

ನವದೆಹಲಿ: ಸಂಸದ ಕಪಿಲ್ ಸಿಬಲ್ ಶುಕ್ರವಾರದಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ತಿರುಗೇಟು ನೀಡಿದ್ದಾರೆ. ಹಿರಿಯ ವಕೀಲರಾದ ಸಿಬಲ್ ಅವರು ಪ್ರತಿಭಟಿಸುವ ಹಕ್ಕಿನ ಕುರಿತು ಮಾತನಾಡುತ್ತಿರುವ 2011ರ ವಿಡಿಯೋವೊಂದನ್ನು ರಿಜಿಜು ಹಂಚಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್, ಕಾಂಗ್ರೆಸ್ ನೇತೃತ್ವದ ಯುಪಿಎ (UPA) ಸರ್ಕಾರವು ಎಂದಿಗೂ ಜನರನ್ನು ಪ್ರತಿಭಟಿಸದಂತೆ ತಡೆದಿರಲಿಲ್ಲ ಅಥವಾ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ಗಳನ್ನು ಬಳಸಿರಲಿಲ್ಲ ಹಾಗೂ ಲಾಠಿಚಾರ್ಜ್ ಮಾಡಿರಲಿಲ್ಲ ಎಂದು ಹೇಳಿದರು.
ರಿಜಿಜು ಅವರು ಗುರುವಾರ ಈ ವಿಡಿಯೋವನ್ನು ಹಂಚಿಕೊಂಡಿದ್ದರು. 'ಇಂಡಿಯಾ ಅಗೇನ್ಸ್ಟ್ ಕರಪ್ಷನ್' (ಭ್ರಷ್ಟಾಚಾರದ ವಿರುದ್ಧ ಭಾರತ) ಚಳುವಳಿಯ ಸಂದರ್ಭದಲ್ಲಿ, ಆಗಿನ ಯುಪಿಎ ಸರ್ಕಾರದ ಪತ್ರಿಕಾಗೋಷ್ಠಿಯಲ್ಲಿ ಸಿಬಲ್ ಮಾತನಾಡುತ್ತಿರುವುದು ಈ ವಿಡಿಯೋದಲ್ಲಿದೆ. ಪ್ರತಿಭಟಿಸುವ ಹಕ್ಕು ಎಂದರೆ, ತಮಗೆ ಇಷ್ಟ ಬಂದ ಸ್ಥಳದಲ್ಲಿಯೇ ಪ್ರತಿಭಟಿಸುವ ಹಕ್ಕು ಎಂದರ್ಥವಲ್ಲ ಎಂದು ಸಿಬಲ್ ಆಗ ಹೇಳಿದ್ದರು.
ಈ ವಿಡಿಯೋ ತುಣುಕನ್ನು ಹಂಚಿಕೊಂಡ ರಿಜಿಜು, ಸಿಬಲ್ ಅವರನ್ನು "ದಿಮಾಗಿ ನಕ್ಸಲ್" - ಎಂದು ಕರೆದರು. ಅಲ್ಲದೆ, ಸಿಬಲ್ ಅವರು ಕಾಂಗ್ರೆಸ್ನ "ರಹಸ್ಯಗಳನ್ನು" ಬಯಲು ಮಾಡಿದ್ದಾರೆ ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ ಎಂದು ಆರೋಪಿಸಿದರು.
"ಕಪಿಲ್ ಸಿಬಲ್ ಒಬ್ಬ 'ದಿಮಾಗಿ ನಕ್ಸಲ್', ಆದರೆ ಕಾಂಗ್ರೆಸ್ ಪಕ್ಷದ ರಹಸ್ಯಗಳನ್ನು ಬಯಲು ಮಾಡುವುದರಲ್ಲಿ ಅವರು ಬಹಳ ನಿಪುಣರು! ಅವರು ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಈಗ, ಕಾಂಗ್ರೆಸ್ ಪಕ್ಷ ಮತ್ತು ಜಿರಲೆಗಳು ತಮ್ಮ 'ಕಾನೂನು ಗುರು' ನೀಡುವ ಸಲಹೆಯನ್ನು ಆಲಿಸಲಿವೆ," ಎಂದು ಅವರು ಹೇಳಿದರು.
