ನಾಗ್ಪುರ MLC ಚುನಾವಣೆಯಲ್ಲಿ ಸೋಲು: ಮಹಾರಾಷ್ಟ್ರ ಬಿಜೆಪಿಯಿಂದ ಸ್ಪಷ್ಟನೆ ಕೋರಿದ ಹೈಕಮಾಂಡ್!

ಸಾಂಸ್ಥಿಕ ನ್ಯೂನತೆಗಳು, ಬಣ ರಾಜಕೀಯ ಮತ್ತು ಮೈತ್ರಿ ಪಾಲುದಾರರೊಂದಿಗೆ ಸಮನ್ವಯದ ಕೊರತೆಯು ಈ ಸೋಲಿಗೆ ಕಾರಣವಾಗಿದೆಯೇ ಎಂದು ಪರಿಶೀಲಿಸಲಾಗುವುದು.
Devendra Fadnavis
ದೇವೇಂದ್ರ ಫಡ್ನವೀಸ್
Updated on: 

ಮುಂಬಯಿ: ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಘಟಕದ ಕಾರ್ಯಕ್ಷಮತೆಯ ಬಗ್ಗೆ ಪಕ್ಷದ ಕೇಂದ್ರ ನಾಯಕತ್ವ ಅಸಮಾಧಾನಗೊಂಡಿದೆ. ಪ್ರಮುಖ ಕ್ಷೇತ್ರಗಳಲ್ಲಿ, ವಿಶೇಷವಾಗಿ ನಾಗ್ಪುರ ಪದವೀಧರರ ಕ್ಷೇತ್ರದಲ್ಲಿ ಉಂಟಾದ ಸೋಲಿಗೆ ಸ್ಪಷ್ಟನೆ ಕೋರಿದೆ.

ಪಕ್ಷದ ಕೇಂದ್ರ ನಾಯಕತ್ವವು ಈ ಫಲಿತಾಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಚುನಾವಣಾ ಹಿನ್ನಡೆಗೆ ಕಾರಣಗಳೇನು ಎಂಬುದರ ಕುರಿತು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಅವರಿಂದ ವಿವರವಾದ ವರದಿಯನ್ನು ಕೇಳುವ ಸಾಧ್ಯತೆಯಿದೆ. ಸಾಂಸ್ಥಿಕ ನ್ಯೂನತೆಗಳು, ಬಣ ರಾಜಕೀಯ ಮತ್ತು ಮೈತ್ರಿ ಪಾಲುದಾರರೊಂದಿಗೆ ಸಮನ್ವಯದ ಕೊರತೆಯು ಈ ಸೋಲಿಗೆ ಕಾರಣವಾಗಿದೆಯೇ ಎಂದು ಪರಿಶೀಲಿಸಲಾಗುವುದು.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ತವರು ನಗರದಲ್ಲಿರುವ, ರಾಜಕೀಯವಾಗಿ ಮಹತ್ವದ ಸ್ಥಾನವಾದ 'ನಾಗ್ಪುರ ಪದವೀಧರರ ಕ್ಷೇತ್ರ'ವನ್ನು ಉಳಿಸಿಕೊಳ್ಳಲು ಬಿಜೆಪಿ ವಿಫಲವಾಗಿರುವುದು, ರಾಜ್ಯ ಘಟಕದ ಚುನಾವಣಾ ಸಿದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆರ್‌ಎಸ್‌ಎಸ್ (RSS) ಪ್ರಧಾನ ಕಚೇರಿಯೂ ನಾಗ್ಪುರದಲ್ಲೇ ಇದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ, ವಿರೋಧ ಪಕ್ಷಗಳ ಮೈತ್ರಿಕೂಟವಾದ 'ಮಹಾ ವಿಕಾಸ್ ಅಘಾಡಿ' (MVA) ಐದು ಸ್ಥಾನಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿದ್ದರೆ, ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟ ಕೇವಲ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ನಾಗ್ಪುರ ಪದವೀಧರರ ಕ್ಷೇತ್ರವನ್ನು ಕಾಂಗ್ರೆಸ್ ತನ್ನಲ್ಲೇ ಉಳಿಸಿಕೊಂಡಿದೆ; ಪುಣೆ ಮತ್ತು ಛತ್ರಪತಿ ಸಂಭಾಜಿನಗರ ಪದವೀಧರರ ಕ್ಷೇತ್ರಗಳನ್ನು ಎನ್‌ಸಿಪಿ (ಎಸ್‌ಪಿ) ಗೆದ್ದುಕೊಂಡಿದೆ.

