ವಿ'ಭಜನೆ' ಪರಿಹಾರವಲ್ಲ

ಅಸಮತೋಲನ ನಿವಾರಣೆಗೆ ಮುಖ್ಯಮಂತ್ರಿ ಕ್ರಮ, ನಂಜುಡಪ್ಪ ವರದಿ ಅನುಷ್ಠಾನ ಅವಧಿ ವಿಸ್ತರಣೆ, ಹೈ-ಕ ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆಗೆ ಚಾಲನೆ, ಜೂನ್ ಅಂತ್ಯದೊಳಗೆ 30000 ನೇಮಕ
ಬೆಳಗಾವಿ ಕಲಾಪದಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ ಕಲಾಪದಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಅಸಮತೋಲನ ನಿವಾರಣೆಗೆ ಮುಖ್ಯಮಂತ್ರಿ ಕ್ರಮ, ನಂಜುಡಪ್ಪ ವರದಿ ಅನುಷ್ಠಾನ ಅವಧಿ ವಿಸ್ತರಣೆ
ಹೈ-ಕ ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆಗೆ ಚಾಲನೆ, ಜೂನ್ ಅಂತ್ಯದೊಳಗೆ 30000 ನೇಮಕ
-ರಾಘವೇಂದ್ರ ಭಟ್
ಬೆಳಗಾವಿ:
ಅಸಮಾನತೆ ನಿವಾರಣೆಗೆ ರಾಜ್ಯ ವಿಭಜನೆ ಪರಿಹಾರವಲ್ಲ ಎಂದು ಬಲವಾಗಿ ಪ್ರತಿಪಾದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ.ಡಿಎಂ ನಂಜುಡಪ್ಪ ವರದಿ ಅನುಷ್ಠಾನದ ಅವಧಿ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.

ಉತ್ತರ ಕರ್ನಾಟಕ ಅಭಿವೃದ್ಧಿಗೆ ನಿಯಮ 69ರ ಅನ್ವಯ ನಡೆದ ಚರ್ಚೆಗೆ ಉತ್ತರ ನೀಡಿದ ಅವರು ವಿಧಾನಸಭೆಯಲ್ಲಿ ಈ ವಿಷಯ ಪ್ರಕಟಿಸಿರುವ ಜತೆಗೆ ಹೈ-ಕ ಭಾಗದಲ್ಲಿ ಖಾಲಿ ಇರುವ 30 ಸಾವಿರ ಸರ್ಕಾರಿ ಹುದ್ದೆಗಳನ್ನು ಜೂನ್ ಅಂತ್ಯದೊಳಗೆ ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ. ಈ ಎರಡು ಅಂಶಗಳನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ, ಸದನಕ್ಕೆ ನೀಡಿದ ಉತ್ತರ ಹಳೆ ಲೆಕ್ಕಾಚಾರ ಮತ್ತು ಅಂಕಿ-ಸಂಖ್ಯೆಗಳ ಮೇಲಾಟವಾಗಿ ಪರಿವರ್ತಿತವಾಗಿದ್ದು, ನಿರರ್ಗಳ ಮೂರು ಗಂಟೆ ಮಾತನಾಡಿದ್ದಷ್ಟೇ ಹೆಚ್ಚುಗಾರಿಕೆ.

ಮೌಲ್ಯಮಾಪನ
2000ನೇ ಇಸವಿಯಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾದ ನಂಜುಡಪ್ಪ ವರದಿಯಲ್ಲಿ ಉಲ್ಲೇಖವಾದಂತೆ ಉತ್ತರಕರ್ನಾಟಕ ಭಾಗದಲ್ಲಿ 26 ಹಾಗೂ ದಕ್ಷಿಣ ಕರ್ನಾಟಕದಲ್ಲಿ 13 ಅತ್ಯಂತ ಹಿಂದುಳಿದ ತಾಲೂಕುಗಳಿವೆ. 2003 ರಿಂದ 2011ರ ಅವಧಿಯಲ್ಲಿ ವರದಿ ಜಾರಿ ಮಾಡುವಂತೆ ಶಿಫಾರಸ್ಸು ಮಾಡಲಾಗಿತ್ತು. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 31 ಸಾವಿರ ಕೋಟಿ ವಿನಿಯೋಗ ಮಾಡುವಂತೆ ಶಿಫಾರಸು ಮಾಡಿದ್ದ ಸಮಿತಿಗೆ ಈ ಪೈಕಿ 15 ಸಾವಿರ ಕೋಟಿ ತಕ್ಷಣ ಬಿಡುಗಡೆ ಮಾಡಬೇಕು.

