ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿ ಅಥವಾ ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸಬಹುದು ಎಂದು ದೆಹಲಿಯ ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದರು.
 S Jaishankar and LK Advani
ಎಸ್ ಜೈಶಂಕರ್, ಎಲ್ ಕೆ ಅಡ್ವಾಣಿ
Updated on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಡಿ ವಿವರಗಳಲ್ಲಿನ ವ್ಯತ್ಯಾಸಗಳ ಕಾರಣಕ್ಕಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಮಾಜಿ ಉಪಾಧ್ಯಕ್ಷ ಜಗದೀಪ್ ಧನ್ಕರ್ ಮತ್ತು ಚುನಾವಣಾ ಆಯುಕ್ತ ಎಸ್.ಎಸ್. ಸಂಧು ಸೇರಿದಂತೆ ಹಲವರಿಗೆ ನೋಟಿಸ್ ನೀಡಲಾಗಿದೆ.

SIR ಅಡಿಯಲ್ಲಿ 97 ಲಕ್ಷಕ್ಕೂ ಹೆಚ್ಚು ಮತದಾರರ ಕರಡು ಪಟ್ಟಿ ಪ್ರಕಟವಾದ ನಂತರ, ಮಾಹಿತಿ ಸಂಗ್ರಹಣಾ ನಮೂನೆಗಳಲ್ಲಿ ನೀಡಿದ ವಿವರಗಳಲ್ಲಿನ ವ್ಯತ್ಯಾಸದಿಂದ 33.13 ಲಕ್ಷ ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಹಿಂದಿನ 2002ರ SIR ಪಟ್ಟಿಯಲ್ಲಿರುವ ಮಾಹಿತಿಯೊಂದಿಗೆ ಪ್ರಸ್ತುತ ಮತದಾರರ ವಿವರಗಳು ಹೊಂದಿಕೆಯಾಗದಿರುವುದೇ ಹೆಚ್ಚಿನ ನೋಟಿಸ್‌ಗಳಿಗೆ ಕಾರಣವಾಗಿದೆ.

"ಹಿಂದಿನ SIR ಪಟ್ಟಿಯೊಂದಿಗೆ ಹೊಂದಾಣಿಕೆಯಾಗದಿರುವಿಕೆ" (unmapped with last SIR) ವರ್ಗದಡಿ ನೋಟಿಸ್ ಪಡೆದ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಚುನಾವಣಾ ಆಯೋಗವನ್ನು ತೀವ್ರವಾಗಿ ಟೀಕಿಸಿದ್ದಾರೆ. ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR ಎಂದು ಕಿಡಿಕಾರಿದ್ದಾರೆ.

ಆದಾಗ್ಯೂ ECINET ನಲ್ಲಿ ತಮ್ಮ ಡೇಟಾವನ್ನು ಸರಿಪಡಿಸಿಕೊಳ್ಳಲು ವ್ಯತ್ಯಾಸಗಳಿರುವ ಮತದಾರರಿಗೆ ವ್ಯವಸ್ಥೆಯಿಂದಲೇ (system-generated) ನೋಟಿಸ್‌ಗಳನ್ನು ನೀಡಲಾಗುತ್ತಿದೆ ಎಂದು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯ (CEO) ಕಚೇರಿ ತಿಳಿಸಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳು ಮತ್ತು ಮುದ್ರಣ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿರುವಂತೆ ಮತದಾರರ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಅಥವಾ ಬಿಕ್ಕಟ್ಟು ಇಲ್ಲ ಎಂದು ಹೇಳಿದೆ.

ನೋಟಿಸ್ ಪಡೆದ ಮತದಾರರ ಪಟ್ಟಿಯನ್ನು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯ (CEO) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈಗಾಗಲೇ ನೋಟಿಸ್ ಪಡೆದವರು ಅಥವಾ ಶೀಘ್ರದಲ್ಲೇ ನೋಟಿಸ್ ಪಡೆಯಲಿರುವವರ ಪೈಕಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಜೆಎನ್‌ಯು (JNU)ನ ಮಾಜಿ ಉಪಕುಲಪತಿ ಎಂ. ಜಗದೀಶ್ ಕುಮಾರ್, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ, ಸೆಬಿ (SEBI) ಅಧ್ಯಕ್ಷ ತುಹಿನ್ ಕಾಂತ ಪಾಂಡೆ, ಸೇನೆಯ ಮಾಜಿ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಮತ್ತು ಸಿಬಿಐ (CBI) ನಿರ್ದೇಶಕ ಪ್ರವೀಣ್ ಸೂದ್ ಅವರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 S Jaishankar and LK Advani
ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಮತದಾರರು ತಮ್ಮ ಮಾಹಿತಿ ಸಂಗ್ರಹಣಾ ನಮೂನೆಗಳಲ್ಲಿ (enumeration forms) ಒದಗಿಸಿದ ವಿವರಗಳಲ್ಲಿ ಕಂಡುಬಂದ ವ್ಯತ್ಯಾಸಗಳ" ಆಧಾರದ ಮೇಲೆ ಈ ನೋಟಿಸ್‌ಗಳನ್ನು ನೀಡಲಾಗಿದೆ. ನೋಟಿಸ್‌ ಸ್ವೀಕರಿಸಿದ ಮತದಾರರು ತಮ್ಮ ಉತ್ತರಗಳು ಮತ್ತು ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿ ಅಥವಾ ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸಬಹುದು ಎಂದು ದೆಹಲಿಯ ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದರು.

ಅಡ್ವಾಣಿ, ಜೈಶಂಕರ್, ಸಿಸೋಡಿಯಾ ಸೇರಿದಂತೆ ಅನೇಕ ಪ್ರಮುಖ ಮತದಾರರ ಹೆಸರುಗಳು ನೋಟಿಸ್ ಪಡೆದವರ ಪಟ್ಟಿಯಲ್ಲಿವೆ ಎಂಬುದನ್ನು ದೃಢಪಡಿಸಿದ ಅವರು, ಮತದಾರರು ಒದಗಿಸಿದ ದಾಖಲೆಗಳು ಮತ್ತು ಮಾಹಿತಿಯ ಪರಿಶೀಲನಾ ಪ್ರಕ್ರಿಯೆಯ ನಂತರ ಅವರ ಹೆಸರುಗಳನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಹೇಳಿದರು. ಮಾಹಿತಿ ಮತ್ತು ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ನಮೂದುಗಳ ಮೌಲ್ಯಮಾಪನವನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com