ಶಿರಾಳಕೊಪ್ಪ: ರಾಜಕಾರಣದಲ್ಲಿ ನನ್ನ ಲೆಕ್ಕಾಚಾರ ಎಂದೂ ತಪ್ಪಾಗಿಲ್ಲ. ಯಡಿಯೂರಪ್ಪ ಇಲ್ಲದೇ ಮುಂಬರುವ ಸರ್ಕಾರ ರಚನೆ ಸಾಧ್ಯವಿಲ್ಲದ ಮಾತು ಎಂದು ಮಾಜಿ ಸಿಎಂ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿರಾಳಕೊಪ್ಪ ಭಾಗದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಬಿಎಸ್‌ವೈ, ಗುರುವಾರ ತಾಲೂಕಿನ 24 ಗ್ರಾಮಗಳಲ್ಲಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಈಗ ಪ್ರಾದೇಶಿಕ ಪಕ್ಷಗಳ ಯುಗ ಶುರುವಾಗಿದೆ. ದೇಶದ ಪ್ರಧಾನಿಗಳು ಪ್ರಾದೇಶಿಕ ಪಕ್ಷಗಳ ಸಹಕಾರ ಎದುರು ನೋಡುತ್ತಿದ್ದಾರೆ. ಹಾಗೆಯೇ ದೇಶದಲ್ಲಿ ಮೂರನೆಯ ರಂಗ ರಚನೆ ಕಾರ್ಯ ವೇಗವಾಗಿ ನಡೆದಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಯಾರೂ ನಿರೀಕ್ಷೆ ಮಾಡದ ಫಲಿತಾಂಶ ಬರಲಿದೆ ಎಂಬ ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೆಜೆಪಿ ಕಟ್ಟಿ ಪ್ರವಾಹದ ವಿರುದ್ಧ ಈಜುವ ಕಾರ್ಯ ಕೈಗೊಂಡಿದ್ದೇನೆ. ನಾನು ದೇವರು ಮೆಚ್ಚುವ ಹಾಗೆ ಕೆಲಸ ಮಾಡಿದ್ದರೂ ನನ್ನ ವಿರೋಧಿಗಳು ಹಗುರವಾಗಿ ಮಾತನಾಡುತ್ತಾರೆ. ಅಂಥವರಿಗೆ ನೀವು (ಗ್ರಾಮಸ್ಥರು) ಹುಷಾರ್ ಎಂದು ಅವರಿಗೆ ಹೇಳಿದರೆ, ನಾನು ಮಾಡಿದ ಕೆಲಸ ಸಾರ್ಥಕವಾಗುತ್ತದೆ. ಸಜ್ಜನರು ಸುಮ್ಮನಿದ್ದರೆ ದುರ್ಜನರು ಘರ್ಜಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.