ಶುಕ್ರವಾರ ಮತ್ತೊಂದು ಪೋಸ್ಟ್ನಲ್ಲಿ, 2014ರ ನಂತರ ಪ್ರತಿಭಟನೆಗಳಿಗೆ ಸಂಬಂಧಿಸಿದ ಕಾನೂನುಗಳು ಬದಲಾಗಿವೆಯೇ ಅಥವಾ ಸಿಬಲ್ ಅವರು ತಮ್ಮ ಮತ್ತು ಕಾಂಗ್ರೆಸ್ಗಾಗಿ ಪ್ರತ್ಯೇಕ ಸಂವಿಧಾನವನ್ನೇ ರಚಿಸಿಕೊಂಡಿದ್ದಾರೆಯೇ ಎಂದು ಪತ್ರಕರ್ತರು ಸಿಬಲ್ ಅವರನ್ನು ಪ್ರಶ್ನಿಸಬೇಕು ಎಂದು ರಿಜಿಜು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸಿಬಲ್, ರಿಜಿಜು ಅವರ ಕಾನೂನು ಅನುಭವವನ್ನೇ ಪ್ರಶ್ನಿಸಿದರು. ಸತ್ಯಾಂಶಗಳನ್ನು ಅರ್ಥಮಾಡಿಕೊಳ್ಳದೆ ಕೇಂದ್ರ ಸಚಿವರು ಇತರರನ್ನು ಟೀಕಿಸುತ್ತಾರೆ ಎಂದು ಅವರು ಹೇಳಿದರು.
"ಅವರು ನ್ಯಾಯಾಲಯದಲ್ಲಿ ಎಲ್ಲಾದರೂ ಕಾಣಿಸಿಕೊಂಡಿದ್ದರೆ ಚೆನ್ನಾಗಿತ್ತು - ನ್ಯಾಯಾಲಯಗಳಲ್ಲಿ ಕಳೆದ ನನ್ನ ಸುಮಾರು 50 ವರ್ಷಗಳ ಅವಧಿಯಲ್ಲಿ, ಕನಿಷ್ಠಪಕ್ಷ ನ್ಯಾಯಾಲಯದ ಕಾರಿಡಾರ್ಗಳಲ್ಲಿಯೂ ನಾನು ಅವರನ್ನು ನೋಡಿಲ್ಲ," ಎಂದು ಸಿಬಲ್ ಹೇಳಿದರು.
ಯುಪಿಎ ಸರ್ಕಾರವು ಪ್ರತಿಭಟನೆಗಳನ್ನು ವಿರೋಧಿಸಿತ್ತು ಎಂಬ ರಿಜಿಜು ಅವರ ಹೇಳಿಕೆಯನ್ನು ತಳ್ಳಿಹಾಕಿದ ಸಿಬಲ್, ಸರ್ಕಾರವು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಅಥವಾ ಪೆಲೆಟ್ ಗನ್ಗಳನ್ನು ಬಳಸಿದೆಯೇ ಎಂದು ಪ್ರಶ್ನಿಸಿದರು.
"ಜನರು ಪ್ರತಿಭಟಿಸದಂತೆ ನಾವು ಎಂದಿಗೂ ತಡೆಹಿಡಿದಿಲ್ಲ. ವಾಸ್ತವವಾಗಿ, ಒಮ್ಮೆ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ, ನನ್ನ ಸಹೋದ್ಯೋಗಿಗಳು ಹೀಗೆ ಹೇಳಿದರು: 'ನೋಡಿ, ಇದು ಸಂವಿಧಾನದ ಅಡಿಯಲ್ಲಿ ಸಿಕ್ಕಿರುವ ಹಕ್ಕು. ಈ ಹಕ್ಕಿನಲ್ಲಿ ನೀವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಇದೊಂದು ಸಾಂವಿಧಾನಿಕ ಹಕ್ಕು'," ಎಂದು ಸಿಬಲ್ ಹೇಳಿದರು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರತಿಭಟನೆಗಳು ಪ್ರಮುಖ ಪಾತ್ರ ವಹಿಸಿದ್ದವು ಮತ್ತು ಇವು ಮತ್ತೊಂದು ಬಗೆಯ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಡಬಲ್ಲವು ಎಂದು ಅವರು ಹೇಳಿದರು.
