1940ರಲ್ಲಿ ಪರಿಷತ್ಗೆ ಪ್ರತಿನಿಧಿಗಳ ಸದನದಿಂದ ಸದಸ್ಯರು ನಾಮನಿರ್ದೇಶನವಾಗುವುದು ಪ್ರಾರಂಭವಾಯಿತು. ತದನಂತರ ಪರಿಷತ್ ಕಾನೂನು ರಚನೆ ಪ್ರಾರಂಭಿಸಿತು. ಪರಿಷತ್ ಹಾಗೂ ದಿವಾನರಿಂದ ಸಹಿಯಾಗದೆ ಯಾವುದೇ ಹೊಸ ನಿಯಮಗಳನ್ನು ಪರಿಚಯಿಸುವಂತಿರಲಿಲ್ಲ. ತುರ್ತು ಸಂದರ್ಭಗಳಲ್ಲಿ ಕೆಲವು ವಿಷಯಗಳು ಪರಿಷತ್ನಿಂದ ಹೊರತಾಗಿದ್ದರಿಂದ ಈ ವಿಷಯಗಳಿಗೆ ಸರ್ಕಾರವೇ ಕಾನೂನು ರಚಿಸುತ್ತಿತ್ತು. ಪರಿಷತ್ನಲ್ಲಿ ನಡುವೆ ಪ್ರಶ್ನೆ ಕೇಳಲು 1914ರಲ್ಲಿ ಸದಸ್ಯರಿಗೆ ಅವಕಾಶ ಮಾಡಿಕೊಡಲಾಯಿತು. 1915ರಲ್ಲಿ ಸದಸ್ಯರ ಉಪಪ್ರಶ್ನೆಗೂ ಅನುವಾಯಿತು. 1914ರಲ್ಲಿ ಪರಿಷತ್ಗೆ ಬಜೆಟ್ ಮೇಲೆ ಚರ್ಚಿಸುವ ಅಧಿಕಾರ ಬಂತು. ಅನುದಾನದ ಬೇಡಿಕೆಗೆ ಮತ ಹಾಕುವ ಅಧಿಕಾರವನ್ನು 1923ರಲ್ಲಿ ನೀಡಲಾಯಿತು. ಬ್ರಿಟಿಷ್ ಇಂಡಿಯಾದಲ್ಲಿ ಕೆಲವು ವೆಚ್ಚಗಳಿಗೆ ಮತ ಹಾಕುವಂತಿರಲಿಲ್ಲ. ಇದಕ್ಕೂ ಅವಕಾಶ ಲಭ್ಯವಾಯಿತು. 1919ರ ನಂತರ ಪರಿಷತ್ ನಿರ್ಣಯ ತೆಗೆದುಕೊಳ್ಳಲು ಸಮರ್ಥವಾಯಿತು. ಪ್ರತಿನಿಧಿಗಳ ಸದನದ ನಿಯಯ ಹಾಗೂ ಶಾಸನ ನೀತಿಗಳನ್ನು ಪರಿಷತ್ ಬದಲಿಸದಂತೆ 1923ರಲ್ಲಿ ಕಟ್ಟಳೆಯಾಯಿತು. 1917ರಲ್ಲಿ ಪರಿಷತ್ ಸದಸ್ಯರ ಅವಧಿಯನ್ನು ಮೂರು ವರ್ಷಕ್ಕೆ ಹಾಗೂ 1940ರಲ್ಲಿ ನಾಲ್ಕು ವರ್ಷಕ್ಕೆ ನಿಗದಿಪಡಿಸಲಾಯಿತು. 1935ರಲ್ಲಿ ಭಾರತ ಸರ್ಕಾರದ ಕಾಯಿದೆಯಂತೆಯೇ 1940ರ ಮೈಸೂರು ಸರ್ಕಾರದ ಕಾಯಿದೆ ಪ್ರಕಾರ ಪ್ರತಿನಿಧಿ ಸದನದ ಸದಸ್ಯರಿಗೆ ವಾಕ್ ಸ್ವಾತಂತ್ರ್ಯ ಲಭ್ಯವಾಯಿತು. ಸ್ವಾತಂತ್ರ್ಯ ನಂತರ, ಮೈಸೂರು ಮಹಾರಾಜರು 1947ರ ಅಕ್ಟೋಬರ್ 29ರಂದು ಮೈಸೂರು ರಾಜ್ಯ ಸ್ಥಾಪನೆಗಾಗಿ ಅಂಗ ಸದನ ರಚಿಸಲು ಆದೇಶ ಹೊರಡಿಸಿದರು. ಅಂಗ ಸದನ ಸಭೆ ಸೇರಿದಾಗ ಪ್ರತಿನಿಧಿಗಳ ಸದನ ಹಾಗೂ ಪರಿಷತ್ನ ಸದಸ್ಯರಲ್ಲಿ ಕೆಲವರು ಮೈಸೂರು ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ ರಚನೆಯಾಗಬೇಕು ಎಂದು ಪ್ರತಿಪಾದಿಸಿದರು. ರಾಜ್ಯದ ಆಡಳಿತದ ಸಂವಿಧಾನವನ್ನು ಭಾರತ ಸರ್ಕಾರ ರಚಿಸುವುದೇ ಸೂಕ್ತ ಎಂದು ಬಹುತೇಕರು ಅಭಿಪ್ರಾಯಪಟ್ಟರು. ಭಾರತ ಸರ್ಕಾರವೇ ರಾಜ್ಯಕ್ಕೂ ಸಂವಿಧಾನ ರಚಿಸಬೇಕೆಂದು ಅಧಿಕ ಸಂಖ್ಯೆಯಲ್ಲಿ ಸದಸ್ಯರು ಆಗ್ರಹಿಸಿದರು. ಇದಕ್ಕೆ ಮನ್ನಣೆ ದೊರೆತು, ಮೈಸೂರು ರಾಜ್ಯಕ್ಕೆ ಭಾರತ ಸರ್ಕಾರ ರಚಿಸುವ ಸಂವಿಧಾನವೇ ಅಳವಡಿಕೆಯಾಗಬೇಕು ಎಂಬ ನಿರ್ಣಯವನ್ನು ಅಂಗ ಸದನದಲ್ಲಿ ಕೈಗೊಳ್ಳಲಾಯಿತು. ಹೀಗಾಗಿ ಪ್ರತಿನಿಧಿಗಳ ಸದನ ಹಾಗೂ ಪರಿಷತ್ ವಿಸರ್ಜನೆಯಾಗುವಂತಾಯಿತು. 1949ರ ನವೆಂಬರ್ನಲ್ಲಿ ಮಹಾರಾಜರು ಹೊರಡಿಸಿದ ಆಜ್ಞೆ ಪ್ರಕಾರ, ಸದನ ಹಾಗೂ ಪರಿಷತ್ 1949ರ ಡಿಸೆಂಬರ್ 16ರಂದು ವಿಸರ್ಜನೆಯಾದವು. ಸಂವಿಧಾನದ ಪ್ರಕಾರ ಚುನಾವಣೆ ನಡೆಯುವವರೆಗೂ 1947ರಲ್ಲಿ ರಚನೆಯಾದ ಅಂಗ ಸದನವೇ ಮೈಸೂರಿನ ಪ್ರಸ್ತಾವಿತ ಸದನವಾಗಿ ಕಾರ್ಯನಿರ್ವಹಿಸಿತು.
- ಕೆರೆ ಮಂಜು