ರಾಯಚೂರು ಪ್ರಚಾರ ಜೋರು

Updated on: 

ರಾಯಚೂರು ಜಿಲ್ಲೆಯ 7 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಬಿಜೆಪಿ, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ 1 ಕ್ಷೇತ್ರದಲ್ಲಿ ಜೆಡಿಎಸ್ ಹಾಲಿ ಶಾಸಕರನ್ನು ಹೊಂದಿದೆ. ಹೀಗಾಗಿ ಇಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ. ಜೆಡಿಎಸ್ ಕೂಡ ಅಸ್ತಿತ್ವಕ್ಕಾಗಿ ಕಾದಾಟ ನಡೆಸಿದೆ. ಅದೆಲ್ಲದರ ಸಂಪೂರ್ಣ ಮಾಹಿತಿ ನಿಮಗಾಗಿ..

ದೇವದುರ್ಗದಲ್ಲಿ ಶಿವನಗೌಡ 'ನಾಯಕ'!
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ದೇವದುರ್ಗ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದರೂ ಒಂದೇ ಅವಧಿಯಲ್ಲಿ ಎರಡು ಚುನಾವಣೆ ಕಂಡಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಹಾಲಿ ಶಾಸಕ ಶಿವನಗೌಡ ನಾಯಕ 'ಆಪರೇಷನ್ ಕಮಲ'ಕ್ಕೆ ಬಲಿಯಾಗಿ ಬಿಜೆಪಿ ಸೇರಿ ನಂತರ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದರು. ಆದರೆ, ಕಾಲಾಂತರದಲ್ಲಿ ಜಿಪಂ, ತಾಪಂ ಚುನಾವಣೆಯಲ್ಲಿ ಜೆಡಿಎಸ್‌ಗೆ ಗೆಲವಿಗೆ ಶ್ರಮಿಸಿದ್ದು ಗುಟ್ಟಾದ ರಟ್ಟು. ಆದರೂ ಸದ್ಯಕ್ಕೆ ಬಿಜೆಪಿಯಲ್ಲಿದ್ದಾರೆ. ಮಾನವಿ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಸಂಬಂಧಿಗಳಿಗೆ ಟಿಕೆಟ್ ನೀಡಿದರೆ ಮಾತ್ರ ಬಿಜೆಪಿಯಲ್ಲೇ ಇರುವುದಾಗಿ ಷರತ್ತು ಹಾಕಿದ್ದಾರೆ. ಅನಿವಾರ್ಯವಾಗಿ ಬಿಜೆಪಿ ಇದಕ್ಕೆ ಸಮ್ಮತಿಸಿದೆ. ಕಾಂಗ್ರೆಸ್‌ನಲ್ಲಿ ಮಾಜಿ ಸಂಸದ ವೆಂಕಟೇಶ ನಾಯಕ ಇಲ್ಲವೇ ಅವರ ಪುತ್ರ ಬಿ.ವಿ. ನಾಯಕ ಸ್ಪರ್ಧಿಸುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ವಿ.ಎಸ್. ಮೇಟಿ ಅಥವಾ ಸಿದ್ದಯ್ಯ ತಾತಾ ಗುರುವಿನ್ ಅವರ ಸಂಬಂಧಿ ಸ್ಪರ್ಧೆ ನಿಶ್ಚಿತ. ಕೆಜೆಪಿಗೆ ನಾಯಕರಿಲ್ಲದೇ ಅಸ್ತಿತ್ವದ ಹುಡುಕಾಟದಲ್ಲಿದ್ದರೆ, ಬಿಎಸ್ಸಾರ್‌ನಿಂದ ನಾಗಪ್ಪ ಪಾಮರ್ತಿ ಸ್ಪರ್ಧಿಸುವ ಸಾಧ್ಯತೆಯಿದೆ.

