ಕ.ಪ್ರ. ವಾರ್ತೆ ಬೆಂಗಳೂರು ಮಾ.29
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರ ಜಾಗೃತಿಗೆ ಮುಂದಾಗಿರುವ ಚುನಾವಣಾ ಆಯೋಗ ಸ್ವೀಪ್ ಎಂಬ ಯೋಜನೆ ಜಾರಿಗೆ ತಂದಿದ್ದು, ವಿವಿಧ ಇಲಾಖೆ ಅಧಿಕಾರಿಗಳಿಗೆ ಶುಕ್ರವಾರ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಲಹೆ ನೀಡಲಾಯಿತು.
ವಾರ್ತಾ ಮತ್ತು ಪ್ರಚಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ, ಶಿಕ್ಷಣ, ಶಾಲಾ- ಕಾಲೇಜು, ಐಟಿ ಕಂಪನಿ ಮುಖ್ಯಸ್ಥರು ಮತ್ತು ಮಾನವ ಸಂಪನ್ಮೂಲ ಇಲಾಖೆ ಮುಖ್ಯಸ್ಥರು, ನಗರ ಕೇಂದ್ರಗಳು, ಬುಡಕಟ್ಟು ಅಭಿವೃದ್ಧಿ ಮತ್ತು ಕಲ್ಯಾಣ ಇಲಾಖೆ, ಬ್ಯಾಂಕ್, ಪೋಸ್ಟ್, ಸಮಾಜ ಕಲ್ಯಾಣ, ಯುವಜನಸೇವೆ, ಕೈಗಾರಿಕೆ, ನಗರಾಭಿವೃದ್ಧಿ, ಕೆಎಸ್ಆರ್ಟಿಸಿ, ಬಿಎಂಟಿಸಿ, ರೇಲ್ವೆ ಇಲಾಖೆ ಅಧಿಕಾರಿಗಳ ಜತೆ ರಾಜ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಹಾಗೂ ವಿವರಣೆ ನೀಡಿದರು.
ವಿವಿಧ ಇಲಾಖೆಗಳಿಗೆ ನೀಡಿರುವ ಮಾಹಿತಿಗಳು ಹೀಗಿವೆ....
ವಾರ್ತಾ ಮತ್ತು ಪ್ರಚಾರ ಇಲಾಖೆ: ಸ್ವೀಪ್ ಯೋಜನೆಗೆ ಸಂಬಂಧಿಸಿದ ಎಲ್ಲ ಭಿತ್ತಿಪತ್ರಗಳು, ನಾಮಫಲಕಗಳ ಹಂಚಿಕೆಯನ್ನು ಮಾರ್ಚ್ 30ರೊಳಗೆ ಪೂರ್ಣಗೊಳಿಸುವುದು. ಈ ಸಂಬಂಧ ತಯಾರಿಸಿರುವ ವಿಡಿಯೋ ತುಣುಕುಗಳನ್ನು ಸಂಚಾರಿ ಥಿಯೇಟರ್ ಮೂಲಕ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರದರ್ಶನ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ವ್ಯವಸ್ಥೆ ಮಾಡುವುದು.
ಈ ಮೂಲಕ ಮತದಾನ ಮಾಡದೇ ಇರುವುದರಿಂದ ಜನತಂತ್ರ ವ್ಯವಸ್ಥೆ ಮೇಲಾಗುವ ಪರಿಣಾಮಗಳನ್ನು ಜನತೆಗೆ ಮನದಟ್ಟು ಮಾಡುವುದು. ಮಾತ್ರವಲ್ಲ ಸ್ಥಳೀಯ ಕೇಬಲ್ ಜಾನಲ್ ನಿರ್ವಹಣೆದಾರರಿಗೆ ಈ ಸಿಡಿ ನೀಡಿ ಪ್ರಸಾರಕ್ಕೆ ವ್ಯವಸ್ಥೆ ಮಾಡುವುದು. ಸ್ಥಳೀಯ ಮುದ್ರಣ ಮಾಧ್ಯಮಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಬೇಕು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಅಂಗನವಾಡಿ ಕಾರ್ಯಕರ್ತೆಯರು,ಸೂಪರ್ವೈಸರ್ಗಳನ್ನು ಮತದಾರರ ನೋಂದಣಿ ಕಾರ್ಯಕ್ಕೆ ತರಬೇತುಗೊಳಿಸುವುದು. ಮತದಾರರ ಚೀಟಿ, ಮತದಾನದ ಮಹತ್ವ ಬಿತ್ತರಿಸುವುದು. ಇದಕ್ಕೆ ಸ್ವಸಹಾಯ ಸಂಘಗಳ ಸಹಾಯವನ್ನೂ ಪಡೆದುಕೊಳ್ಳುವುದು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ತಾಲೂಕು ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಮತದಾರ ಜಾಗೃತಿ ಕಾರ್ಯದಲ್ಲಿ ಭಾಗಿಯಾಗುವುದು. ಸ್ವೀಪ್ ಯೋಜನೆಗೆ ಸಂಬಂಧಿಸಿದ ಭಿತ್ತಿಪತ್ರ, ಸಂದೇಶ ಪತ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಹಂಚಿ ಸಂದೇಶ ರವಾನೆ ಮಾಡುವುದು.
