'10 ವರ್ಷಗಳಲ್ಲಿ ಕನಿಷ್ಠ 270 ಬಾರಿ ರಾಹುಲ್ ಗಾಂಧಿ ವಿದೇಶ ಪ್ರವಾಸ'; ಟಿ-ಶರ್ಟ್, ಜೀನ್ಸ್ ಧರಿಸಿದ ಮಾತ್ರಕ್ಕೆ ಯಾರೂ ಯುವಕರಾಗಲ್ಲ: ನಿಶಿಕಾಂತ್ ದುಬೆ

'ಅವರು ಅಮೆರಿಕದ ರಾಜಕಾರಣಿಗಳನ್ನು ಭೇಟಿಯಾಗುತ್ತಿದ್ದಾರೆ; ಈ ರಾಜಕಾರಣಿಗಳಿಗೆ Soros Foundation ಜೊತೆ ನಂಟಿದೆ. ಹಾಗಾಗಿ, ಯಾರ ಮಾರ್ಗದರ್ಶನದಲ್ಲಿ ಅವರು ಇಂತಹ ವ್ಯಕ್ತಿಗಳನ್ನು ಭೇಟಿಯಾದರು ಎಂದು ನಾನು ಕೇಳಲು ಬಯಸುತ್ತೇನೆ' ಎಂದರು.
Nishikant Dubey
ನಿಶಿಕಾಂತ್ ದುಬೆPhoto | IANS
Updated on: 

ದುಮ್ಕಾ (ಜಾರ್ಖಂಡ್): ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು 'ದೇಶವನ್ನು ಅಸ್ಥಿರಗೊಳಿಸಲು ವಿದೇಶಿ ಶಕ್ತಿಗಳೊಂದಿಗೆ ಪಿತೂರಿ ನಡೆಸುತ್ತಿದ್ದಾರೆ' ಎಂದು ಆರೋಪಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಅವರ ವಿದೇಶ ಪ್ರವಾಸಗಳ ಬಗ್ಗೆ ತನಿಖೆ ನಡೆಸಬೇಕೆಂದು ಗುರುವಾರ ಆಗ್ರಹಿಸಿದ್ದಾರೆ.

ಜಾರ್ಖಂಡ್‌ನ ದುಮ್ಕಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದುಬೆ, ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ 'ನಕಲಿ ಪ್ರತಿಭಟನಾ ಚಳುವಳಿಯನ್ನು ಸೃಷ್ಟಿಸಲು' ಪ್ರಯತ್ನಗಳು ನಡೆದಿವೆ. ಕೃತಕ ಬುದ್ಧಿಮತ್ತೆ (AI), ಕ್ರಿಪ್ಟೋಕರೆನ್ಸಿ, ಬಿಟ್‌ಕಾಯಿನ್ ಮತ್ತು ಆನ್‌ಲೈನ್ ಜೂಜಾಟಕ್ಕೆ ಸಂಬಂಧಿಸಿದ ಜಾಲಗಳ ಮೂಲಕ ದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸುವ ಪಿತೂರಿಯ ಭಾಗ ಇದಾಗಿದೆ ಎಂದು ಪ್ರತಿಪಾದಿಸಿದ್ದಾರೆ.

'ಕಳೆದ 10 ವರ್ಷಗಳಲ್ಲಿ ರಾಹುಲ್ ಗಾಂಧಿ ಸುಮಾರು '270 ಬಾರಿ' ವಿದೇಶ ಪ್ರವಾಸ ಕೈಗೊಂಡಿದ್ದಾರೆ. ರಾಹುಲ್ ಗಾಂಧಿ ಯಾರನ್ನು ಭೇಟಿಯಾದರು, ವಿದೇಶ ಪ್ರವಾಸದ ವೇಳೆ ಅವರು ಯಾರ ಸಂಪರ್ಕಕ್ಕೆ ಬಂದರು ಮತ್ತು 'ಭಾರತ್ ಜೋಡೋ ಯಾತ್ರೆ'ಯಲ್ಲಿ ಯಾರೆಲ್ಲ ಭಾಗವಹಿಸಿದ್ದರು ಎಂಬುದರ ಕುರಿತು ತನಿಖೆಯಾಗಬೇಕು' ಎಂದು ಆಗ್ರಹಿಸಿದರು.

