ಕ.ಪ್ರ. ವಾರ್ತೆ ಮಂಗಳೂರು ಮಾ.27-
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆ ಉಪಾಧ್ಯಕ್ಷ ಯೋಗೀಶ್ ಭಟ್ಗೆ 5ನೇ ಬಾರಿ ಸ್ಪರ್ಧಿಸಲು ಕೊನೆಗೂ ಪಕ್ಷದಿಂದ ಹಸಿರು ನಿಶಾನೆ ಸಿಕ್ಕಿದರೆ, ಉಡುಪಿ ಕ್ಷೇತ್ರದಲ್ಲಿ ಹಾಲಿ ಶಾಸಕ ರಘುಪತಿ ಭಟ್ ಬದಲು ಮಾಜಿ ಸಚಿವ ದಿ. ಡಾ. ವಿ.ಎಸ್. ಆಚಾರ್ಯರ ಪತ್ನಿ ಶಾಂತಾ ಆಚಾರ್ಯರನ್ನು ಕಣಕ್ಕಿಳಿಸಲು ಸಂಘ ಪರಿವಾರ, ಬಿಜೆಪಿ ತೀರ್ಮಾನಿಸಿದೆ.
ಸಂಘ ಪರಿವಾರ ಹಾಗೂ ಬಿಜೆಪಿ ಜಂಟಿಯಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿವೆ.
ರಘುಪತಿ ಭಟ್ಗೆ ಕೊಕ್: ರಘುಪತಿ ಭಟ್ಗೆ ಈ ಬಾರಿ ಕೊಕ್ ನೀಡಲು ನಿರ್ಧರಿಸಿದ್ದು, ಅಲ್ಲಿ 3ನೇ ಹಣಕಾಸು ಆಯೋಗ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಡಾ.ಎ.ಜಿ. ಕೊಡ್ಗಿ ಪುತ್ರ ಕಿರಣ್ ಕೊಡ್ಗಿ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಡಾ. ಆಚಾರ್ಯ ನಿಧನ ಬಳಿಕ ಅನುಕಂಪದ ಆಧಾರದಲ್ಲಿ ಮತ ಗಳಿಕೆ ಲೆಕ್ಕಾಚಾರದಲ್ಲಿ ಶಾಂತಾರನ್ನು ಕಣಕ್ಕಿಳಿಸಲು ಚಿಂತಿಸಿದೆ. ವಿದೇಶದಲ್ಲಿರುವ ಶಾಂತಾ ಅವರನ್ನು ಈ ಸಂಬಂಧವಾಗಿ ಸಂಪರ್ಕಿಸಿದ್ದು, ಅವರ ಒಪ್ಪಿಗೆ ಸಿಕ್ಕಿಲ್ಲ. ಇನ್ನೆರಡು ದಿನಗಳಲ್ಲಿ ಸ್ವದೇಶಕ್ಕೆ ಆಗಮಿಸಲಿರುವ ಅವರನ್ನು ಸಂಘ ಹಾಗೂ ಬಿಜೆಪಿ ನಾಯಕರು ಒಪ್ಪಿಸುವ ಕೆಲಸಕ್ಕೆ ಮುಂದಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಕಸ್ಮಾತ್ ಶಾಂತಾರಿಂದ ಸಮ್ಮತಿ ಸಿಗದಿದ್ದರೆ, ಕಿರಣ್ ಕೊಡ್ಗಿಯವರೇ ಅಭ್ಯರ್ಥಿಯಾಗಲಿದ್ದಾರೆ.
ಕುಂದಾಪುರದಲ್ಲಿ ಪಕ್ಷೇತರರರಾಗಿ ಸ್ಪರ್ಧಿಸುವ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಸಡ್ಡು ಹೊಡೆಯಲು ಬಿಜೆಪಿ ಮುಖಂಡ ಕೇಶವ ಕುಂದರ್, ಕಾಪುನಲ್ಲಿ ಶಾಸಕ ಲಾಲಾಜಿ ಮೆಂಡನ್, ಕಾರ್ಕಳಕ್ಕೆ ಮಾಜಿ ಶಾಸಕ ಸುನೀಲ್ ಕುಮಾರ್ ಹೆಸರು ಚಾಲ್ತಿಯಲ್ಲಿವೆ.
ಯೋಗೀಶ್ ಭಟ್ಗೆ ಛಾನ್ಸ್: ಮಂಗಳೂರು ದಕ್ಷಿಣದಲ್ಲಿ ವಿಧಾನಸಭೆ ಉಪಾಧ್ಯಕ್ಷ ಯೋಗೀಶ್ ಭಟ್ ಸ್ಪರ್ಧೆಗೆ ಕೊನೆ ಕ್ಷಣದಲ್ಲಿ ಸಮ್ಮತಿ ಲಭಿಸಿದೆ.
ಬೆಳ್ತಂಗಡಿಗೆ ಮಗನಲ್ಲ, ಅಪ್ಪ!: ಬೆಳ್ತಂಗಡಿ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಸೇರಿದ್ದ ಮಾಜಿ ಸಚಿವ ಗಂಗಾಧರ ಗೌಡರಿಗೆ ಬಿಜೆಪಿ ಟಿಕೆಟ್ ನೀಡಲಿದೆ. ಅವರ ಪುತ್ರ ರಂಜನ್ ಗೌಡ ಹೆಸರು ಇತ್ತಾದರೂ, ಕೊನೆಗೆ ಅಪ್ಪನ ಹೆಸರನ್ನೇ ಅಂತಿಮಗೊಳಿಸಲಾಗಿದೆ.
ಮಂಗಳೂರು (ಉಳ್ಳಾಲ) ಕ್ಷೇತ್ರಕ್ಕೆ ಜಿಪಂ ಸದಸ್ಯ ಸಂತೋಷ್ ಬೋಳ್ಯಾರ್ ಹೆಸರು ಇತ್ತಾದರೂ, ಈಗ ಮಂಡಲ ಸಮಿತಿ ಅಧ್ಯಕ್ಷ ಚಂದ್ರಹಾಸ ಉಳ್ಳಾಲ ಹೆಸರು ಅಂತಿಮವಾಗಿದೆ. ಮೂಡುಬಿದಿರೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಸತ್ಯಜಿತ್ ಸುರತ್ಕಲ್ಗೆ ಟಿಕೆಟ್ ಸಿಗುವ ಸಂಭವ ಜಾಸ್ತಿ. ಉಳಿದಂತೆ ಸುಳ್ಯ ಅಂಗಾರ, ಪುತ್ತೂರಿಗೆ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಬಂಟ್ವಾಳ ರಾಜೇಶ್ ನೈಕ್, ಮಂಗಳೂರು ಉತ್ತರ ಕೃಷ್ಣ ಪಾಲೇಮಾರ್ ಹೆಸರು ಕೊನೆಗೊಳಿಸಲಾಗಿದೆ. ಗುರುವಾರ ಮಂಗಳೂರಿನಲ್ಲಿ ಉಭಯ ಜಿಲ್ಲೆಗಳ ಬಾಕಿ ಅಭ್ಯರ್ಥಿ ಆಯ್ಕೆಯ ಅಂತಿಮ ಸಭೆ ನಡೆಯಲಿದ್ದು, ಮಾಜಿ ಸಿಎಂ ಡೀವಿ ಸಹಿತ ಪಕ್ಷ ಮುಖಂಡರು ಪಾಲ್ಗೊಳ್ಳಲಿದ್ದಾರೆ.
- ಆತ್ಮಭೂಷಣ್