

ಲಖನೌ: ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ದ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರ ವಿಚಾರದಲ್ಲಿ ಮೂರನೇ ಬಾರಿ ಯೂ-ಟರ್ನ್ ಹೊಡೆದಿದ್ದು, ಈಗ ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ ಈ ಬಾರಿ ಒಂದು ಷರತ್ತು ವಿಧಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ, ಪಕ್ಷದ ಮುಖ್ಯ ರಾಷ್ಟ್ರೀಯ ಸಂಯೋಜಕರಾಗಿದ್ದ ಸೋದರಳಿಯ ಆಕಾಶ್ ಆನಂದ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ್ದ ಮಾಯಾವತಿ ಅವರು ಈಗ ಮತ್ತೆ ಪಕ್ಷದ ಹುದ್ದೆಗೆ ಮರಳಲು ಅವಕಾಶ ನೀಡಿದ್ದಾರೆ.
ಆದರೆ ಈ ಬಾರಿ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಅಕಾಶ್ ಆನಂದ್ ಅವರ ಮಾವ ಅಶೋಕ್ ಸಿದ್ಧಾರ್ಥ್ ರಾಜಕೀಯದಿಂದ "ಸನ್ಯಾಸ" ತೆಗೆದುಕೊಳ್ಳಬೇಕಾಗಿದೆ. ಇದರರ್ಥ ನಿವೃತ್ತಿ ಹೊಂದುವುದಲ್ಲದೆ, ರಾಜಕೀಯವನ್ನೇ ಸಂಪೂರ್ಣವಾಗಿ ತ್ಯಜಿಸಬೇಕಾಗಿದೆ.
ಆಗಸ್ಟ್‌ನಲ್ಲಿ ಬಿಎಸ್‌ಪಿಯಿಂದ ಹೊರಹಾಕಲ್ಪಟ್ಟ ಅಶೋಕ್ ಸಿದ್ಧಾರ್ಥ್ ಅವರಿಂದ ಪ್ರಭಾವಿತರಾಗಬೇಡಿ ಎಂದು ಮಾಯಾವತಿ ಅವರು ಹಿಂದೆ ಆಕಾಶ್ ಆನಂದ್‌ಗೆ ಹೇಳಿದ್ದರು.
ಈ ಕುರಿತು ಬುಧವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮಾಯಾವತಿ ಅವರು, ಸಿದ್ಧಾರ್ಥ್ ಈ ಷರತ್ತನ್ನು ಒಪ್ಪಿದರೆ ಆಕಾಶ್ ಆನಂದ್ "ಪಕ್ಷದಲ್ಲಿ ಮುಕ್ತವಾಗಿ ಕೆಲಸ ಮಾಡಲು" ಸಾಧ್ಯವಾಗುತ್ತದೆ ಮತ್ತು ನಂತರ ಅವರಿಂದ ಕಸಿದುಕೊಳ್ಳಲಾದ ಜವಾಬ್ದಾರಿಗಳನ್ನು ಮತ್ತೆ ನೀಡುವುದಾಗಿ ಹೇಳಿದ್ದಾರೆ.
ಮಾಯಾವತಿ ಕಳೆದ ವಾರ "ಅವರು ಇನ್ನೂ ಹೆಚ್ಚು ಪ್ರಬುದ್ಧರಾಗಬೇಕಾಗಿದೆ" ಎಂದು ಹೇಳಿ, ಆಕಾಶ್ ಆನಂದ್ ಗೆ ನೀಡಿದ್ದ ನಾಯಕತ್ವದ ಜವಾಬ್ದಾರಿಯನ್ನು ಹಿಂಪಡೆದಿದ್ದರು.