ಗ್ರಾಮೀಣದಲ್ಲಿ ರಾಜಾ ಹುಲಿ
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕೆಲವರು ಟಿಕೆಟ್ ದೊರೆಯುವ ಭರವಸೆಯೊಂದಿಗೆ ಪಕ್ಷಾಂತರ ಮಾಡಿದ್ದರೆ ಮತ್ತೆ ಕೆಲವರು ಹೋಗಬೇಕೋ, ಬೇಡವೋ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಕೆಲವರು ವಲಸೆ ಹೋದರೆ ಟಿಕೆಟ್ ಸಿಗುವ ಖಚಿತತೆ ಇಲ್ಲದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕಾಂಗ್ರೆಸ್‌ನ ಹಾಲಿ ಶಾಸಕ ರಾಜಾ ರಾಯಪ್ಪ ನಾಯಕ ಪುನರಾಯ್ಕೆ ಬಯಸಿ ಕಣಕ್ಕಿಳಿಯಲಿದ್ದಾರೆ. ಜೆಡಿಎಸ್‌ನಿಂದ ರಾಜಾ ಅಮರೇಶ್ವರ ನಾಯಕ, ರಾಜಾ ರಂಗಪ್ಪ ನಾಯಕರಲ್ಲಿ ಟಿಕೆಟ್‌ಗೆ ಪೈಪೋಟಿಯಿದೆ. ಆದರೆ ರಾಜಾ ಅಮರೇಶ್ವರ ನಾಯಕ ಅವರಿಗೆ ಟಿಕೆಟ್ ಕೊಡುವ ಭರವಸೆ ನೀಡಿಯೇ ಬಿಜೆಪಿಯಿಂದ ಜೆಡಿಎಸ್ ಸೆಳೆದಿದ್ದು ಅವರೇ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿಯಿಂದ ಶಾಸಕ ಶಿವನಗೌಡ ನಾಯಕರ ಸಂಬಂಧಿ ತಿಪ್ಪರಾಜು ಸ್ಪರ್ಧೆ ಬಹುತೇಕ ಖಚಿತ. ಕೆಜೆಪಿ, ಬಿಎಸ್ಸಾರ್‌ಗೆ ಇಲ್ಲಿ ಅಭ್ಯರ್ಥಿಗಳಿಲ್ಲ.

ಸಿಂಧನೂರಿನಲ್ಲಿ 'ವೆಂಕಟ' ಇನ್ ಸಂಕಟ
ಸಾಮಾನ್ಯರಿಗೆ ಮೀಸಲಾಗಿರುವ ಸಿಂಧನೂರು ಕ್ಷೇತ್ರ ಕಾಂಗ್ರೆಸ್ (ಹಂಪನಗೌಡ ಬಾದರ್ಲಿ, ಕೆ. ವಿರುಪಾಕ್ಷಪ್ಪ) ನಾಯಕರ ಮಧ್ಯೆಯೇ ಜಿದ್ದಾಜಿದ್ದಿಗೆ ಹೆಸರುವಾಸಿಯಾದದ್ದು. ಆದರೆ, ಕೆ. ವಿರುಪಾಕ್ಷಪ್ಪ ಬಿಎಸ್‌ಆರ್ ಕಾಂಗ್ರೆಸ್ ಸೇರಿದ್ದರಿಂದ ಈ ಬಾರಿ ಕೊಂಚ ತಣ್ಣಗಾಗುವ ಸಾಧ್ಯತೆ ಇದೆ. ಹಾಲಿ ಶಾಸಕ ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಜೆಡಿಎಸ್‌ನಿಂದ ಪುನರಾಯ್ಕೆ ಬಯಸುವುದು ಖಚಿತ. ಕಾಂಗ್ರೆಸ್‌ನಿಂದ ಹಂಪನಗೌಡ ಬಾದರ್ಲಿ ಸ್ಪರ್ಧೆ ನಿಶ್ಚಿತ. ಬಿಜೆಪಿಯಿಂದ ಅಮರೇಗೌಡ ವಿರುಪಾಪುರ ಕಣಕ್ಕಿಳಿಯುವ ಲಕ್ಷಣಗಳಿವೆ. ಬಿಎಸ್ಸಾರ್ ಕಾಂಗ್ರೆಸ್‌ನಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಮ್ಮ ಸಂಬಂಧಿ ಕರಿಯಪ್ಪ ಅವರನ್ನು ಕಣಕ್ಕಿಳಿಸುವ ಮೂನ್ಸೂಚನೆ ದೊರೆತಿದೆ. ಕೆಜೆಪಿಯಿಂದ ರಾಜಶೇಖರ್ ಪಾಟೀಲ್ ಕಣಕ್ಕಿಳಿಯಲಿದ್ದಾರೆಂಬುದು ಸದ್ಯದ ಲೆಕ್ಕಾಚಾರ. ಕೆಜೆಪಿ ಇದುವರೆಗೆ ಲೆಕ್ಕಕ್ಕಿಲ್ಲ.

