

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಜೆಪಿ ತನ್ನ ಸಾಮಾಜಿಕ ಮಾಧ್ಯಮಗಳ ಮೂಲಕ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ಈ ನಿಟ್ಟಿನಲ್ಲಿ, ಪ್ರಧಾನಿ ಮೋದಿ ಎಲ್ಲೂ ಹೋಗುವುದಿಲ್ಲ ಮತ್ತು ಅವರಿಗೆ ಜನರ ಬೆಂಬಲವಿದೆ ಎಂದು ಪ್ರತಿಪಾದಿಸುವ ಹಾಡೊಂದನ್ನು ಸೃಷ್ಟಿಸಿ, ಬಿಡುಗಡೆ ಮಾಡಿದೆ.
"ಮೋದಿ ಕಹಿ ನಹಿ ಜಾಯೇಗ(ಮೋದಿ ಎಲ್ಲೂ ಹೋಗೋದಿಲ್ಲ)" ಎಂಬ ಹಾಡೊಂದನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಬಿಜೆಪಿ, ಪ್ರಧಾನಿ ವಿರುದ್ಧ ಟೀಕೆಗಳನ್ನು ಮಾಡುತ್ತಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಪಕ್ಷದ ವಕ್ತಾರ ಸಂಬಿತ್ ಪಾತ್ರ, ಕೇಂದ್ರ ಸಚಿವ ಪಿಯೂಷ್ ಗೋಯಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ದೆಹಲಿ ಬಿಜೆಪಿ ನಾಯಕಿ ರೇಖಾ ಗುಪ್ತಾ ಮತ್ತು ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಈ ಮ್ಯೂಸಿಕ್ ವಿಡಿಯೋವನ್ನು ತಮ್ಮ 'ಎಕ್ಸ್' (X) ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಪಕ್ಷದ ಇತರ ನಾಯಕರು ಮತ್ತು ಪದಾಧಿಕಾರಿಗಳು ಕೂಡ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಈ ಹಾಡು, ವಿರೋಧ ಪಕ್ಷದವರು ಮೋದಿಯವರ ವಿರುದ್ಧ ಅವಹೇಳನಕಾರಿ ಭಾಷೆ ಬಳಸುತ್ತಿದ್ದಾರೆ ಎಂದು ಆರೋಪಿಸುತ್ತದೆ. ಆದಾಗ್ಯೂ ಮೋದಿಯವರು ತಮ್ಮ ಭರವಸೆಗಳನ್ನು ಈಡೇರಿಸುವುದನ್ನು ಮುಂದುವರಿಸಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಅಲ್ಲದೆ ಹಿಂದಿ ಭಾಷೆಯಲ್ಲಿರುವ ಈ ಹಾಡಿನಲ್ಲಿ ಪ್ರಧಾನಿ ಮೋದಿಯವರ ಸಾಧನೆಗಳನ್ನು ಕೂಡ ಪ್ರಸ್ತಾಪಿಸಲಾಗಿದೆ.
‘ಪ್ರಧಾನಿ ಮೋದಿ ದೇಶದ ಜೊತೆಗಿದ್ದಾರೆ, ದೇಶದ ಜನರು ಮೋದಿಯವರ ಜೊತೆಗಿದ್ದಾರೆ’ ಎಂಬ ಕ್ಯಾಪ್ಷನ್ ನೀಡಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಕಳೆದ ಭಾನುವಾರ ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸದ್ಯದಲ್ಲೇ ನರೇಂದ್ರ ಮೋದಿ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಹೇಳಿದ್ದರು. ಆಗ ಅಲ್ಲಿದ್ದ ಮೋದಿ ಅಭಿಮಾನಿಯೊಬ್ಬರು ಸಭಾಂಗಣದ ಮಧ್ಯ ನಿಂತು “ಮೋದಿ ಕಹಿ ನಹಿ ಜಾಯೇಗ (ಮೋದಿ ಅಧಿಕಾರದಿಂದ ಕೆಳಗಿಳಿಯೋದಿಲ್ಲ) ” ಎಂದು ಹೇಳಿದ್ದರು. ಇದನ್ನು ಕೇಳಿ ರೊಚ್ಚಿಗೆದ್ದ ಮಲ್ಲಿಕಾರ್ಜುನ ಖರ್ಗೆ, 'ಮೋದಿ ಏನ್ ಅವರ ಅಪ್ಪನೂ ಹೋಗುತ್ತಾನೆ' ಎಂದು ತಿರುಗೇಟು ನೀಡಿದ್ದರು.