ಮಹಾರಾಷ್ಟ್ರ: 3 ತಿಂಗಳು ಬಂದ್ ಆಗಿದ್ದ ಪೆಟ್ರೋಲ್ ಬಂಕ್‌ ಸೀಲ್ ಮಾಡಲು ಹೋದ ಇಂಡಿಯನ್ ಆಯಿಲ್ ಅಧಿಕಾರಿಗೆ 7 ಬಾರಿ ಇರಿತ!

ತಾಂತ್ರಿಕ ಕಾರಣಗಳಿಂದಾಗಿ ಮೂರು ತಿಂಗಳ ಕಾಲ ಮುಚ್ಚಲಾಗಿದ್ದ ಚೋಂಧಿಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಲು ಶೆಲ್ಕೆ ಮತ್ತು ಅವರ ತಂಡ ಮಂಗಳವಾರ ಸಂಜೆ ಅಲ್ಲಿಗೆ ಆಗಮಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Mahesh Shelke (left)- petrol pump operator's son (right)
ಇಂಡಿಯನ್ ಆಯಿಲ್‌ನ ಮಾರಾಟ ವ್ಯವಸ್ಥಾಪಕರಾದ ಮಹೇಶ್ ಶೆಲ್ಕೆ- ಚಾಕು ಇರಿದ ಯುವಕ online desk
Updated on: 

ಹಿಂಗೋಲಿ: ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಪೆಟ್ರೋಲ್ ಪಂಪ್ ಒಂದನ್ನು ಸೀಲ್ ಮಾಡುವ (ಮುಚ್ಚುವ) ವಿಷಯದಲ್ಲಿ ಉಂಟಾದ ವಿವಾದದ ನಂತರ, ಇಂಡಿಯನ್ ಆಯಿಲ್ ಅಧಿಕಾರಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಇಂಡಿಯನ್ ಆಯಿಲ್‌ನ ಮಾರಾಟ ವ್ಯವಸ್ಥಾಪಕರಾದ ಮಹೇಶ್ ಶೆಲ್ಕೆ ಅವರೊಂದಿಗೆ ತೀವ್ರ ವಾಗ್ವಾದ ನಡೆದ ನಂತರ, ಪೆಟ್ರೋಲ್ ಪಂಪ್ ನಿರ್ವಾಹಕರ ಮಗ ಅವರನ್ನು ಏಳು ಬಾರಿ ಚಾಕುವಿನಿಂದ ಇರಿದಿದ್ದಾನೆ.

ತಾಂತ್ರಿಕ ಕಾರಣಗಳಿಂದಾಗಿ ಮೂರು ತಿಂಗಳ ಕಾಲ ಮುಚ್ಚಲಾಗಿದ್ದ ಚೋಂಧಿಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಲು ಶೆಲ್ಕೆ ಮತ್ತು ಅವರ ತಂಡ ಮಂಗಳವಾರ ಸಂಜೆ ಅಲ್ಲಿಗೆ ಆಗಮಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೆಟ್ರೋಲ್ ಪಂಪ್ ನಿರ್ವಾಹಕ ಸಾಹೇಬ್ರಾವ್ ಪಾಂಡವ್ವೀರ್ ಅವರ ಕುಟುಂಬ ಕಾರ್ಯಾಚರಣೆಯನ್ನು ಪುನರಾರಂಭಿಸಲು ಒಂದು ತಿಂಗಳ ಕಾಲಾವಕಾಶ ಕೋರಿತ್ತು, ಆದರೆ ಅಧಿಕಾರಿಗಳು ಅದನ್ನು ನಿರಾಕರಿಸಿದರು. ಈ ವೇಳೆ ಉಂಟಾದ ತೀವ್ರ ವಾಗ್ವಾದದ ನಡುವೆ, ನಿರ್ವಾಹಕರ ಮಗ ಉಮೇಶ್ ಪಾಂಡವ್ವೀರ್ ಚಾಕುವಿನಿಂದ ಶೆಲ್ಕೆ ಅವರಿಗೆ ಏಳು ಬಾರಿ ಇರಿದಿದ್ದಾನೆ.

ಹೊಟ್ಟೆ, ಬೆನ್ನು ಮತ್ತು ಮುಖದ ಭಾಗದಲ್ಲಿ ಗಾಯಗೊಂಡ ಶೆಲ್ಕೆ ಅವರು ನೆಲಕ್ಕೆ ಕುಸಿದು ಬಿದ್ದು ಮೃತಪಟ್ಟರು. ಆರೋಪಿ ಮತ್ತು ಇತರರು ಎರಡು ಕಾರುಗಳಲ್ಲಿ ಪರಾರಿಯಾಗಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ.

ಕುರುಂದಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶೆಲ್ಕೆ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಇಂಡಿಯನ್ ಆಯಿಲ್ ಅಧ್ಯಕ್ಷ ಅರ್ವಿಂದರ್ ಸಿಂಗ್ ಸಾಹ್ನಿ ಹೇಳಿದ್ದಾರೆ. ಅವರು ತಮ್ಮ ಸಹೋದ್ಯೋಗಿಯ ಸಾವಿಗೆ ಸಂತಾಪ ಸೂಚಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

"ಮಹಾರಾಷ್ಟ್ರದ ಹಿಂಗೋಲಿಯಲ್ಲಿ ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಾರಣಾಂತಿಕ ದಾಳಿಗೆ ಒಳಗಾದ ನಮ್ಮ ಸಹೋದ್ಯೋಗಿ ಮಹೇಶ್ ಶೆಲ್ಕೆ ಅವರ ದುರಂತ ಸಾವಿನಿಂದ ತೀವ್ರ ದುಃಖಿತನಾಗಿದ್ದೇನೆ. ಈ ಹೇಯ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಜವಾಬ್ದಾರರಾದವರ ವಿರುದ್ಧ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಮಹಾರಾಷ್ಟ್ರದ ಉನ್ನತ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ. ಈ ಅಪಾರ ದುಃಖದ ಸಮಯದಲ್ಲಿ ಇಂಡಿಯನ್ ಆಯಿಲ್ ಶೆಲ್ಕೆ ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ. ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಆಪ್ತರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು," ಎಂದು ಅವರು ಹೇಳಿದರು.

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕೊಲೆಯನ್ನು "ಆಘಾತಕಾರಿ" ಮತ್ತು "ಸ್ವೀಕರಿಸಲಾಗದ ಹಿಂಸಾತ್ಮಕ ಕೃತ್ಯ" ಎಂದು ಖಂಡಿಸಿದ್ದಾರೆ. "ಮಹಾರಾಷ್ಟ್ರದಲ್ಲಿ ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುತ್ತಿದ್ದಾಗ ಇಂಡಿಯನ್ ಆಯಿಲ್‌ನ ಮ್ಯಾನೇಜರ್ (ಚಿಲ್ಲರೆ ಮಾರಾಟ ವಿಭಾಗ) ಮಹೇಶ್ ಶೆಲ್ಕೆ ಅವರು ಪ್ರಾಣ ಕಳೆದುಕೊಂಡ ದುರಂತ ಘಟನೆಯಿಂದ ನನಗೆ ತೀವ್ರ ದುಃಖ ಮತ್ತು ಆಘಾತವಾಗಿದೆ. ಹಿಂಗೋಲಿ ಜಿಲ್ಲೆಯಲ್ಲಿ ಇಂಡಿಯನ್ ಆಯಿಲ್‌ನ ಚಿಲ್ಲರೆ ಮಾರಾಟ ಮಳಿಗೆಯೊಂದರ ವಶ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದ ತಂಡದ ಭಾಗವಾಗಿದ್ದಾಗ, ಅವರ ಮೇಲೆ ಹರಿತವಾದ ಆಯುಧದಿಂದ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ಹಿಂಸಾಚಾರದ ಈ ಹೇಯ ಮತ್ತು ಸ್ವೀಕಾರಾರ್ಹವಲ್ಲದ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ," ಎಂದು ಪುರಿ ಹೇಳಿದರು.

ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ಅವರು, ಪೆಟ್ರೋಲಿಯಂ ಸಚಿವಾಲಯ ಮತ್ತು ಇಂಡಿಯನ್ ಆಯಿಲ್‌ನಿಂದ ಕುಟುಂಬಕ್ಕೆ ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

"ಈ ಘಟನೆಗೆ ಕಾರಣರಾದವರ ವಿರುದ್ಧ ಕಾನೂನುಬದ್ಧವಾಗಿ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ದೇಶದ ಸೇವೆಗಾಗಿ ಅವಿರತವಾಗಿ ಶ್ರಮಿಸುವ ನಮ್ಮ ಇಂಧನ ವಲಯದ ಸಿಬ್ಬಂದಿಯ ಸುರಕ್ಷತೆ, ಘನತೆ ಮತ್ತು ಭದ್ರತೆ ಅತ್ಯಂತ ಪ್ರಮುಖವಾಗಿದೆ," ಎಂದು ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com