ನಗರದಲ್ಲಿ ನಡೆಯುತ್ತಾ ಯಾ'ಸೀನ್‌'?
ರಾಯಚೂರು ನಗರ ಕ್ಷೇತ್ರದಲ್ಲಿ ಸಮಸ್ಯೆಗಳು ನೂರೆಂಟು. ಸ್ಪರ್ಧಾಕಾಂಕ್ಷಿಗಳು ಹೆಚ್ಚಾಗಿದ್ದರಿಂದ ಎಲ್ಲ ಪಕ್ಷಗಳಲ್ಲೂ ಟಿಕೆಟ್ ಹಂಚಿಕೆಯೇ ಕಗ್ಗಂಟು. ಹಾಲಿ ಕಾಂಗ್ರೆಸ್ ಶಾಸಕ ಸೈಯದ್ ಯಾಸೀನ್ ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಎನ್.ಎಸ್. ಬೋಸರಾಜು ಪೈಪೋಟಿ ನೀಡುತ್ತಿದ್ದಾರೆ. ಜೆಡಿಎಸ್‌ನಿಂದ ಮಾಜಿ ಕೇಂದ್ರ ಸಚಿವ ಎಂ.ಎಸ್. ಪಾಟೀಲ್ ರಾಜಕೀಯ ಸನ್ಯಾಸದಿಂದ ಮರಳಿ ಬಂದು ಸ್ಪರ್ಧೆಗೆ ಸಜ್ಜಾಗಿದ್ದರೆ, ಖ್ಯಾತ ವೈದ್ಯ ಡಾ. ಶಿವರಾಜ್ ಪಾಟೀಲ್, ಉದ್ಯಮಿ ಈ.ಆಂಜನೇಯ, ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು ಸಹ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಜೆಪಿಯಲ್ಲಿ ಮಾಜಿ ಶಾಸಕ ಪಾಪಾರೆಡ್ಡಿ, ವಾಣಿಜ್ಯೋದ್ಯಮ ವಿಭಾಗದ ತ್ರಿವಿಕ್ರಮ್ ಜೋಷಿ ಮಧ್ಯೆ ಟಿಕೆಟ್‌ಗಾಗಿ ಸಾಹಸ ನಡೆದಿದೆ. ಜತೆಗೆ ಅಶೋಕ ಗಸ್ತಿ ಕೂಡ ನಾನು ಸ್ಪರ್ಧಿಸುತ್ತೇನೆ ಎಂದು ದುಂಬಾಲು ಬಿದ್ದಿದ್ದಾರೆ. ಕೆಜೆಪಿಯಿಂದ ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ್ ಅನ್ವರಿ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ನಿಗದಿಯಾಗಿಲ್ಲ.

ಈ ಬಾರಿ 'ಮಸ್ಕಿ'ರಿ ನಡೆಯಲ್ಲ
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಮಸ್ಕಿ ಕ್ಷೇತ್ರ ತಾಲೂಕು ಕೇಂದ್ರ ಘೋಷಣೆಗಾಗಿ ಹಲವು ವರ್ಷಗಳಿಂದ ಕಾಯುತ್ತಿದೆ. ಕ್ಷೇತ್ರ ಮರು ವಿಂಗಡನೆ ಬಳಿಕ ಸಿಂಧನೂರು, ಲಿಂಗಸ್ಗೂರು ತಾಲೂಕಿನ ಕೆಲ ಗ್ರಾಮಗಳು ಸೇರಿ ಅಸ್ತಿತ್ವಕ್ಕೆ ಬಂದಿದ್ದು ಬಿಜೆಪಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಪ್ರತಿನಿಧಿಸುತ್ತಿದ್ದಾರೆ. ಆದರೆ, ತಮ್ಮದೇ ಸರ್ಕಾರದಿಂದ ಸಮರ್ಪಕ ಅನುದಾನ ದೊರೆಯದ್ದರಿಂದ ಧರಣಿ, ರಸ್ತೆತಡೆ ಮಾಡಿ ಬೇಸತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಕದ ತಟ್ಟುತ್ತಿದ್ದು ಒಂದು ವೇಳೆ ಅವರು 'ಕೈ' ಕೊಟ್ಟರೆ ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲದ ಸ್ಥಿತಿ. ಜೆಡಿಎಸ್‌ನಿಂದ ತಿಮ್ಮಪ್ಪ ನಾಯಕ, ಅಯ್ಯಪ್ಪ ಟಿಕೆಟ್‌ಗೆ ಪೈಪೋಟಿಯಲ್ಲಿದ್ದಾರೆ. ಕೆಜೆಪಿಗೆ ಅಭ್ಯರ್ಥಿಯೇ ಇಲ್ಲ. ಬಿಎಸ್ಸಾರ್‌ನಿಂದ ಉದ್ಯಮಿ ಶೇಖರಪ್ಪ ತಳವಾರ್ ಸ್ಪರ್ಧೆ ಖಚಿತ.

