

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ತಮ್ಮ ಮುಂಬರುವ ಪುಸ್ತಕದ ಕುರಿತು ಪೋಸ್ಟ್ ಮಾಡುವ ಮೂಲಕ ಇನ್ಸ್ಟಾಗ್ರಾಂಗೆ ಪದಾರ್ಪಣೆ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿನ ತಮ್ಮ ಮೊದಲ ಪೋಸ್ಟ್ನಲ್ಲಿ, ಸೋನಿಯಾ ಗಾಂಧಿ ಅವರು ತಮ್ಮ ಮುಂಬರುವ ಪುಸ್ತಕ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'ನ ಪ್ರತಿಗಳನ್ನು ಸ್ವೀಕರಿಸುತ್ತಿರುವ ವಿಡಿಯೋ ತುಣುಕೊಂದನ್ನು ಹಂಚಿಕೊಂಡರು.
'ಎಲ್ಲರಿಗೂ ನಮಸ್ಕಾರ. 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಕೃತಿಯ ಫಸ್ಟ್ ಲುಕ್ ಅನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಕೃತಜ್ಞತಾ ಭಾವವಿದೆ. ಇದು ಪ್ರೀತಿ, ಕರ್ತವ್ಯ, ನಷ್ಟ ಮತ್ತು ತಮಗೆ ಸೂಕ್ತವಾದ ನೆಲೆ ಅಥವಾ ಸ್ಥಾನವನ್ನು ಕಂಡುಕೊಳ್ಳುವ ಬಗೆಗಿನ ಕಥೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ' ಎಂದು ಅವರು ಶೀರ್ಷಿಕೆ ನೀಡಿದ್ದಾರೆ.
ಕಾಂಗ್ರೆಸ್ನ ಎಕ್ಸ್ ಖಾತೆಯಲ್ಲಿ ಕೂಡ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 'ಒಂದು ಹೊಸ ಅಧ್ಯಾಯ, ಕಥೆಗಳನ್ನು ಹಂಚಿಕೊಳ್ಳುವ ಒಂದು ಹೊಸ ವಿಧಾನ. ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಕೃತಿಯ ಫಸ್ಟ್ ಲುಕ್ ಹಂಚಿಕೊಳ್ಳುವ ಮೂಲಕ ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ್ದಾರೆ. 'ಪ್ರೀತಿ, ಕರ್ತವ್ಯ, ನಷ್ಟ ಮತ್ತು 'ನೆಲೆ'ಯ ಹುಡುಕಾಟವನ್ನು ಪರಿಶೋಧಿಸುವ ಕಥೆಯಿದು'. ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹ, ಹೃದಯಸ್ಪರ್ಶಿ ಪಯಣವಿದು ಎಂದು ಬರೆಯಲಾಗಿದೆ.
ಇನ್ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿರುವ ಸೋನಿಯಾ ಗಾಂಧಿ ಅವರು ತಮ್ಮ ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ಅವರ ಇನ್ಸ್ಟಾಗ್ರಾಂ ಖಾತೆಗಳನ್ನು, ಹಾಗೆಯೇ ಪಕ್ಷದ ಖಾತೆಯನ್ನೂ ಫಾಲೋ ಮಾಡಿದ್ದಾರೆ.
ರಾಹುಲ್ ಗಾಂಧಿ ಸೇರಿದಂತೆ, ಇನ್ಸ್ಟಾಗ್ರಾಂನಲ್ಲಿರುವ ಕಾಂಗ್ರೆಸ್ನ ಎಲ್ಲ ಪ್ರಮುಖ ನಾಯಕರು, ಕಾಂಗ್ರೆಸ್ನ ಮಾಜಿ ಅಧ್ಯಕ್ಷರ ಖಾತೆಯನ್ನು ಫಾಲೋ ಮಾಡಲು ಆರಂಭಿಸಿದರು.
ಹಲವು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಸೋನಿಯಾ ಗಾಂಧಿ ಅವರನ್ನು ಶ್ಲಾಘಿಸಿದರು ಮತ್ತು ಅವರ ಪುಸ್ತಕದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು.
