

ಜೈಪುರ: ಜೈಪುರದ ಖಾಸಗಿ ವಿಶ್ವವಿದ್ಯಾನಿಲಯವೊಂದರ 6ನೇ ಮಹಡಿಯಿಂದ ಜಿಗಿದು, 23 ವರ್ಷದ ಎಂಬಿಎ (MBA) ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಜೈಪುರದ ಗುರ್ಜರ್ ಕಿ ಥಾಡಿ ಪ್ರದೇಶದ ಪ್ರೇಮ್ ನಗರದ ನಿವಾಸಿ ಹಾಗೂ ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿ ಯಶಸ್ವಿ ರೋಹಿಲಾ ಎಂದು ಗುರುತಿಸಲಾಗಿದೆ.
ಬೆಳಿಗ್ಗೆ 9.45ಕ್ಕೆ ನಿಗದಿಯಾಗಿದ್ದ ಮಧ್ಯಂತರ ಸೆಮಿಸ್ಟರ್ ಪರೀಕ್ಷೆ ಪ್ರಾರಂಭವಾಗುವ ಸ್ವಲ್ಪ ಮೊದಲು ಈ ಘಟನೆ ನಡೆದಿದೆ.
ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮುನ್ನ ಆ ವಿದ್ಯಾರ್ಥಿನಿಗೆ ದೂರವಾಣಿ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆಕೆ ವಿಶ್ವವಿದ್ಯಾನಿಲಯದ ಕಟ್ಟಡದ ಆರನೇ ಮಹಡಿಗೆ ತೆರಳಿದ್ದಳು.
"ಕೆಲವು ವಿದ್ಯಾರ್ಥಿಗಳು ಆಕೆ ಕಟ್ಟಡದ ಅಂಚಿನಲ್ಲಿ ಕುಳಿತಿರುವುದನ್ನು ಗಮನಿಸಿ, ಆಕೆಯನ್ನು ತಡೆಯಲು ಧಾವಿಸಿದರು. ಆದರೆ, ಅವರು ಆಕೆಯ ಬಳಿ ತಲುಪುವಷ್ಟರಲ್ಲಿ ಆಕೆ ಕೆಳಗೆ ಜಿಗಿದಿದ್ದಳು" ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ನಡೆಯುವ ಸ್ವಲ್ಪ ಸಮಯದ ಮೊದಲು ಆಕೆ ತಮ್ಮೊಂದಿಗೆ ಮಾತನಾಡುತ್ತಿದ್ದಳು ಎಂದು ಆಕೆಯ ಸಹಪಾಠಿಗಳು ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ತಕ್ಷಣವೇ ಆಕೆಯನ್ನು ವಿಶ್ವವಿದ್ಯಾನಿಲಯದ ವಾಹನದಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.