Devendra Fadnavis
ಬೇರೆಯವರಿಗೆ ಉಪದೇಶ ನೀಡುವುದು ನಿಲ್ಲಿಸಿ; ವಾರಾಣಸಿ, ನಾಗ್ಪುರ ಬಿಜೆಪಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ ತಿರುಗೇಟು

ಪುಣೆ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡರೆ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಅಮರಾವತಿ ಶಿಕ್ಷಕರ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ . ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ; ಒಟ್ಟು 5 ಸ್ಥಾನಗಳ ಪೈಕಿ 2 ಸ್ಥಾನಗಳನ್ನು ಮಾತ್ರ ಗೆದ್ದಿದ್ದು, ಮಹಾ ವಿಕಾಸ್ ಅಘಾಡಿ (MVA) 3 ಸ್ಥಾನಗಳನ್ನು ಪಡೆದುಕೊಂಡಿದೆ.

ನಾಗ್ಪುರದಲ್ಲಿನ ಸೋಲು ಬಿಜೆಪಿಗೆ ವಿಶೇಷವಾಗಿ ಮುಜುಗರವನ್ನುಂಟುಮಾಡಿದೆ, ಏಕೆಂದರೆ ಈ ಕ್ಷೇತ್ರದಲ್ಲಿ ಪಕ್ಷವು ಸಾಕಷ್ಟು ರಾಜಕೀಯ ಸಂಪನ್ಮೂಲಗಳನ್ನು ವಿನಿಯೋಗಿಸಿತ್ತು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎರಡು ದಿನಗಳ ಕಾಲ ನಾಗ್ಪುರದಲ್ಲೇ ಇದ್ದರು. ಆದಾಗ್ಯೂ, ಕಾಂಗ್ರೆಸ್ ಅಭ್ಯರ್ಥಿ ಅಭಿಜೀತ್ ವಂಜಾರಿ ಅವರು ಬಿಜೆಪಿ ಅಭ್ಯರ್ಥಿ ಸುಧಾಕರ್ ಕೊಹಲೆ ಅವರನ್ನು 3,271 ಮತಗಳ ಅಂತರದಿಂದ ಸೋಲಿಸಿದರು.

ನಾಗ್ಪುರದಲ್ಲಿ ಬಿಜೆಪಿ ಸೋಲಲು ಪಕ್ಷದೊಳಗಿನ ಆಂತರಿಕ ಪೈಪೋಟಿಯೇ ಕಾರಣ ಎಂದು ಮೂಲಗಳು ತಿಳಿಸಿವೆ. ಒಟ್ಟು 15,000ಕ್ಕೂ ಹೆಚ್ಚು ಮತಗಳು ಅಸಿಂಧುಗೊಂಡಿದ್ದು, ಅದರಲ್ಲಿ 4,000 ಮತಗಳನ್ನು ಉದ್ದೇಶಪೂರ್ವಕವಾಗಿ ಅಸಿಂಧುಗೊಳಿಸಲಾಗಿದೆ. ಅಂದರೆ, ಮತದಾರರು ಮೊದಲ ಆದ್ಯತೆಯ ಬದಲಿಗೆ ಎರಡನೇ ಆದ್ಯತೆಯನ್ನು ಗುರುತಿಸುವಂತೆ ಮಾಡಿ ಮತಗಳನ್ನು ಅಮಾನ್ಯವಾಗಿಸಲಾಗಿದೆ ಎಂದು ಹೇಳಲಾಗಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಆಪ್ತರಾದವರು ಕೆಲಸ ಮಾಡಲಿಲ್ಲ, ಇನ್ನು ಕೆಲವರು ಕೆಲಸ ಮಾಡಿದರೂ, ಪಕ್ಷವು ಕಣಕ್ಕಿಳಿಸಿದ ಅಭ್ಯರ್ಥಿಯ ವಿರುದ್ಧ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಲು, ಮತಪತ್ರಗಳನ್ನು ಅಸಿಂಧುಗೊಳಿಸುವ ಕೆಲಸ ಮಾಡಿದರು. ಇದಲ್ಲದೆ, ಪಕ್ಷೇತರ ಅಭ್ಯರ್ಥಿ ನಿಲೇಶ್ ಕರಾಡೆ ಅವರ ಪ್ರಭಾವವನ್ನು ಬಿಜೆಪಿ ತಪ್ಪಾಗಿ ಅಂದಾಜಿಸಿತ್ತು.