ಕೃಷಿ ಇಲಾಖೆ: ಕೃಷಿ ಸಹಾಯಕರು ರೈತರಲ್ಲಿ ಮತದಾನ ಜಾಗೃತಿ ಮಾಡುವುದು, ಮತದಾರ ನೋಂದಣಿ ಕಾರ್ಯ, ಎಪಿಕ್ ಹಾಗೂ ಮತದಾರರ ಸ್ಲಿಪ್ ಹಂಚಿಕೆಯಲ್ಲಿ ಸಹಕರಿಸುವುದು.
ಶಿಕ್ಷಣ ಇಲಾಖೆ: ಈ ಬಾರಿ ಚುನಾವಣೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ವಿಶೇಷ ಒತ್ತು ನೀಡಿರುವ ಆಯೋಗ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಮುತುವರ್ಜಿ ವಹಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಇದಕ್ಕೆ ಶಿಕ್ಷಕರನ್ನು ತರಬೇತುಗೊಳಿಸುವಂತೆ ಬಿಇಒಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಕಾಲೇಜುಗಳಲ್ಲಿ ರಸಪ್ರಶ್ನೆ, ಕಾರ್ಯಾಗಾರ, ಚರ್ಚಾಸ್ಪರ್ಧೆಗಳನ್ನು ಆಯೋಜಿಸುವುದು.
ಬಹುರಾಷ್ಟ್ರೀಯ ಕಂಪನಿ, ಐಟಿ, ಬಿಟಿ: ಬಹುರಾಷ್ಟ್ರೀಯ, ಐಟಿ, ಬಿಟಿ ಕಂಪನಿಗಳ ಮಾನವ ಸಂಪನ್ಮೂಲ ಇಲಾಖೆಗೆ ಆಯೋಗದಿಂದ ಇ- ಮೇಲ್ ಕಳುಹಿಸಲಾಗಿದ್ದು, ತಮ್ಮ ಸಿಬ್ಬಂದಿಗೆ ಮತದಾನದ ಮಹತ್ವದ ಅರಿವು ಮೂಡಿಸುವುದು. ಇದರ ಜತೆಗೆ ವೆಬ್ಸೈಟ್, ಗೂಗಲ್, ಫೇಸ್ಬುಕ್, ಯೂಟ್ಯೂಬ್, ಎಸ್ಎಂಎಸ್ ಮೂಲಕ ಸಂದೇಶ ರವಾನೆ ಮಾಡಲು ಮನವಿ.
ಗಿರಿಜನ ಜಾಗೃತಿ: ವಿಶೇಷವಾಗಿ ಗಿರಿಜನರನ್ನು ಚುನಾವಣಾ ಪ್ರಕ್ರಿಯೆಯೊಳಗೆ ತರಲು ಚಾಮರಾಜನಗರ, ಮಡಿಕೇರಿ, ಕಾರವಾರ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಶೇಷ ಆಂದೋಲನಕ್ಕೆ ಚಾಲನೆ. ಇದಕ್ಕಾಗಿ ಜಿಲ್ಲಾಡಳಿತದ ಜತೆಗೆ ಗಿರಿಜನ ಕಲ್ಯಾಣ ಕ್ಷೇತ್ರದ ವಿವಿಧ ಸರ್ಕಾರಿ ಶಾಖೆಗಳ ಸಮರ್ಪಕ ಬಳಕೆಗೆ ಸೂಚನೆ.