

ನವದೆಹಲಿ: ಫ್ರಾನ್ಸ್ನಲ್ಲಿ ನಡೆದ ಹಿಂಸಾತ್ಮಕ ಗಲಭೆಗಳು ಮತ್ತು ಇತ್ತೀಚೆಗೆ ಭಾರತದಲ್ಲಿ ನಡೆದ ಪ್ರತಿಭಟನೆಗಳ ನಡುವೆ ನಂಟು ಇರಬಹುದು ಎಂದು ಆರೋಪಿಸುವ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿದ ಬಿಜೆಪಿ, ಕಾಂಗ್ರೆಸ್ ಪಕ್ಷ ದೇಶದಲ್ಲಿ "ಅರಾಜಕತೆ ಸೃಷ್ಟಿಸಲು ಮತ್ತು ಆಡಳಿತ ಬದಲಾವಣೆ"ಗೆ ಸಂಚು ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
'ದಿ ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಫ್ರಾನ್ಸ್ನಲ್ಲಿ ನಡೆದ ಗಲಭೆಗಳು ಮತ್ತು ಭಾರತದಲ್ಲಿ ಮುಖ್ಯ ಚುನಾವಣಾ ಆಯುಕ್ತ(CEC) ಜ್ಞಾನ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗಳ ನಡುವೆ ಸಂಪರ್ಕವಿರುವುದನ್ನು 'ಫಾಕ್ಸ್ ನ್ಯೂಸ್'ನ ಡಿಜಿಟಲ್ ತನಿಖೆ ಬಹಿರಂಗಪಡಿಸಿದೆ ಎಂದು ಹೇಳಲಾಗಿದೆ.
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, "ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು ರೂಪಿಸಿದ್ದಾರೆ. ರಾಹುಲ್ ಗಾಂಧಿ "ಗದ್ದಾರ್" (ದೇಶದ್ರೋಹಿ) ಎಂದು ಟೀಕಿಸಿದರು.
ಬಿಜೆಪಿಯ ಈ ಆರೋಪಗಳಿಗೆ ಕಾಂಗ್ರೆಸ್ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಹುಲ್ ಗಾಂಧಿ, ದೇಶದ್ರೋಹದ ಮಾದರಿಯನ್ನು ಪ್ರದರ್ಶಿಸುತ್ತಿದ್ದಾರೆ. ಈ ದ್ರೋಹದ ಕೊಂಡಿಗಳು ವಿದೇಶಿ ಏಜೆನ್ಸಿಗಳೊಂದಿಗೆ ಹೇಗೆ ಸಂಪರ್ಕ ಹೊಂದಿವೆ ಎಂಬುದನ್ನು ವರದಿ ಬಿಚ್ಚಿಟ್ಟಿದೆ. ಹೀಗಿರುವಾಗ ಈ ದೇಶದ್ರೋಹಿಗಳ ನಾಯಕ ಯಾರು ಎಂದು ಕೇಳುವುದು ತಪ್ಪೇನಿಲ್ಲ ಎಂದು ಆಕ್ರೋಶ ಹೊರಹಾಕಿದರು.
ವಿರೋಧ ಪಕ್ಷದ ನಾಯಕ ಇಷ್ಟು ಬೇಜವಾಬ್ದಾರಿ ಮತ್ತು ಅಪಕ್ವವಾಗಿರುವುದು ಭಾರತದ ದುರದೃಷ್ಟ. ಸಾಕ್ಷ್ಯಾಧಾರಗಳನ್ನು ಗಮನಿಸಿದರೆ, ಅವರನ್ನು ದೇಶದ್ರೋಹಿ ಅಥವಾ ‘ಮೀರ್ ಜಾಫರ್’ ಎಂದು ಕರೆಯುವುದು ತಪ್ಪಾಗುವುದಿಲ್ಲ. ಚುನಾಯಿತ ಸರ್ಕಾರಗಳನ್ನು ಉರುಳಿಸಲು ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಇಂತಹ ಸಂಘಟನೆಗಳು ರೆಡ್-ಗ್ರೀನ್ ಪ್ರತಿಭಟನಾ ವ್ಯವಸ್ಥೆಯನ್ನು(Red-Green ecosystem) ಸೃಷ್ಟಿಸಿವೆ ಎಂದು ವರದಿ ಹೇಳುತ್ತದೆ. ಇದರಲ್ಲಿ ಕೆಂಪು ಎಂದರೆ ಕಮ್ಯುನಿಸ್ಟ್ ಗುಂಪುಗಳು, ಹಸಿರು ಎಂದರೆ ಇಸ್ಲಾಮಿಕ್ ಗುಂಪುಗಳು. 101 ಸಂಘಟನೆಗಳು ಜಾಗತಿಕವಾಗಿ ಅರಾಜಕತೆ ಮತ್ತು ಅಶಾಂತಿಯನ್ನು ಹರಡುತ್ತಿವೆ ಎಂದು ಭಾಟಿಯಾ ಆರೋಪಿಸಿದರು.
ಮತ್ತೊಬ್ಬ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ, “ಜಾಗತಿಕ ತನಿಖೆಯು ಕಾಂಗ್ರೆಸ್ನ ಅರಾಜಕತೆ ಹಾಗೂ ಸರ್ಕಾರ ಉರುಳಿಸುವ ಸಂಚನ್ನು ಬಯಲು ಮಾಡಿದೆ. ‘ಪ್ರೋಗ್ರೆಸ್ಸಿವ್ ಇಂಟರ್ನ್ಯಾಷನಲ್’ (PI) ಎಂಬ ಕಮ್ಯುನಿಸ್ಟ್ ಸಂಘಟನೆಯು ಫ್ರಾನ್ಸ್, ಅಲ್ಬೇನಿಯಾ ಮತ್ತು ಭಾರತದ ಪ್ರತಿಭಟನೆಗಳ ಸಂದೇಶ ರವಾನೆಯಲ್ಲಿ ಸಮನ್ವಯ ಸಾಧಿಸುತ್ತಿದೆ. ಹೊಸ ದಂಗೆಯ ಮೂಲಕ ಅಧಿಕಾರವನ್ನು ಹಿಡಿಯುವುದು ಮತ್ತು ಆಡಳಿತ ಬದಲಿಸುವುದೇ ಇದರ ಉದ್ದೇಶ” ಎಂದು ಆರೋಪಿಸಿದ್ದಾರೆ.