ಕೆಟ್ಟ ಬೋಗಿಗಳ ಗುಜರಿಗೆ ಹಾಕಿ

ರಾಜ್ಯ ಸಂಪುಟದ ಕೆಲ ಸಚಿವರು ಗುಜರಿಗೆ ಹಾಕುವುದಕ್ಕೆ ಅರ್ಹರು! ಹೀಗೆಂದು ಜರೆದದ್ದು ಪ್ರತಿಪಕ್ಷದ ಮುಖಂಡರಲ್ಲ, ಸ್ವತಃ ಆಡಳಿತಾರೂಢ ಕಾಂಗ್ರೆಸ್ ಶಾಸಕರು.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ

-ರಾಘವೇಂದ್ರ ಭಟ್
ಬೆಳಗಾವಿ:
ರಾಜ್ಯ ಸಂಪುಟದ ಕೆಲ ಸಚಿವರು ಗುಜರಿಗೆ ಹಾಕುವುದಕ್ಕೆ ಅರ್ಹರು!

ಹೀಗೆಂದು ಜರೆದದ್ದು ಪ್ರತಿಪಕ್ಷದ ಮುಖಂಡರಲ್ಲ, ಸ್ವತಃ ಆಡಳಿತಾರೂಢ ಕಾಂಗ್ರೆಸ್ ಶಾಸಕರು. ಸಂದರ್ಭ: ಕಾಂಗ್ರೆಸ್ ಶಾಸಕಾಂಗ ಸಭೆ. ಇಷ್ಟೇ ಅಲ್ಲ, ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಮತ್ತೆ ಶಾಸಕರು ಗುಡುಗಿದ್ದಾರೆ. ನಮ್ಮ ಸರ್ಕಾರದ ಎಂಜಿನ್ ಸರಿಯಾಗಿದೆ. ಆದರೆ ಕೆಲ ಬೋಗಿಗಳು ಕೆಟ್ಟುಹೋಗಿವೆ. ಎಂಜಿನ್ ವೇಗ ಕಡಿಮೆಯಾಗುವುದಕ್ಕೆ ಇದೇ ಕಾರಣ. ಹೀಗಾಗಿ ಕೆಲಸಕ್ಕೆ ಬಾರದ ಡಬ್ಬಾಗಳನ್ನು ಗುಜರಿಗೆ ಹಾಕಿ ಹೊಸ ಬೋಗಿಗಳನ್ನು ಅಳವಡಿಸಿ ಎಂದು ಆಗ್ರಹಿಸುವ ಮೂಲಕ ಪರೋಕ್ಷವಾಗಿ ಸಂಪುಟ ವಿಸ್ತರಣೆ ವಿಚಾರ ಪ್ರಸ್ತಾಪಿಸಿದ್ದಾರೆ.

