯಾಯಾಲಯದ ಅಂತಿಮ ತೀರ್ಪಿನಿಂದ ಇನ್ನೂ ಸಾಬೀತಾಗಿಲ್ಲ. ಆಜಾದ್ ವಿರುದ್ಧ ಈ ಹಿಂದೆ ಬಂಧನ ವಾರಂಟ್ ಹೊರಡಿಸಲಾಗಿದ್ದರೂ ಅವರು ವಿಚಾರಣೆಗಳಿಗೆ ಗೈರುಹಾಜರಾಗುತ್ತಲೇ ಬಂದಿದ್ದರು ಎಂದು ಇತ್ತೀಚಿನ ವಿಚಾರಣೆಯ ಸಂದರ್ಭದಲ್ಲಿ ದೂರುದಾರ ಧರ್ಮೇಂದ್ರ ಅವರ ಪರ ವಕೀಲ ಭಜನ್‌ಲಾಲ್ ಗೌತಮ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅಲ್ಲದೇ'ಕ್ರಿಮಿನಲ್ ಪ್ರೊಸೀಜರ್ ಕೋಡ್'ನ (ದಂಡ ಪ್ರಕ್ರಿಯಾ ಸಂಹಿತೆ) ಸೆಕ್ಷನ್ 82 ಮತ್ತು 83ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

MP Chandrashekhar Azad
ಅವರ ಹೇಳಿಕೆಯಿಂದ ನಮಗೆ ನೋವುಂಟಾಗಿತ್ತು: ಚಂದ್ರಶೇಖರ್ ಆಜಾದ್ ಮೇಲೆ ದಾಳಿ ನಡೆಸಿದ ಆರೋಪಿಗಳ ಹೇಳಿಕೆ

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತು ಮತ್ತು ಆಸ್ತಿ ಮುಟ್ಟುಗೋಲು ಪ್ರಕ್ರಿಯೆಗೆ ಆದೇಶಿಸಿತು. ಆಜಾದ್ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 2025ರಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು ಮತ್ತು ಆ ಸಮಯದಲ್ಲಿ ತಮ್ಮ ವಿರುದ್ಧ ಹೊರಡಿಸಲಾಗಿದ್ದ ವಾರಂಟ್ ಅನ್ನು ಹಿಂಪಡೆಯುವಂತೆ ಕೋರಿದ್ದರು. ಆಗ ನ್ಯಾಯಾಲಯವು ಅವರ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡು, ಮುಂದಿನ ವಿಚಾರಣೆಗಾಗಿ ಪ್ರಕರಣವನ್ನು ನಿಗದಿಪಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com