
ಬೆಳಗಾವಿ: ಸಚಿವರು ಮತ್ತು ಆಡಳಿತಾರೂಢ ಶಾಸಕರ ನಡುವಿನ ಅಸಮಾಧಾನ ಬೆಳಗಾವಿಯಲ್ಲಿ ಮತ್ತೆ ಹೊತ್ತಿ ಉರಿದಿದೆ.
ಶಾಸಕಾಂಗ ಪಕ್ಷದ ಸಭೆಯಿಂದ ಸಚಿವರನ್ನು ಹೊರಗಿಡಿ, ಅವರ ವಿರುದ್ಧ ದೂರು ನೀಡಬೇಕು ಎಂಬ ಶಾಸಕರ ಆಕ್ರೋಶ ಭರಿತ ಬೇಡಿಕೆಯಿಂದ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಬ್ಬಿಬ್ಬಾದ ಘಟನೆ ಕೂಡ ನಡೆಯಿತು. ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ಸಚಿವರು ಮತ್ತು ಸ್ವಪಕ್ಷೀಯ ಶಾಸಕರ ನಡುವಿನ ಅಸಮಾಧಾನ ಹೊಗೆಯಾಡುತ್ತಲೇ ಇತ್ತು. ಇದಕ್ಕೆ ಬೆಂಕಿ ರೂಪ ಸಿಕ್ಕಿದ್ದು ಬುಧವಾರದ ಶಾಸಕಾಂಗ ಸಭೆ.
ಕ್ಷೇತ್ರಗಳಲ್ಲಿ ಉಸ್ತುವಾರಿ ಸಚಿವರ ಹಸ್ತಕ್ಷೇಪಗಳು, ಕಾರ್ಯವೈಖರಿಯಲ್ಲಿನ ಲೋಪ, ಬೇಡಿಕೆಗಳಿಗೆ ಸಿಗದ ಬೆಲೆಯಂಥ ಸಮಸ್ಯೆಗಳನ್ನು ಮುಂದಿಟ್ಟುಕೊಂಡ ಶಾಸಕರು, ಸಚಿವರನ್ನು ಹೊರಗೆ ಕಳುಹಿಸಿ ಎಂದು ಪಟಚ್ಟು ಹಿಡಿದರು. ಅವರು ಹೊರಹೋದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ತಮ್ಮ ಸಮಸ್ಯೆ ಆಲಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಆದರೆ ಶಾಸಕರ ಬೇಡಿಕೆಗೆ ಓಗೋಡದ ಸಿಎಂ ಸಿದ್ದರಾಮಯ್ಯ, ಇನ್ನು ಮುಂದೆ ನಿಮ್ಮ ಸಮಸ್ಯೆಗಳಿಗೆ ನಾನೇ ಒಂದು ಗಂಟೆ ಮೀಸಲಿಡುತ್ತೇನೆ ಎಂದು ಹೇಳಿದ ಮೇಲೆ ಅಸಮಾಧಾನದ ಉರಿ ತಣ್ಣಗಾಯ್ತು.
ನಗೆಪಾಟಲಿನ ಕ್ರಮ
ಸಚಿವರನ್ನು ಹೊರಗಿಟ್ಟು ಶಾಸಕಾಂಗ ಪಕ್ಷದ ಸಭೆ ನಡೆಸುವುದು ಸರಿಯಲ್ಲ. ಇದರಿಂದ ಪಕ್ಷ ತೀವ್ರ ಮುಜುಗರಕ್ಕೆ ಈಡಾಗಬೇಕಾಗುತ್ತದೆ ಎಂಬುದು ಮುಖ್ಯಮಂತ್ರಿ ಅವರ ಅಳಲು. ಹೀಗಾಗಿ ಶಾಸಕರ ಮನವೊಲಿಕೆ ಮಾಡಿದ ಅವರು, ಸಚಿವರ ಕಾರ್ಯವೈಖರಿಯಲ್ಲಿ ಲೋಪವಿದ್ದರೂ ಅವರನ್ನು ಸಭೆಯಿಂದ ಹೊರಗಿಡಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಅವರೂ ಶಾಸಕಾಂಗ ಪಕ್ಷದ ಸದಸ್ಯರೇ. ಇಂಥ ಬೇಡಿಕೆಗಳನ್ನು ಇಡಬಾರದು ಎಂದರು. ಇನ್ನು ಮುಂದೆ ಬೆ.10ರಿಂದ 11 ಗಂಟೆವರೆಗೆ ನನ್ನನ್ನು ಭೇಟಿ ಮಾಡಿ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬೆಂಬಲಿಗರ ತಂಡವನ್ನು ಕರೆತರಬೇಡಿ ಎಂದೂ ಮನವಿ ಮಾಡಿಕೊಂಡರು ಎಂದು ಹೇಳಲಾಗಿದೆ.
ಮುಜುಗರ ತರಬೇಡಿ
ಸಭೆ ಆರಂಭವಾಗುತ್ತಿದ್ದಂತೆ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಕಳೆದ ಸಭೆಯಲ್ಲಿ ಸಚಿವರ ವಿರುದ್ಧ ವ್ಯಕ್ತಪಡಿಸಿದ ಅಭಿಪ್ರಾಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರವಾಗಿದೆ. ಹೀಗಾಗಿ ಸಚಿವರ ವಿರುದ್ಧ ಮಾತನಾಡಬೇಡಿ. ಏನೇ ಇದ್ದರೂ ಮುಖ್ಯಮಂತ್ರಿಯವರನ್ನು ಖಾಸಗಿಯಾಗಿ ಭೇಟಿ ಮಾಡಿ ಮನವಿ ನೀಡಿ ಎಂದರು.
Advertisement