

ತಿರುವನಂತಪುರಂ: ಕೇರಳದ 29ನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಹಿರಿಯ ಬಿಜೆಪಿ ಮುಖಂಡ ಓಂ ಪ್ರಕಾಶ್ ಮಾಥುರ್, ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ರಾಜ್ಯದಲ್ಲಿ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದಾರೆ.
ರಾಜಭವನದ (ಲೋಕ ಭವನ) ಅಡುಗೆಮನೆಯಲ್ಲಿ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರವನ್ನು ಮಾತ್ರ ತಯಾರಿಸಬೇಕು ಮತ್ತು ಯಾವುದೇ ಮಾಂಸಾಹಾರಿ ಖಾದ್ಯಗಳನ್ನು ಬೇಯಿಸಬಾರದು ಎಂದು ಅವರು ನೀಡಿರುವ ನಿರ್ದೇಶನವು ಆಡಳಿತಾರೂಢ ಕಾಂಗ್ರೆಸ್ ಮೈತ್ರಿಕೂಟ ಹಾಗೂ ವಿರೋಧ ಪಕ್ಷ ಸಿಪಿಐ(ಎಂ) ಎರಡರ ಕೆಂಗಣ್ಣಿಗೆ ಗುರಿಯಾಗಿದೆ.
ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೌಮೆನ್ ಸೇನ್ ಅವರು ಮಾಥುರ್ ಅವರಿಗೆ ಪ್ರಮಾಣ ವಚನ ಬೋಧಿಸಿದ ಕೆಲವೇ ಗಂಟೆಗಳಲ್ಲಿ ಈ ಹೊಸ ನಿಯಮ ಜಾರಿಗೆ ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ವಾಕ್ಸಮರಕ್ಕೆ ನಾಂದಿ ಹಾಡಿದೆ. ತಮಿಳುನಾಡು ರಾಜ್ಯಪಾಲರಾಗಿ ವರ್ಗಾವಣೆಗೊಂಡ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಸ್ಥಾನಕ್ಕೆ ಮಾಥುರ್ ನೇಮಕಗೊಂಡಿದ್ದಾರೆ.
ಕೇರಳಂನ ಹೊಸ ರಾಜ್ಯಪಾಲ ಓಂ ಪ್ರಕಾಶ್ ಮಾಥೂರ್ ಅವರು, ಲೋಕಭವನದ ಅಡುಗೆಮನೆಯಲ್ಲಿ ಕಡ್ಡಾಯವಾಗಿ ಸಸ್ಯಾಹಾರಿ ಆಹಾರ ಮಾತ್ರ ತಯಾರಿಸಬೇಕೆಂದು ಮಾಡಿದ್ದಾರೆ ಎನ್ನಲಾದ ಆದೇಶದ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತೀವ್ರವಾಗಿ ಟೀಕಿಸಿದ್ದಾರೆ.
ಇದು ಸಂಘ ಪರಿವಾರದ ಅಸಾಂವಿಧಾನಿಕ ಹಿತಾಸಕ್ತಿಯ ಪ್ರತಿಬಿಂಬವಾಗಿದೆ ಎಂದಿದ್ದಾರೆ. ಕೇರಳಂನ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿರುವ ಮಾಥೂರ್, ಲೋಕಭವನದಲ್ಲಿ ಮಾಂಸಾಹಾರದ ಅಡುಗೆ ಮಾಡುವುದು, ಬಡಿಸುವುದನ್ನು ಮಾಡುವಂತಿಲ್ಲ ಎಂದು ಆದೇಶಿಸಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.
ಲೋಕಭವನದ ಅಡುಗೆಮನೆಯಲ್ಲಿ ಸಸ್ಯಾಹಾರಿ ಆಹಾರ ಮಾತ್ರ ತಯಾರಿಸಬೇಕೆಂದು ಆದೇಶಿಸುವ ಮೂಲಕ ರಾಜ್ಯಪಾಲರು ಬಹಳ ಮುಂದೆ ಹೋಗಿದ್ದಾರೆ ಎಂದು ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ. ಕೇರಳಂನಲ್ಲಿ ಮಿಶ್ರ ಆಹಾರ ಸಂಸ್ಕೃತಿ ಇದೆ.
