

ನವದೆಹಲಿ: ರಾಷ್ಟ್ರ ರಾಜಧಾನಿಯ ಜಾಮಾ ಮಸೀದಿ ಮೆಟ್ರೋ ನಿಲ್ದಾಣದಲ್ಲಿ ಲಗೇಜ್ ತಪಾಸಣೆ ವೇಳೆ ಅನುಮಾನಾಸ್ಪದ ವಸ್ತು ಪತ್ತೆಯಾದ ನಂತರ ಪರಾರಿಯಾಗಲು ಯತ್ನಿಸಿದ ಪ್ರಯಾಣಿಕನನ್ನು ಸಿಐಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ.
ತಪಾಸಣೆ ವೇಳೆ ಒಳ ಉಡುಪಿನಲ್ಲಿ ಅಡಗಿಸಿಟ್ಟ ಗುರುತಿಸಲಾಗದ ಅರೆ-ಘನ ವಸ್ತು ಪತ್ತೆಯಾಗಿದೆ. ಈ ಸಂಬಂಧ ಕೌಲಾಲಂಪುರದಲ್ಲಿ ವಾಸಿಸುವ ಅನಿವಾಸಿ ಭಾರತೀಯ ಎಂದು ಹೇಳಿಕೊಂಡ ಪ್ರಯಾಣಿಕನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಪರಾರಿಯಾಗಲು ಯತ್ನಿಸಿದ ಪ್ರಯಾಣಿಕ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಪ್ರಕಾರ, ದೆಹಲಿಯ ಜಾಮಾ ಮಸೀದಿ ನಿಲ್ದಾಣದಲ್ಲಿ ದಿನನಿತ್ಯದ ಲಗೇಜ್ ತಪಾಸಣೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಎಕ್ಸ್-ರೇ ಲಗೇಜ್ ತಪಾಸಣಾ ವ್ಯವಸ್ಥೆ (ಎಕ್ಸ್‌ಬಿಐಎಸ್) ಪರದೆಯಲ್ಲಿ ಅನುಮಾನಾಸ್ಪದ, ದಟ್ಟವಾದ ವಸ್ತು ಕಾಣಿಸಿಕೊಂಡಿದೆ. ತದನಂತರ ಭದ್ರತಾ ಸಿಬ್ಬಂದಿ ಪರಿಶೀಲನೆಗೆ ಮುಂದಾದಾಗ, ಪ್ರಯಾಣಿಕ ನಿರ್ಗಮನ ದ್ವಾರದ ಕಡೆಗೆ ಓಡಲು ಪ್ರಾರಂಭಿಸಿದ್ದಾನೆ. ಆತನನ್ನು ಬೆನ್ನಟ್ಟಿದ್ದ CISF ಸಿಬ್ಬಂದಿ ನಿರ್ಗಮನ ದ್ವಾರದ ಬಳಿ ಆತನನ್ನು ಬಂಧಿಸಿದ್ದು, ನಿಲ್ದಾಣದಿಂದ ಹೊರಹೋಗದಂತೆ ತಡೆದಿದ್ದಾರೆ. ಪ್ರಯಾಣಿಕನು ಮಲೇಷ್ಯಾದ ಕೌಲಾಲಂಪುರದಲ್ಲಿ ವಾಸಿಸುವ ಎನ್‌ಆರ್‌ಐ ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ನಂತರ ಆತನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಪತ್ತೆಯಾದ ಅನುಮಾನಾಸ್ಪದ ವಸ್ತು ಏನು ಎಂಬುದು ಇನ್ನೂ ತಿಳಿದುಬರಬೇಕಿದೆ.