ಪ್ರಸ್ತುತ ಸರ್ಕಾರದ ಅಡಿಯಲ್ಲಿ ಸಂಸತ್ತು ಕಾರ್ಯನಿರ್ವಹಿಸುತ್ತಿರುವ ರೀತಿಯನ್ನು ಟೀಕಿಸಿದ ಸಿಬಲ್, "ಸಂಸದೀಯ ವ್ಯವಹಾರಗಳ ವಿಷಯಕ್ಕೆ ಬಂದರೆ, ಅವರು (ರಿಜಿಜು) ಸಂಸತ್ತನ್ನು ಹೇಗೆ ನಡೆಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ವಿರೋಧ ಪಕ್ಷದ ಧ್ವನಿ ಕೇಳಿಸದಂತೆ ನೋಡಿಕೊಳ್ಳುವುದೇ ಅವರ ವಿಶೇಷ ಕೌಶಲ್ಯ ಇದಕ್ಕಾಗಿ ಅವರಿಗೆ ಯಾವುದಾದರೂ ಪದಕವನ್ನೇ ನೀಡಬೇಕು," ಎಂದು ವ್ಯಂಗ್ಯವಾಡಿದರು.
"ನಾವು ಪ್ರಸ್ತಾಪಿಸಲು ಬಯಸುವ ವಿಷಯಗಳನ್ನು ಎತ್ತಲು ಅವರು ನಮಗೆ ಅವಕಾಶ ನೀಡುವುದಿಲ್ಲ. ಪ್ರತಿಭಟಿಸಲು ಬಿಡುವುದಿಲ್ಲ. ಚರ್ಚೆಯೇ ಇಲ್ಲದೆ ಮಸೂದೆಗಳನ್ನು ಅಂಗೀಕರಿಸುತ್ತಾರೆ. ಸಂಸದೀಯ ಕಾರ್ಯವಿಧಾನಗಳ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿಯಿಲ್ಲ. ಸಂಸತ್ತು ಕಾರ್ಯನಿರ್ವಹಿಸುತ್ತಿರುವ ಈ ರೀತಿ ಭಾರತದ ಇತಿಹಾಸದಲ್ಲೇ ಅಭೂತಪೂರ್ವವಾದುದು," ಎಂದು ಅವರು ಹೇಳಿದರು.
2014ನೇ ಇಸವಿಯು ಒಂದು ಹೊಸ ಯುಗದ ಆರಂಭ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಯನ್ನೂ ಸಿಬಲ್ ಟೀಕಿಸಿದರು. 2014ಕ್ಕೂ ಹಿಂದಿನ ಭಾರತದ ಇತಿಹಾಸವನ್ನು ಈ ಸರ್ಕಾರವು 'ರಾಷ್ಟ್ರವಿರೋಧಿ' ಎಂದು ಪರಿಗಣಿಸುತ್ತಿರುವಂತಿದೆ ಎಂದು ಅವರು ಅಭಿಪ್ರಾಯಪಟ್ಟರು.
"ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಎಂದು ಮೋದಿಜಿ ಹೇಳುತ್ತಾರೆ. ಅವರ ವಾದದ ಪ್ರಕಾರ, 'ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ. ಭಾರತದ ಇತಿಹಾಸವು 2014ರ ನಂತರವೇ ಬರೆಯಲ್ಪಟ್ಟಿದೆ; ಉಳಿದ ಇತಿಹಾಸವೆಲ್ಲವೂ ರಾಷ್ಟ್ರವಿರೋಧಿ, ಹೌದಲ್ಲವೇ? ಎಂದು ಅವರು ಪ್ರಶ್ನಿಸಿದರು.
2029ರ ವೇಳೆಗೆ ಇತಿಹಾಸದ ಆ ಅಧ್ಯಾಯವು ಅಳಿಸಿಹೋಗುತ್ತದೆ ಮತ್ತು ಸಂಸತ್ತಿನ ಘನತೆ ಮರುಸ್ಥಾಪನೆಯಾಗುತ್ತದೆ ಎಂದು ಸಿಬಲ್ ಹೇಳಿದರು. ಭವಿಷ್ಯದಲ್ಲಿ ರಿಜಿಜು ಅವರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾದರೆ, ಆಗ ಕಾಂಗ್ರೆಸ್ ಅವರಿಗೆ ಮಾತನಾಡಲು ಅವಕಾಶ ನೀಡುತ್ತದೆ ಎಂದೂ ಅವರು ತಿಳಿಸಿದರು. ರಿಜಿಜು ಜೀ, ದಯವಿಟ್ಟು ನೆನಪಿಡಿ: ಇತಿಹಾಸವು ಮರುಕಳಿಸುತ್ತದೆ ಎಂದಿದ್ದಾರೆ.