

ಮಧ್ಯಪ್ರದೇಶದಲ್ಲಿ ನವೆಂಬರ್ 12ರಂದು ನಡೆಯಲಿರುವ ರಾಜ್ಯಸಭೆ ಉಪಚುನಾವಣೆಗೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಬಿಜೆಪಿ ಗುರುವಾರ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಪುರಿ ಅವರ ಉಮೇದುವಾರಿಕೆಯನ್ನು ಅನುಮೋದಿಸಿದೆ ಎಂದು ಬಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
74 ವರ್ಷದ ಪುರಿ ಅವರು ಸದ್ಯ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದು, ಅವರ ಅಧಿಕಾರಾವಧಿಯು ನವೆಂಬರ್ 25 ರಂದು ಕೊನೆಗೊಳ್ಳಲಿದೆ.
ಕೇಂದ್ರ ಸಚಿವರಾಗಿದ್ದ ಎಲ್. ಮುರುಗನ್ ಅವರು ಅಕ್ಟೋಬರ್ 14ರಂದು ರಾಜ್ಯಸಭಾ ಸದಸ್ಯತ್ವಕ್ಕೆ ಹಾಗೂ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಈ ಉಪಚುನಾವಣೆ ನಡೆಯಬೇಕಾಯಿತು. ಮುರುಗನ್ ಅವರು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಹಾಗೂ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಮುರುಗನ್ ಅವರ ರಾಜ್ಯಸಭಾ ಅವಧಿಯು ಏಪ್ರಿಲ್ 2, 2030ರಂದು ಕೊನೆಗೊಳ್ಳಬೇಕಿತ್ತು. ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಪಡಿಸುವತ್ತ ಗಮನಹರಿಸಲು ಬಯಸುವುದಾಗಿ ಅವರು ಹೇಳಿದ್ದರು.
ಮಧ್ಯ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ, ಅಲ್ಲಿನ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವ ನಿರೀಕ್ಷೆಯಿದೆ. ರಾಜ್ಯಸಭಾ ಸದಸ್ಯರನ್ನು ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ಆಯ್ಕೆ ಮಾಡುತ್ತಾರೆ.
ಚುನಾವಣಾ ವೇಳಾಪಟ್ಟಿಯ ಪ್ರಕಾರ, ನವೆಂಬರ್ 12 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.