

ನವದೆಹಲಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಬಳಿಕ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಈ ಬಾರಿ ಬೆಟ್ಟಿಂಗ್ ಆಪರೇಟರ್ ಗಳಿಗೆ ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ ವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ ದೆಹಲಿಯ ಬೆಟ್ಟಿಂಗ್ ಆಪರೇಟರ್ ಸಾಹಿಲ್ ಜೈನ್ ಅಲಿಯಾಸ್ ‘ಗೂಗಲ್ ಭಾಯ್’ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ವೊಂದು ಇದೀಗ ಮುನ್ನೆಲೆಗೆ ಬಂದಿದೆ.
ಈ ಸಂಭಾಷಣೆಯಲ್ಲಿ ಉದ್ಯಮಿ ಮತ್ತು ಅವರ ಕುಟುಂಬಕ್ಕೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುವುದು ಕೇಳಿಬಂದಿದೆ ಎನ್ನಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ದೆಹಲಿಯಲ್ಲಿ ಉದ್ಯಮಿಯ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಉತ್ತರ ದೆಹಲಿಯ ಪಿತಾಂಪುರ ಪ್ರದೇಶದಲ್ಲಿರುವ ಉದ್ಯಮಿಯ ನಿವಾಸದ ಮುಂದೆ ಬುಧವಾರ ಬೆಳಗಿನ ಜಾವ ಸುಮಾರು 5 ಗಂಟೆಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಕೋರರು ಆರು ಸುತ್ತು ಗುಂಡು ಹಾರಿಸಿದ್ದು, ಮನೆಯ ಗೋಡೆ ಹಾಗೂ ಹೊರಗೆ ನಿಲ್ಲಿಸಿದ್ದ ಕಾರಿಗೆ ಗುಂಡುಗಳು ತಗುಲಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯ ಬಳಿಕ ಪೊಲೀಸರು ಪ್ರದೇಶದ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ ನಿಗಾ ಹೆಚ್ಚಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾಣಿಸಿಕೊಂಡಿದ್ದು, ಅವರಲ್ಲಿ ಒಬ್ಬಾತ ಬೈಕ್‌ನಿಂದ ಇಳಿದು ಹಲವು ಸುತ್ತು ಗುಂಡು ಹಾರಿಸಿದ ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
2021ರಲ್ಲೇ ಬೆದರಿಕೆ ಕರೆ ಬಂದಿತ್ತು!
ಸಾಹಿಲ್ ಜೈನ್ ಅಲಿಯಾಸ್ ‘ಗೂಗಲ್’ಗೆ 2021ರಲ್ಲಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್‌ನಿಂದ ಬೆದರಿಕೆ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ 2023ರಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಆ ಬಳಿಕ ಯಾವುದೇ ಹೊಸ ಬೆದರಿಕೆ ಬಂದಿರುವ ಬಗ್ಗೆ ಮಾಹಿತಿ ಇಲ್ಲ. ಬುಧವಾರ ನಡೆದ ಗುಂಡಿನ ದಾಳಿಯ ಹೊಣೆಯನ್ನೂ ಯಾರೂ ಹೊತ್ತುಕೊಂಡಿಲ್ಲ ಎಂದು ವಾಯವ್ಯ ದೆಹಲಿಯ ಉಪ ಪೊಲೀಸ್ ಆಯುಕ್ತೆ ಆಕಾಂಕ್ಷಾ ಯಾದವ್ ತಿಳಿಸಿದ್ದಾರೆ.
ಗುಂಡಿನ ದಾಳಿಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಣ ವಸೂಲಿ ಮಾಡುವ ಉದ್ದೇಶದಿಂದ ದಾಳಿ ನಡೆದಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಆದರೆ, ದಾಳಿಯ ನಿಖರ ಉದ್ದೇಶ ಇನ್ನೂ ದೃಢಪಟ್ಟಿಲ್ಲ. ಆರೋಪಿಗಳನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಅವರು ಬಂದ ಮತ್ತು ಪರಾರಿಯಾದ ಮಾರ್ಗಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.
‘ನಿಮ್ಮನ್ನೆಲ್ಲ ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ’
ಲಾರೆನ್ಸ್ ಬಿಷ್ಣೋಯ್ ಮತ್ತು ಸಾಹಿಲ್ ಜೈನ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ಕ್ಲಿಪ್‌ನಲ್ಲಿ ಬೆದರಿಕೆಯ ಮಾತುಗಳು ಕೇಳಿಬಂದಿವೆ. ಕರೆ ಕಡಿತಗೊಂಡ ಬಳಿಕ ಸಂಭಾಷಣೆ ಮತ್ತೆ ಆರಂಭವಾಗುತ್ತದೆ. “ಅಣ್ಣಾ, ಕರೆ ಕಡಿತಗೊಂಡಿತ್ತು” ಎಂದು ಸಚಿನ್ ಜೈನ್ ಹೇಳುವುದು ಆಡಿಯೋದಲ್ಲಿ ಕೇಳಿಬರುತ್ತದೆ.
ಇದಕ್ಕೆ ಪ್ರತಿಕ್ರಿಯಿಸುವ ವ್ಯಕ್ತಿ, ಲಾರೆನ್ಸ್ ಬಿಷ್ಣೋಯ್ ಎಂದು ಗುರುತಿಸಲಾಗಿದ್ದು, “ನಾನು ಯಾರೆಂದು ನಿನಗೆ ಸ್ಪಷ್ಟವಾಗಿ ಗೊತ್ತಿಲ್ಲ, ಗೂಗಲ್ ಭಾಯ್. ಬೇಕಿದ್ದರೆ ಈ ಮಾತುಗಳನ್ನು ರೆಕಾರ್ಡ್ ಮಾಡಿಕೋ. ನಿಮ್ಮಲ್ಲಿ ಯಾರೇ ಆಗಲಿ, ನಿನಗೆ ಹತ್ತಿರದವರಾಗಲಿ ಅಥವಾ ನಿಮ್ಮ ಕುಟುಂಬದ ಸದಸ್ಯರಾಗಲಿ ನನ್ನ ಕೈಗೆ ಸಿಕ್ಕ ದಿನ ನಿಮ್ಮನ್ನೆಲ್ಲ ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ. ರೆಕಾರ್ಡ್ ಮಾಡಿಕೋ. ಮುಂದೆ ಕೇಸ್ ಹಾಕಲು ಅದು ನಿನಗೆ ಅನುಕೂಲವಾಗುತ್ತದೆ” ಎಂದು ಬೆದರಿಕೆ ಹಾಕಿರುವುದು ಕೇಳಿಬರುತ್ತದೆ ಎನ್ನಲಾಗಿದೆ.
ಆದರೆ, ಈ ಆಡಿಯೋ ಕ್ಲಿಪ್‌ನ ಸತ್ಯಾಸತ್ಯತೆ ಹಾಗೂ ಗುಂಡಿನ ದಾಳಿಗೂ ಈ ಸಂಭಾಷಣೆಗೂ ಸಂಬಂಧವಿದೆಯೇ ಎಂಬುದು ತನಿಖೆಯಿಂದ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.