ಇದೆಲ್ಲದಕ್ಕಿಂತ ಮುಖ್ಯವಾಗಿ ಶಿವರಾಜ್ ತಂಗಡಗಿ. ಎಸ್‌ಆರ್ ಪಾಟೀಲ್, ಅಂಬರೀಷ್ ಸೇರಿದಂತೆ ಹಲವು ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್ ಅವರು ತಂಗಡಗಿ ವಿರುದ್ಧ ನೇರ ಆರೋಪ ಮಾಡಿದರು. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಹಾಯಕ ಎಂಜಿನಿಯರ್ ವರ್ಗಾವಣೆ ವಿಚಾರದಲ್ಲಿ ಸಚಿವರು ಲಂಚ ಕೇಳಿದ್ದಾರೆ. ಅವರಿಗೆ ಕಾಂಗ್ರೆಸ್ ಸಂಸ್ಕೃತಿಯೇ ಗೊತ್ತಿಲ್ಲ. ಹಣದ ಸಂಸ್ಕೃತಿ ಮಾತ್ರ ಗೊತ್ತಿದೆ. ಇಂಥವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರ ಕರ್ನಾಟಕ ಭಾಗದ ಶಾಸಕರೂ ಧ್ವನಿಗೂಡಿಸಿದ್ದು, ನಮ್ಮ ಭಾಗದ ಶಾಸಕರೂ ಸಚಿವರೂ ಇದೇ ರೀತಿ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಯಾವುದೇ ಕೆಲಸ ಮಾಡುತ್ತಿಲ್ಲ. ಚುನಾವಣೆಯಲ್ಲಿ ನಮ್ಮ ವಿರುದ್ಧ ಕೆಲಸ ಮಾಡಿದವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಓಡಾಡುತ್ತಾರೆ. ಇದು ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಚಿವರು ಅಂತರ್ ಇಲಾಖೆಯ ಮಧ್ಯೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಿರಿಯ ಶಾಸಕರ ಬೇಡಿಕೆ ಮಾತ್ರವಲ್ಲ, ಮುಖ್ಯಮಂತ್ರಿ ಟಿಪ್ಪಣಿ ಮಾಡಿಕೊಟ್ಟರೂ ಅಧಿಕಾರಿಗಳು ನಮ್ಮ ಕೆಲಸ ಮಾಡದೇ ಇರುವುದಕ್ಕೆ ಸಚಿವರ ಈ ಒಪ್ಪಂದವೇ ಕಾರಣ. ಸಿಎಂ ಸಿದ್ದರಾಮಯ್ಯನವರು ತಕ್ಷಣ ಮಧ್ಯಪ್ರವೇಶ ಮಾಡದೇ ಇದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ಎಲ್ಲದರ ಹಿನ್ನಲೆಯಲ್ಲಿ ಮುಂದಿನ ಬುಧವಾರ ಮತ್ತೆ ಶಾಸಕಾಂಗ ಪಕ್ಷದ ಸಭೆ ಕರೆಯಲು ನಿರ್ಧರಿಸಲಾಗಿದೆ.

ಸರ್ಕಾರ ಒಂದು ವರ್ಗಕ್ಕೆ ಸೀಮಿತವಾ?
ಶಾಸಕ ಶಿವಾನಂದ ಪಾಟೀಲ್ ಅವರೂ ಸಚಿವರ ವರ್ತನೆ ಬಗ್ಗೆ ಕಿಡಿಕಾರಿ, ಬೇಕಾದರೆ ಪ್ರತಿಯೊಬ್ಬ ಸಚಿವರ ವರ್ತನೆ ಮತ್ತು ಹಿನ್ನೆಲೆಯನ್ನು ನಾವು ಬಿಡಿಸಿಬಿಡುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನ ಬಂದಿದೆ. ಆದರೆ ಸರ್ಕಾರ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಭಾವನೆ ಬರುತ್ತಿದೆ. ಹೀಗಾಗಿ ಸಚಿವರನ್ನು ಹೊರಗಿಟ್ಟು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿಪರಮೇಶ್ವರ ಪ್ರತ್ಯೇಕ ಸಭೆ ಕರೆಯಬೇಕು. ಆ ಸಂದರ್ಭದಲ್ಲಿ ಎಲ್ಲ ವಿಚಾರಗಳ ಬಗ್ಗೆ ಮುಕ್ತ ಚರ್ಚೆ ಮಾಡೋಣ ಎಂದು ಆಗ್ರಹಿಸಿದರು ಎನ್ನಲಾಗಿದೆ.

ಕಣ್ಣೀರಿಟ್ಟಳಾ ಶಕುಂತಲಾ
ಸಭೆಯಲ್ಲಿ ಶಾಸಕ ಶಕುಂತಲಾ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡುವುದಕ್ಕೂ ಜಿಲ್ಲಾ ಉಸ್ತುವಾರಿ ಸಚಿವರು ಅವಕಾಶ ನೀಡುತ್ತಿಲ್ಲ. 4 ಬಾರಿ ಮಾಡಿದ್ದ ನೇಮಕವನ್ನು ರದ್ದುಗೊಳಿಸಿದ್ದಾರೆ ಎಂದು ಗೋಳು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com