

ಮುಂಬೈ: ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಜಲವಿದ್ಯುತ್ ಯೋಜನೆಯೊಂದರ ಶಂಕುಸ್ಥಾಪನೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಪರಿಸರ ಸೂಕ್ಷ್ಮ ವಲಯವಾದ ಭೀಮಾಶಂಕರ ವನ್ಯಜೀವಿ ಅಭಯಾರಣ್ಯದ ಬಳಿ 32,000ಕ್ಕೂ ಹೆಚ್ಚು ಮರಗಳನ್ನು ಕಡಿಯುವಂತೆ ಮಹಾರಾಷ್ಟ್ರ ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಮಂಗಳವಾರ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ, ಅರಣ್ಯ ಅಧಿಕಾರಿಯೊಬ್ಬರು ಹೊರಡಿಸಿದರೆನ್ನಲಾದ ಪತ್ರವೊಂದನ್ನು ಅವರು ಹಂಚಿಕೊಂಡಿದ್ದಾರೆ. ರಾಯಗಢ ಜಿಲ್ಲೆಯಲ್ಲಿ ಕೈಗೊಳ್ಳಲಿರುವ 13,505 ಕೋಟಿ ರೂ. ವೆಚ್ಚದ 'ಸೈಡೋಂಗರ್-I ಕರ್ಜತ್ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ'ಗಾಗಿ 233 ಹೆಕ್ಟೇರ್ ಭೂಮಿಯನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಆ ಪತ್ರದಲ್ಲಿ ತಿಳಿಸಲಾಗಿದೆ.
3,000 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆಗಾಗಿ ಕರ್ಜತ್ನಲ್ಲಿರುವ 197 ಹೆಕ್ಟೇರ್ ಮೀಸಲು ಅರಣ್ಯ, 26 ಹೆಕ್ಟೇರ್ ಖಾಸಗಿ ಅರಣ್ಯ ಮತ್ತು 9 ಹೆಕ್ಟೇರ್ ಸಂರಕ್ಷಿತ ಅರಣ್ಯ ಭೂಮಿಯನ್ನು ತೆರವುಗೊಳಿಸಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗುಜರಾತ್ ಮೂಲದ 'ಟೊರೆಂಟ್ ಪವರ್' (Torrent Power) ಸಂಸ್ಥೆಯ ಯೋಜನೆಗೆ ದಾರಿ ಮಾಡಿಕೊಡಲು ಮಹಾಯುತಿ ಸರ್ಕಾರವು ಅರಣ್ಯಗಳಿಗೆ ಹಾನಿ ಮಾಡುತ್ತಿದೆ. ವನ್ಯಜೀವಿಗಳಿಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಹಾಗೂ ಪರಿಸರ ಹೋರಾಟಗಾರರು ಟೀಕಿಸಿದ್ದಾರೆ.
ಈ ಯೋಜನಾ ಸ್ಥಳವು ಭೀಮಾಶಂಕರ ವನ್ಯಜೀವಿ ಅಭಯಾರಣ್ಯದಿಂದ 16 ಕಿ.ಮೀ ಮತ್ತು ಭೀಮಾಶಂಕರ ದೇವಾಲಯದಿಂದ 20 ಕಿ.ಮೀ ದೂರದಲ್ಲಿದೆ. 13,505 ಕೋಟಿ ರೂ. ಅಂದಾಜು ಹೂಡಿಕೆಯ ಈ ಯೋಜನೆಯು, ಮಹಾರಾಷ್ಟ್ರ ಮತ್ತು ಇತರ ಪ್ರದೇಶಗಳಲ್ಲಿ ವಿದ್ಯುತ್ ಗ್ರಿಡ್ನ ವಿಶ್ವಾಸಾರ್ಹತೆಯನ್ನು ಬಲಪಡಿಸುವ ಹಾಗೂ ಇಂಧನ ಭದ್ರತೆಯನ್ನು ಸುಧಾರಿಸುವ ನಿರೀಕ್ಷೆಯಿದೆ.
ಕರ್ಜತ್ ಪೂರ್ವ ವಲಯ ಅರಣ್ಯಾಧಿಕಾರಿ ಸಮೀರ್ ಶಿಂಧೆ ಅವರ ಹೆಸರಿನಲ್ಲಿರುವ ಪತ್ರದ ಪ್ರಕಾರ, ಭೂ ಪರಿವರ್ತನಾ ಪ್ರಸ್ತಾವನೆಯ ಅಡಿಯಲ್ಲಿ ಅನುಮೋದಿಸಲಾದ 32,490 ಮರಗಳನ್ನು ಮಾತ್ರ ಕಡಿಯಲು ಅವಕಾಶವಿದೆ.
ಈ ಯೋಜನೆಯ ಉದ್ಘಾಟನಾ ಸಮಾರಂಭಕ್ಕಾಗಿ 2026ರ ನವೆಂಬರ್ 3ರಂದು ಪ್ರಧಾನಿ ಮೋದಿ ಅವರು ಭೇಟಿ ನೀಡಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿತ ಮರಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ರಾವತ್ ಹಂಚಿಕೊಂಡಿರುವ ಪತ್ರದಲ್ಲಿ ತಿಳಿಸಲಾಗಿದೆ.
ಈ ಯೋಜನೆಯನ್ನು ಬೆಂಬಲಿಸಿದ್ದಕ್ಕಾಗಿ ಹಿರಿಯ ವಕೀಲರು ಹಾಗೂ ಬಿಜೆಪಿ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯ ಉಜ್ವಲ್ ನಿಕಮ್ ಅವರನ್ನೂ ರಾವತ್ ಟೀಕಿಸಿದ್ದಾರೆ. ಹಸಿರು ಹೊದಿಕೆಯ ನಾಶಕ್ಕೆ ಕಾರಣವಾಗುವ ಇಂತಹ ಯೋಜನೆಯನ್ನು ಬೆಂಬಲಿಸುವ ಬದಲು, ನಿಕಮ್ ಅವರು ಸಾರ್ವಜನಿಕರ ಪರವಾಗಿ ನಿಲ್ಲಬೇಕು ಎಂದು ಅವರು ಒತ್ತಾಯಿಸಿದ್ದಾರೆ.