

ಮುಂಬೈ: ರಾಜಸ್ಥಾನದಿಂದ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್‌ಗೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಬೆಂಕಿ ಹೊತ್ತಿಕೊಂಡು ಬಸ್‌ನಲ್ಲಿದ್ದ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಸುರಕ್ಷಿತವಾಗಿ ಕೆಳಗಿಳಿದಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದಯಪುರದಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಬಸ್ ಗೆ ಇಂದು ಬೆಳಗ್ಗೆ 7.20ರ ಸುಮಾರಿಗೆ ಪನ್ವೇಲ್ ಸಮೀಪ ಬೆಂಕಿ ಹೊತ್ತಿಕೊಂಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್‌ನ ಹವಾನಿಯಂತ್ರಣ (AC) ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ.
ರಸಾಯನಿ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಸ್‌ಪ್ರೆಸ್‌ವೇಯ ಪುಣೆ ಕಡೆಗೆ ಸಾಗುವ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ಮಾಹಿತಿ ಲಭ್ಯವಾದ ಕೂಡಲೇ ಸ್ಥಳೀಯ ಅಗ್ನಿಶಾಮಕ ದಳ ಹಾಗೂ ವಿವಿಧ ಇಲಾಖೆಗಳ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಬಳಿಕ ಬೆಂಕಿಯನ್ನು ನಂದಿಸಲಾಯಿತು.
ಪನ್ವೇಲ್ ಮಹಾನಗರ ಪಾಲಿಕೆ ಹಾಗೂ ಖೋಪೋಲಿ ಮುನ್ಸಿಪಲ್ ಕೌನ್ಸಿಲ್‌ನ ಅಗ್ನಿಶಾಮಕ ತಂಡಗಳನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.