

ಜಮ್ಮುವಿನ ಸೇನಾ ಶಿಬಿರವೊಂದರಲ್ಲಿ ಭಾನುವಾರ 45 ವರ್ಷದ ಸೈನಿಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ನಿವಾಸಿಯಾಗಿದ್ದ ನಾಯಕ್ ವಾಘ್ ಅಂಬಾದೇಸ್ ಅವರು, ಇಲ್ಲಿನ ಚನ್ನಿ ಹಿಮ್ಮತ್ ಪ್ರದೇಶದಲ್ಲಿರುವ ಸುಂಜ್ವಾನ್ ಶಿಬಿರದ ಶೆಡ್‌ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ಕಾನೂನು ಪ್ರಕ್ರಿಯೆಗಳಿಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಆತ್ಮಹತ್ಯೆಗೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಹೇಳಿದ ಅವರು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖಾ ಪ್ರಕ್ರಿಯೆಯನ್ನು (ಇನ್‌ಕ್ವೆಸ್ಟ್) ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.