

ಮೈನ್‌ಪುರಿ: ಉತ್ತರ ಪ್ರದೇಶದ ಮೈನ್‌ಪುರಿಯ ಹಳ್ಳಿಯೊಂದರಲ್ಲಿ 35 ವರ್ಷದ ನೆರೆಮನೆಯ ಕಾಮುಕನೊಬ್ಬ 3 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಜೇತೇಂದ್ರ ಎಂದು ಗುರುತಿಸಲಾಗಿದ್ದು, ಮಂಗಳವಾರ ಸಂಜೆ ಮನೆಯೊಳಗೆ ಹಾಸಿಗೆಯ ಮೇಲೆ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಪಾಪಿ ನೀಚ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆಯ ತಾಯಿ ಊಟ ಅಡುಗೆ ಮಾಡುತ್ತಿದ್ದಳು ಮತ್ತು ಆಕೆಯ ತಂದೆ ಮನೆಕೆಲಸಗಳಲ್ಲಿ ನಿರತರಾಗಿದ್ದರು.
"ನೆರೆಹೊರೆಯಲ್ಲಿ ವಾಸಿಸುವ ಮತ್ತು ಕುಟುಂಬಕ್ಕೆ ಪರಿಚಿತನಾಗಿದ್ದ ಆರೋಪಿ ಮನೆಗೆ ಪ್ರವೇಶಿಸಿ ಮಗುವಿನೊಂದಿಗೆ ಆಟವಾಡಲು ಪ್ರಾರಂಭಿಸಿದ್ದಾನೆ. ನಂತರ ಅವನು ಮಗುವನ್ನು ಹೊರಗೆ ಎತ್ತಿಕೊಂಡು ಹೋಗಿದ್ದಾನೆ. ಪಾಪಿ ಪರಿಚಿತನಾಗಿದ್ದರಿಂದ, ಮಗುವಿನ ಕುಟುಂಬ ಯಾವುದೇ ಅನುಮಾನ ಪಟ್ಟಿಲ್ಲ" ಎಂದು ಬೇವಾರ್ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆದರೆ ಸುಮಾರು ಅರ್ಧ ಗಂಟೆಯ ನಂತರ, ಆರೋಪಿ ಮನೆಗೆ ಹಿಂತಿರುಗಿ, ಮಗುವನ್ನು ಹಾಸಿಗೆಯ ಮೇಲೆ ಇರಿಸಿ, ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
"ಮಗು ನಿರಂತರವಾಗಿ ಅಳುತ್ತಿರುವುದನ್ನು ಗಮನಿಸಿದ ಆಕೆಯ ತಾಯಿ ಸಮಾಧಾನಪಡಿಸಲು ಹೋಗಿದ್ದಾರೆ. ಈ ವೇಳೆ ಮಗುವಿನ ಖಾಸಗಿ ಭಾಗದಿಂದ ತೀವ್ರ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ್ದಾರೆ" ಎಂದು ಇನ್ಸ್‌ಪೆಕ್ಟರ್ ಸಿಂಗ್ ಹೇಳಿದ್ದಾರೆ.
ಕುಟುಂಬದವರು ತಕ್ಷಣ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಸೈಫೈ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲು ಸೂಚಿಸಿದ್ದಾರೆ. ಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬುಧವಾರ ಮಗುವಿನ ತಂದೆ ನೀಡಿದ ದೂರಿನ ಆಧಾರದ ಮೇಲೆ ಜೇತೇಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.