'ಮಾನ'ವಿ ಉಳಿಸಿಕೊಳ್ಳಲು ಯತ್ನ
ಮಾನವಿ ವಿಧಾನಸಭೆ ಕ್ಷೇತ್ರ ಮೊದಲಿನಿಂದಲೂ 'ನಾಯಕ'ರ ಜಿದ್ದಾಜಿದ್ದಿಯ ಕಣ. ಕಳೆದ ಚುನಾವಣೆಯಿಂದ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಹಾಲಿ ಕಾಂಗ್ರೆಸ್ ಶಾಸಕ ಹಂಪಯ್ಯ ನಾಯಕ ಈ ಬಾರಿಯೂ ಸ್ಪರ್ಧೆ ಖಚಿತ. ಬಿಜೆಪಿ ಯಿಂದ ಬಸನಗೌಡ ಬ್ಯಾಗವಾಟ್ ಕಣಕ್ಕಿಳಿಯಬಹುದು ಇಲ್ಲವೇ ದೇವದುರ್ಗ ಶಾಸಕ ಶಿವನಗೌಡ ನಾಯಕ ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಕೆಜೆಪಿಗೆ ಜಿಗಿಯುವ ಲೆಕ್ಕಾಚಾರದಲ್ಲಿರುವ ಗಂಗಾಧರ್ ನಾಯಕ ಆ ಪಕ್ಷದಿಂದ ಸ್ಪರ್ಧಿಸುವ ಇರಾದೆಯಲ್ಲಿದ್ದಾರೆ. ಜೆಡಿಎಸ್‌ನಿಂದ ರಾಜಾ ವೆಂಕಟಪ್ಪ ನಾಯಕ ಅವರಿಗೆ ಉಮಾಶಂಕರ್ ಅವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಜೆಪಿಯಲ್ಲಿರುವ ಟಿಕೆಟ್ ಗ್ಯಾರಂಟಿ ಇಲ್ಲದ್ದರಿಂದ ಬಿಎಸ್‌ಆರ್ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಹಂಪಯ್ಯ ನಾಯಕಗೆ ಮಾಜಿ ಶಾಸಕ ಎನ್.ಎಸ್. ಬೋಸರಾಜು ಅವರ ಆಶೀರ್ವಾದ ಕೂಡ ಇದೆ.

ಲಿಂಗಸ್ಗೂರು: ಯಾರಿಗೆ ರಾಜಕೀಯ ಸೂರು?
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಲಿಂಗಸ್ಗೂರು ಕ್ಷೇತ್ರದಲ್ಲಿ ಬರದಿಂದ ಗುಳೇ ಹೋಗುವುದು ಮಾಮೂಲಿ. ಆದರೆ, ಚುನಾವಣೆ ಬಂದಾಗ ಮಾತ್ರ ಅವರನ್ನು ಕರೆ ತರುವ ಹೊಣೆಗಾರಿಕೆಯಿಂದ ರಾಜಕೀಯ ನಾಯಕರು ತಪ್ಪಿಸಿಕೊಳ್ಳುವುದಿಲ್ಲ. ಹಾಲಿ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಆದರೆ, ಯಾವ ಪಕ್ಷದಿಂದ ಎಂದು ಇನ್ನೂ ಖಚಿತವಾಗಿಲ್ಲ. ಬಿಜೆಪಿ ಭಿನ್ನಮತದಿಂದ ವಜ್ಜಲ್ ಜೆಡಿಎಸ್‌ನ ಸಖ್ಯ ಬೆಳೆಸಿದ್ದರಿಂದ ಬಿಜೆಪಿಗೆ ಅಭ್ಯರ್ಥಿ ಕೊರತೆ ಕಾಡುತ್ತಿದೆ. ಕಾಂಗ್ರೆಸ್ ಟಿಕೆಟ್‌ಗೆ ನಿವೃತ್ತ ಸರ್ಕಾರಿ ನೌಕರ ಬಾಲಸ್ವಾಮಿ ಕೊಡ್ಲಿ, ನಿವೃತ್ತ ಪೊಲೀಸ್ ಅಧಿಕಾರಿ ಟಿ.ಆರ್. ನಾಯಕ್, ಡಿ.ಎಸ್. ಹೂಲಗೇರಿ, ಜಿಪಂ ಮಾಜಿ ಸದಸ್ಯ ಪಾಮಯ್ಯ ಮುರಾರಿ ಅವರಲ್ಲಿ ತೀವ್ರ ಪೈಪೋಟಿಯಿದೆ. ಕೆಜೆಪಿ ಅಭ್ಯರ್ಥಿಯ ಹುಡುಕಾಟದಲ್ಲಿದ್ದರೆ ಬಿಎಸ್ಸಾರ್‌ಗೆ ಉದ್ಯಮಿ ಸಿದ್ದು ಬಂಡಿ ಸ್ಪರ್ಧೆ ಅಂತಿಮವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com