ಕರಾವಳಿ ರಾಜ್ಯವಾಗಿ ಹೇರಳವಾಗಿ ಮೀನು ದೊರೆಯುತ್ತದೆ. ಸಸ್ಯಾಹಾರ ಅಥವಾ ಮಾಂಸಾಹಾರ ಸೇವನೆ ನಿರ್ಧಾರ ಮಾಡುವ ಹಕ್ಕು ಇಲ್ಲಿನ ಜನರಿಗಿದೆ ಎಂದಿದ್ದಾರೆ. ಆಹಾರ ಹವ್ಯಾಸಕ್ಕೆ ನಿರ್ಬಂಧ ಹೇರುವ ಯಾವುದೇ ಯತ್ನ ಮತ್ತು ಅವರು ಇಂತಹದ್ದೇ ಆಹಾರ ತಿನ್ನಬೇಕೆಂದು ಒತ್ತಾಯಿಸುವ ಸರ್ವಾಧಿಕಾರಿ ಧೋರಣೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ನಾವು ಏನು ತಿನ್ನಬೇಕು ಮತ್ತು ಹೇಗೆ ಬದುಕಬೇಕು ಎಂಬುದನ್ನು ನಿರ್ಧರಿಸುವ ಜನರ ಹಕ್ಕನ್ನು ರಕ್ಷಿಸುವುದು ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ಕರ್ತವ್ಯವಾಗಿರುತ್ತದೆ. ಅಂತಹವರೇ ಇತರರು ತಮ್ಮದೇ ಆಹಾರ ಪದ್ಧತಿಯನ್ನು ಅನುಸರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಗೃಹ ಸಚಿವ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯಿಸಿ, “ಒಬ್ಬರು ಏನು ಧರಿಸಬೇಕು, ಯಾವ ಭಾಷೆ ಮಾತನಾಡಬೇಕು ಮತ್ತು ಏನು ತಿನ್ನಬೇಕು ಎಂಬುದು ಅವರ ಸಂಪೂರ್ಣ ವೈಯಕ್ತಿಕ ಹಕ್ಕು. ನಮಗೆ ಏನು ಬೇಕೋ ಅದನ್ನು ತಿನ್ನುವ ಸ್ವಾತಂತ್ರ್ಯ ನಮಗಿದೆ, ಅದನ್ನು ಯಾರೂ ನಿರ್ಬಂಧಿಸಲು ಸಾಧ್ಯವಿಲ್ಲ” ಎಂದರು.
ಸಿಪಿಐ(ಎಂ) ಎಂ.ವಿ. ಗೋವಿಂದನ್ ಆಕ್ರೋಶ: ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು, “ಪ್ರಜಾಪ್ರಭುತ್ವದಲ್ಲಿ ಆಹಾರದ ಆಯ್ಕೆಯನ್ನು ಕಸಿದುಕೊಳ್ಳಲು ಯತ್ನಿಸಲಾಗುತ್ತಿದೆ. ದೇಶದಲ್ಲಿ ಆಹಾರವನ್ನೂ ಸಹ ಕೋಮುವಾದಿ ಅಸ್ತ್ರವನ್ನಾಗಿ ಬಳಸಿ ಧ್ರುವೀಕರಣ ಮಾಡುವ ಹುನ್ನಾರ ಇದರ ಹಿಂದಿದೆ” ಎಂದು ದೂರಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಭವನದ ಮೂಲಗಳು, ಮಾಥೂರ್ ಅವರು ಸಸ್ಯಾಹಾರಿಯಾಗಿರುವುದರಿಂದ ಮಾಂಸಾಹಾರದ ಅಡುಗೆ ಮಾಡದಂತೆ ನಿರ್ದೇಶನ ನೀಡಿದ್ದಾರೆ. ನೌಕರರ ಆಹಾರ ಆಯ್ಕೆಗೆ ಯಾವುದೇ ನಿರ್ಬಂಧ ಇಲ್ಲ ಎಂದು ಹೇಳಿವೆ.