'ವಿದೇಶಿ ಸಂಪರ್ಕಗಳನ್ನು 'ದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಪಿತೂರಿಗಳಲ್ಲಿ' ಬಳಸಲಾಗುತ್ತಿದೆ' ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಹಾಗೂ ನೆವಿಲ್ಲೆ ರಾಯ್ ಸಿಂಘಮ್ ಅವರ ಜಾಲಕ್ಕೆ ಸಂಬಂಧಿಸಿದ ಅಮೆರಿಕದ ವರದಿಯೊಂದನ್ನು ಉಲ್ಲೇಖಿಸಿದ ನಿಶಿಕಾಂತ್ ದುಬೆ, ಬಿಟ್‌ಕಾಯಿನ್, ಕ್ರಿಪ್ಟೋಕರೆನ್ಸಿ ಮತ್ತು ಆನ್‌ಲೈನ್ ಜೂಜಾಟಕ್ಕೆ ಸಂಬಂಧಿಸಿದ ಆರ್ಥಿಕ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.

ಮತದಾರರ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'ಯಲ್ಲಿ (SIR) ನಡೆದಿರಬಹುದಾದ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಗಳನ್ನು 'ಜೆನ್ ಝಡ್' ಚಳುವಳಿ ಎಂದು ಬಣ್ಣಿಸಿರುವುದನ್ನೂ ಅವರು ಪ್ರಶ್ನಿಸಿದರು.

Nishikant Dubey
'ನಾನು 'ಟ್ರಾವೆಲ್ ಏಜೆಂಟ್' ಅಲ್ಲ, ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ': ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಕೇಳಿದ್ದಕ್ಕೆ ಶಶಿ ತರೂರ್

ದೆಹಲಿ ಹೈಕೋರ್ಟ್ ಇತ್ತೀಚೆಗೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಉಲ್ಲೇಖಿಸಿದ ಅವರು, ಈ ಚಳುವಳಿಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಯಸ್ಸು ಮತ್ತು ಹಿನ್ನೆಲೆಯ ಬಗ್ಗೆ ಪ್ರತಿಕ್ರಿಯಿಸಿದರು.

ಜಂತರ್ ಮಂತರ್‌ನಲ್ಲಿ ಅತಿಕ್ರಮ ಪ್ರವೇಶ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿದ್ದನ್ನು ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ದೆಹಲಿ ಹೈಕೋರ್ಟ್ ಬುಧವಾರ ಒಂದು ಪ್ರಶ್ನೆಯನ್ನು ಎತ್ತಿತು. ಇವರ ವಯಸ್ಸು ಕ್ರಮವಾಗಿ 27 ಮತ್ತು 32 ವರ್ಷಗಳು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ, ಇವರನ್ನು ತಾಂತ್ರಿಕವಾಗಿ 'ಜೆನ್ ಝಡ್' (Gen Z) ಎಂದು ಕರೆಯಬಹುದೇ ಎಂದು ಪ್ರಶ್ನಿಸಿತು.

ಇದಲ್ಲದೆ, ನಿಶಿಕಾಂತ್ ದುಬೆ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಯಸ್ಸಿನ ಬಗ್ಗೆ ವ್ಯಂಗ್ಯವಾಡುತ್ತಾ, 'ಕೇವಲ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ ಮಾತ್ರಕ್ಕೆ ಯಾರೂ ಯುವಕರಾಗುವುದಿಲ್ಲ' ಎಂದು ಹೇಳಿದರು.

ಇತ್ತೀಚಿನ ಪ್ರತಿಭಟನೆಗಳಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್, ರಾಜಕೀಯ ಕಾರ್ಯಕರ್ತ ಯೋಗೇಂದ್ರ ಯಾದವ್ ಮತ್ತು ಸಿಪಿಐ-ಎಂ ನಾಯಕಿ ಬೃಂದಾ ಕಾರಟ್ ಭಾಗವಹಿಸಿದ್ದನ್ನು ಉಲ್ಲೇಖಿಸಿದ ದುಬೆ, ಇಂತಹ ಮುಖಗಳು ದೀರ್ಘಕಾಲದಿಂದಲೂ ವಿವಿಧ ಪ್ರತಿಭಟನಾ ಚಳುವಳಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿವೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com