Devendra Fadnavis
ವಿಧಾನ ಪರಿಷತ್ ಚುನಾವಣೆ: ಸುಶಿಕ್ಷಿತ ಮತದಾರರಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಮತಗಳು ತಿರಸ್ಕೃತ!

ಅವರು 25,000 ಮತಗಳನ್ನು ಪಡೆದರು ಮತ್ತು ಅವರ ಬಹುಪಾಲು 'ಎರಡನೇ ಆದ್ಯತೆಯ ಮತಗಳು' ಕಾಂಗ್ರೆಸ್ ಅಭ್ಯರ್ಥಿಗೆ ಹೋದವು, ಇದು ಅಂತಿಮ ಫಲಿತಾಂಶವನ್ನೇ ಬದಲಾಯಿಸಿತು. ವಿಧಾನ ಪರಿಷತ್ (MLC) ಚುನಾವಣೆಯಲ್ಲಿನ ಈ ಸೋಲು, ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ರೂಪಿಸಿಕೊಂಡಿದ್ದ ಪ್ರಮುಖ ರಾಜಕೀಯ ನಿಲುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ನಾಗ್ಪುರ ಕ್ಷೇತ್ರವು ಹಲವು ದೃಷ್ಟಿಕೋನಗಳಿಂದ ಅತ್ಯಂತ ಸಾಂಕೇತಿಕ ಮಹತ್ವವನ್ನು ಹೊಂದಿತ್ತು. ಆದ್ದರಿಂದ, ಈ ಬಗ್ಗೆ ಕೂಲಂಕಷ ವಿಶ್ಲೇಷಣೆ ನಡೆಯಬೇಕಿದೆ," ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್ ಅವರು, ಈ ಸೋಲಿಗೆ ಕಾರಣವಾದ ಅಂಶಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ. ವಿಧಾನ ಪರಿಷತ್ ಚುನಾವಣೆ ಕುರಿತಾದ ವಿಸ್ತೃತ ವರದಿಯನ್ನು ಅವರು ಪಕ್ಷದ ವರಿಷ್ಠರಿಗೆ ಸಲ್ಲಿಸುವ ನಿರೀಕ್ಷೆಯಿದೆ.

ಹಿರಿಯ ಬಿಜೆಪಿ ನಾಯಕ ಹಾಗೂ ಸಚಿವ ಚಂದ್ರಶೇಖರ್ ಬವನ್‌ಕುಲೆ ಅವರು ನಾಗ್ಪುರದಲ್ಲಿನ ಸೋಲಿನ ಹೊಣೆಯನ್ನು ಹೊತ್ತುಕೊಂಡಿದ್ದು, ಈ ಫಲಿತಾಂಶಕ್ಕೆ ಕಾರಣವಾದ ಲೋಪದೋಷಗಳನ್ನು ಪಕ್ಷವು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X