ಇಂದು ಬಿಜೆಪಿ ಜಿಲ್ಲಾ ಮಟ್ಟದ ಕೊನೆ ಸಭೆ

Updated on: 

ಕ.ಪ್ರ. ವಾರ್ತೆ ಬೆಂಗಳೂರು ಮಾ.29
ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಬಿಜೆಪಿ ಜಿಲ್ಲಾ ಮಟ್ಟದ ಪ್ರಮುಖರ ಅಂತಿಮ ಸಭೆ ಶನಿವಾರ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ನಡೆಯಲಿದೆ.
ಈಗಾಗಲೇ ದಕ್ಷಿಣ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲಾ ಪ್ರಮುಖರ ಸಭೆ ನಡೆದಿದ್ದು, ಈ ಭಾಗದಲ್ಲಿ ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮಗೊಂಡಿದೆ. ಇನ್ನು ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಜಿಲ್ಲೆಗಳ ಪ್ರಮುಖರ ಸಭೆ ಶನಿವಾರ ನಡೆಯಲಿದ್ದು, ಅಲ್ಲಿಗೆ ಅಭ್ಯರ್ಥಿಗಳ ಆಯ್ಕೆ ಕುರಿತ ಸಭೆಗಳು ಪೂರ್ಣಗೊಂಡಂತಾಗುತ್ತದೆ.
ಕೆಜೆಪಿ ಸೇರಿರುವ ಮತ್ತು ಸೇರಲಿರುವ ಸಚಿವರು, ಶಾಸಕರೆಲ್ಲರೂ ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕದವರಾಗಿದ್ದಾರೆ. ಸಿ.ಎಂ. ಉದಾಸಿ, ಮುರುಗೇಶ್ ನಿರಾಣಿ, ಸುನೀಲ್ ವಲ್ಯಾಪುರೆ, ನೆಹರೂ ಓಲೇಕಾರ್, ಹೊಳಲ್ಕೆರೆ ಚಂದ್ರಪ್ಪ ಸೇರಿದಂತೆ ಕೆಲವರು ಸ್ಪರ್ಧಿಸುತ್ತಿರುವುದರಿಂದ ಈ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಶನಿವಾರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಬಿಎಸ್‌ವೈ ವಿರುದ್ಧ ಅಭ್ಯರ್ಥಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಬಿಜೆಪಿಯಿಂದ ಶಾಂತವೀರಪ್ಪ ಅಥವಾ ಪದ್ಮನಾಭ ಭಟ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ ಯಡಿಯೂರಪ್ಪ ಅವರೊಂದಿಗೆ ಜಗಳವಾಡಿಕೊಂಡು ಪಕ್ಷ ತ್ಯಜಿಸಿದ್ದ ಶಾಂತವೀರಪ್ಪ ಅವರನ್ನು ಮರಳಿ ಕರೆಸುವ ಪ್ರಯತ್ನ ನಡೆಯುತ್ತಿದೆ. ಅವರು ಒಪ್ಪದಿದ್ದರೆ ಪದ್ಮನಾಭ ಭಟ್ ಅವರಿಗೆ ಅವಕಾಶ ನೀಡಲಾಗುವುದು ಎಂದು ಪಕ್ಷದ ಮೂಲಗಳು ಹೇಳಿವೆ. ಕರಾವಳಿ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದೆ. ಪುತ್ತೂರು ಕ್ಷೇತ್ರವನ್ನು ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೆ ಮೀಸಲಿಡಲಾಗಿದೆಯಾದರೂ ಒಪ್ಪಿಗೆ ಸೂಚಿಸದ ಕಾರಣ ಅಂತಿಮವಾಗಿಲ್ಲ. ಮಾಜಿ ಸಚಿವ ರೇಣುಕಾಚಾರ್ಯ ಕೆಜೆಪಿ ಸೇರುತ್ತಿರುವುದರಿಂದ ಹೊನ್ನಾಳಿ ಕ್ಷೇತ್ರಕ್ಕೆ ಗಿರೀಶ್ ಪಟೇಲ್ ಅಥವಾ ಹನುಮಂತಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುವುದು. ಅದೇ ರೀತಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿರುವುದರಿಂದ ಚನ್ನಪಟ್ಟಣ ಕ್ಷೇತ್ರದಿಂದ ರವಿಕುಮಾರ್ ಗೌಡ ಅವರನ್ನು ಕಣಕ್ಕಿಳಿಸುವ ಬಗ್ಗೆ ತೀರ್ಮಾನಿಸಲಾಗಿದೆ.
ಕಟ್ಟಾ ಟಿಕೆಟ್ ಇಲ್ಲ: ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಕಟ್ಟಾ ಅವರಿಗೆ ಟಿಕೆಟ್ ಇಲ್ಲದಿದ್ದರೆ ಕೃಷ್ಣದೇವರಾಯ ಅವರನ್ನು ಕಣಕ್ಕಿಳಿಸಲಾಗುವುದು. ಅದೇ ರೀತಿ ಕೆಜಿಎಫ್‌ನಲ್ಲಿ ವೈ. ಸಂಪಂಗಿ ಬದಲಾಗಿ ಬೆಂಗಳೂರಿನ ನಾಗರಾಜ್ ಅಥವಾ ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ. ದಿನಕರನ್ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಮಾಲೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಕೊರತೆ ಇರುವುದರಿಂದ ಮತ್ತು ಹಾಲಿ ಶಾಸಕ ಕೃಷ್ಣಯ್ಯ ಶೆಟ್ಟಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಬೆಂಗಳೂರಿನಲ್ಲಿ ಯಶವಂತಪುರ, ಬಿಟಿಎಂ ಲೇಔಟ್, ಚಿಕ್ಕಪೇಟೆ ಮತ್ತು ಪುಲಿಕೇಶಿನಗರ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಾಗಿದೆ. ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲಾ ಪ್ರಮುಖರೊಂದಿಗೆ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ ಬಳಿಕ ಈ ಪಟ್ಟಿಯ ಕುರಿತು ರಾಜ್ಯ ಚುನಾವಣಾ ಸಮಿತಿ ಸಭೆ ಮತ್ತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಆಯ್ಕೆಯಲ್ಲಿ ಅಸಮಾಧಾನ ಕಂಡುಬಂದರೆ ಸಮಾಧಾನಪಡಿಸುವ ಜವಾಬ್ದಾರಿಯನ್ನು ಆ ಕ್ಷೇತ್ರದ ಅಧಿಕೃತ ಅಭ್ಯರ್ಥಿಗೆ ವಹಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com