

ಕೋಲ್ಕತ್ತಾ: ಬಂಗಾಳದಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಆನೆಮರಿಯೊಂದನ್ನು ಸ್ಥಳೀಯ ಮೀನುಗಾರರು ಬೆನ್ನಟ್ಟಿ ಹಿಡಿದು ರಕ್ಷಣೆ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಪ್ರವಾಹದ ರಭಸಕ್ಕೆ ಸಿಲುಕಿ ತೀಸ್ತಾ ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ಆನೆಮರಿಯನ್ನು ಇಬ್ಬರು ಮೀನುಗಾರರು ಸುಮಾರು 3 ಕಿಲೋಮೀಟರ್ ದೂರ ದೋಣಿಯಲ್ಲಿ ಬೆನ್ನಟ್ಟಿ ಸುರಕ್ಷಿತವಾಗಿ ರಕ್ಷಿಸಿರುವ ಹೃದಯಸ್ಪರ್ಶಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಕ್ಷಿಸಿದ ಬಳಿಕ ಮೀನುಗಾರರು ದೋಣಿಯಲ್ಲೇ ಆನೆಮರಿಯನ್ನು ಅಪ್ಪಿಕೊಂಡಿರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿವೆ.
ಪಶ್ಚಿಮ ಬಂಗಾಳದ ಮಾಲ್ಬಜಾರ್ ಉಪವಿಭಾಗದ ವ್ಯಾಪ್ತಿಯಲ್ಲಿ, ತೀಸ್ತಾ ನದಿಯ ಸ್ಪರ್ ನಂಬರ್ 12ರ ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೀನುಗಾರರು ನದಿಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ, ಬಲವಾದ ನೀರಿನ ಸೆಳೆತದಲ್ಲಿ ಆನೆಮರಿಯೊಂದು ಕೊಚ್ಚಿಹೋಗುತ್ತಿರುವುದನ್ನು ಗಮನಿಸಿದ್ದಾರೆ.
ಜೀವಪಣಕ್ಕಿಟ್ಟು ಪುಟ್ಟಕಂದನ ರಕ್ಷಣೆ
ನೀರಿನ ರಭಸಕ್ಕೆ ಆನೆಮರಿ ನಿಯಂತ್ರಣ ಕಳೆದುಕೊಂಡು ದೂರಕ್ಕೆ ಸಾಗುತ್ತಿರುವುದನ್ನು ಕಂಡ ಮೀನುಗಾರರು ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ದೋಣಿಯನ್ನು ಅದರತ್ತ ತಿರುಗಿಸಿದ್ದಾರೆ. ಬಳಿಕ ಪ್ರಬಲ ನೀರಿನ ಸೆಳೆತದ ನಡುವೆಯೇ ಸುಮಾರು 3 ಕಿಲೋಮೀಟರ್ ಆನೆಮರಿಯನ್ನು ಬೆನ್ನಟ್ಟಿದ್ದಾರೆ.
ಕೊನೆಗೂ ಆನೆಮರಿಯನ್ನು ತಲುಪಿದ ಮೀನುಗಾರರು ಅದನ್ನು ಸುರಕ್ಷಿತವಾಗಿ ನೀರಿನಿಂದ ಮೇಲಕ್ಕೆತ್ತಿ ದಡಕ್ಕೆ ಕರೆತಂದಿದ್ದಾರೆ. ಬಳಿಕ ಘಟನೆಯ ಕುರಿತು ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆಯ ತಂಡ ಸ್ಥಳಕ್ಕೆ ಧಾವಿಸಿ, ಆನೆಮರಿಯನ್ನು ಅದರ ತಾಯಿಯೊಂದಿಗೆ ಸೇರಿಸಲು ನೆರವಾಗಿದೆ.
ತಾಯಿ ಮಡಿಲು ಸೇರಿದ ಕಂದ
ಮೀನುಗಾರರ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಅಪಾಯದಲ್ಲಿದ್ದ ಆನೆಮರಿ ಸುರಕ್ಷಿತವಾಗಿ ತಾಯಿಯ ಬಳಿಗೆ ಮರಳಿದೆ.