

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಶುಕ್ರವಾರ ದೂರವಾಣಿ ಕರೆ ಮಾಡಿದ್ದಾರೆ. ಉಭಯ ನಾಯಕರು ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳು ಮತ್ತು ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದ್ದಾರೆ.
ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಪ್ರಯತ್ನಗಳಲ್ಲಿ ನಿರಂತರ ಸಹಕಾರ ಮತ್ತು ಸಮನ್ವಯಕ್ಕೆ ತಮ್ಮ ಬದ್ಧತೆಯನ್ನು ಪ್ರಧಾನಿ ಮತ್ತು ಯುಎಇ ಅಧ್ಯಕ್ಷರು ಪುನರುಚ್ಚರಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಇಂಧನ, ರಕ್ಷಣೆ, ತಂತ್ರಜ್ಞಾನ, ಹೂಡಿಕೆ ಮತ್ತು ಆರೋಗ್ಯ ಕ್ಷೇತ್ರಗಳನ್ನು ಒಳಗೊಂಡಂತೆ ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಲು ಹೊಸ ಕ್ರಮಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ನನ್ನ ಸಹೋದರ, ಯುಎಇ ಅಧ್ಯಕ್ಷರಾದ ಎಚ್.ಎಚ್. ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಕರೆ ಮತ್ತು ಹುಟ್ಟುಹಬ್ಬದ ಶುಭಾಶಯಗಳಿಗೆ ಕೃತಜ್ಞತೆಗಳು. ದ್ವಿಪಕ್ಷೀಯ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸುವ ಕ್ರಮಗಳ ಕುರಿತು ನಾವು ಚರ್ಚಿಸಿದ್ದೇವೆ ಮತ್ತು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಪ್ರಯತ್ನಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರಾದ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಂದ ದೂರವಾಣಿ ಕರೆ ಬಂದಿತು. ಯುಎಇ ಅಧ್ಯಕ್ಷರು ಪ್ರಧಾನ ಮಂತ್ರಿಯವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದರು ಎಂದು PMO ಹೇಳಿಕೆಯಲ್ಲಿ ತಿಳಿಸಿದೆ.