ಗಾಂಧಿ ಅವರು ಪೋಸ್ಟ್ ಮಾಡಿದ ವಿಡಿಯೋ ತುಣುಕನ್ನು ಹಂಚಿಕೊಂಡ ಕಾಂಗ್ರೆಸ್ನ ಸಂವಹನ ವಿಭಾಗದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆಯು ನವೆಂಬರ್ 10ರಂದು ಬಿಡುಗಡೆಯಾಗಲಿದೆ' ಎಂದು ಹೇಳಿದರು.
ಲೇಖಕರ ಪ್ರತಿನಿಧಿಗಳು ಮತ್ತು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ, ಸೋನಿಯಾ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಭಾರತದಲ್ಲಿ ಪ್ರಕಟವಾಗುವುದರ ಬಗ್ಗೆ ಇದ್ದ ಅನಿಶ್ಚಿತತೆ ಕೊನೆಗೊಂಡಿದೆ. ಈ ಪುಸ್ತಕವನ್ನು ನವೆಂಬರ್ 10 ರಂದು ಭಾರತದಲ್ಲಿ ಪ್ರಕಟಿಸುವುದಾಗಿ ಹಾರ್ಪರ್ಕಾಲಿನ್ಸ್ ಇಂಡಿಯಾ (HarperCollins India) ಕಳೆದ ತಿಂಗಳು ತಿಳಿಸಿದೆ.
'ನಮ್ಮ ಕಾಲದ ಅತ್ಯಂತ ನಿರೀಕ್ಷಿತ ರಾಜಕೀಯ ಆತ್ಮಚರಿತ್ರೆಗಳಲ್ಲಿ ಒಂದಾದ 'ಬಿಲಾಂಗಿಂಗ್', ಪ್ರೀತಿ, ಗುರುತು, ಕರ್ತವ್ಯ ಮತ್ತು ಸೇರುವಿಕೆಯ ಭಾವನೆಗೆ ಸಂಬಂಧಿಸಿದ ಒಂದು ನಾಟಕೀಯ ಹಾಗೂ ಅತ್ಯಂತ ವೈಯಕ್ತಿಕ ಕಥೆಯಾಗಿದೆ. ಇದು ಭಾರತದ ಪಯಣದ ಕುರಿತು, ಒಳಗಿನ ವ್ಯಕ್ತಿಯೊಬ್ಬರ ಅಪರೂಪದ ದೃಷ್ಟಿಕೋನವನ್ನು ಒದಗಿಸುತ್ತದೆ' ಎಂದು ಹಾರ್ಪರ್ಕಾಲಿನ್ಸ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ಹಾರ್ಪರ್ಕಾಲಿನ್ಸ್ ಇಂಡಿಯಾದ ಈ ಘೋಷಣೆಯು, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (PRHI) ಒಳಗೊಂಡಿದ್ದ ವಿವಾದವೊಂದರ ಬೆನ್ನಲ್ಲೇ ಬಂದಿದೆ. ಆರಂಭದಲ್ಲಿ ಈ ಆತ್ಮಚರಿತ್ರೆಯನ್ನು ಪ್ರಕಟಿಸಲು ಆಸಕ್ತಿ ತೋರಿಸಿದ್ದ PRHI, ನಂತರ ತಾನು ಭಾರತದಲ್ಲಿ ಇದನ್ನು ಪ್ರಕಟಿಸುವುದಿಲ್ಲ ಎಂದು ತಿಳಿಸಿತ್ತು. ಹಸ್ತಪ್ರತಿಯಲ್ಲಿನ ಸಂಪಾದಕೀಯ ಬದಲಾವಣೆಗಳ ವಿಷಯಕ್ಕೆ ಸಂಬಂಧಿಸಿದಂತೆ, ಪ್ರಕಾಶಕರು ಮತ್ತು ಲೇಖಕರ ಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ ಎಂದು ವರದಿಯಾಗಿತ್ತು.