ಉಳಿದ ಹಣವನ್ನು ವಾರ್ಷಿಕ 2 ಸಾವಿರ ಕೋಟಿಯಂತೆ ಎಂಟು ವರ್ಷಗಳ ವರೆಗೆ ನೀಡುವಂತೆ ಹೇಳವಾಗಿತ್ತು. ವರದಿ ಜಾರಿ ತಡವಾಗಿ ಆರಂಭವಾಗಿದ್ದು, 2014-15ಕ್ಕೆ ಮುಕ್ತಾಯವಾಗುತ್ತದೆ. 2013-14ರಲ್ಲಿ 17, 871 ಕೋಟಿ ಹಂಚಿಕೆಯಾಗಿದ್ದು, 14, 194 ಕೋಟಿ ಬಿಡುಗಡೆಯಾಗಿದೆ. 13, 565 ಕೋಟಿ ಖರ್ಚಾಗಿದೆಯಾದರೂ ಗುರಿ ತಲುಪಿಲ್ಲ ಎಂದರು. ಈ ಹಿನ್ನಲೆಯಲ್ಲಿ ನಂಜುಡಪ್ಪ ವರದಿ ಅನುಷ್ಠಾನ ಅವಧಿ ವಿಸ್ತರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಧಾರವಾಡದ ಸೆಂಟರ್ ಫಾರ್ ಮಲ್ಟಿ ಡಿಸಿಪ್ಲಿನರಿ ರಿಸರ್ಚ್ ಸಂಸ್ಥೆಗೆ ಇಲ್ಲಿಯವರೆಗಿನ ಸಾಧನೆಯ ಮೌಲ್ಯಮಾಪನ ನಡೆಸುವಂತೆ ಸೂಚನೆ ನೀಡಲಾಗಿದೆ.

ಈ ವರದಿ ಆಧರಿಸಿ ಎಷ್ಟು ವರ್ಷದವರೆಗೆ ಅವಧಿ ವಿಸ್ತರಣೆ ಮಾಡಬೇಕೆಂಬುದನ್ನು ನಿರ್ಧರಿಸಲಾಗುವುದು. ಜತೆಗೆ ಇದರ ನಿರ್ವಹಣೆಗೆ ಅಭಿವೃದ್ಧಿ ಆಯುಕ್ತರ ಅಧ್ಯತೆಯಲ್ಲಿ ಮತ್ತೊಂದು ಸಮಿತಿ ರಚಿಸಲಾಗುವುದು ಎಂದು ವಿವರಿಸಿದರು. ಜಿಲ್ಲಾವಾರು ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ತಯಾರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 2267 ಕೋಟಿ ಹಂಚಿಕೆ ಮಾಡಲಾಗಿದ್ದು, 756 ಕೋಟಿ ಬಿಡುಗಡೆ ಮಾಡಲಾಗಿದೆ. 718 ಕೋಟಿ ಖರ್ಚು ಮಾಡಲಾಗಿದೆ ಎಂದರು.

ಯಾರೇ ಅಧಿಕಾರಕ್ಕೆ ಬಂದರೂ ಪ್ರಾದೇಶಿಕ ಅಸಮತೋಲನ ಪರಿಹಾರ ಉದ್ದೇಶ ಹೊಂದಿರುತ್ತಾರೆ. ಇದಕ್ಕಾಗಿ ಕಾಲ ಕಾಲಕ್ಕೆ ಸಾಕಷ್ಟು ಪ್ರಯತ್ನಗಳಾಗಿವೆ. ಅಸಮತೋಲನ ನಿವಾರಣೆಗೆ ಪ್ರತ್ಯೇಕ ರಾಜ್ಯ ಬೇಕೆಂಬ ಬೇಡಿಕೆ ಪರಿಹಾರವಲ್ಲ. ಕರ್ನಾಟಕದ ಏಕೀಕರಣಕ್ಕಾಗಿ ಜೀವ ತೊರೆದ ಮಹನೀಯರನ್ನು ಸ್ಮರಿಸಿ ಇಂತಹ ಬೇಡಿಕೆ ಕೈ ಬಿಡಬೇಕು. ಎಂಥದೇ ಸಂದರ್ಭ ಬಂದರೂ ಕರ್ನಾಟಕ ಅಖಂಡವಾಗಿ ಉಳಿಯುತ್ತದೆ. ಉತ್ತರ ದಕ್ಷಿಣ ಎಂಬ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನಾವೆಲ್ಲರೂ ಕನ್ನಡಿಗರು. ಕನ್ನಡನಾಡಿನ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ.
-ಸಿದ್ದರಾಮಯ್ಯ, ಮುಖ್ಯಮಂತ್ರಿ.

ಮುಖ್ಯಮಂತ್ರಿ ನೀಡಿದ ಪ್ರಮುಖ ಭರವಸೆಗಳು
165 ನೀರಾವರಿ ಯೋಜನೆಗಳ ಪೈಕಿ 102 ಕರ್ನಾಟಕದಲ್ಲಿ ಉತ್ತರ ಕರ್ನಾಟಕದಲ್ಲಿ ಜಾರಿ. 32, 232 ಕೋಟಿ ವಿನಿಯೋಗ. 1, 18460 ಹೆಕ್ಟೇರ್‌ಗೆ ನೀರಾವರಿ.
2011ರ ಗಣತಿ ಪ್ರಕಾರ ರಾಜ್ಯದ ಸಾಕ್ಷರತೆ ಪ್ರಮಾಣ ಶೇ.75.36 ಆದರೆ ಉತ್ತರ ಕರ್ನಾಟಕದಲ್ಲಿ ಶೇ.69.86 ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಶೇ.64.45 ಈ ಭಾಗದ ಶೈಕ್ಷಣಿಕ ಸುಧಾರಣೆಗೆ ಆದ್ಯತೆ.
ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಕಸ್ತೂರಬಾ ಗಾಂಧಿ ವಸತಿ ಶಾಲೆ ನಿರ್ಮಾಣ
ಹೈ-ಕದಲ್ಲಿ ಅಪೌಷ್ಟಿಕತೆಯಿಂದ ಶಿಶುಮರಣ ತಪ್ಪಿಸಲು ಕ್ರಮ
ಕೆಪಿಎಸ್‌ಗೆ ಅಧ್ಯಕ್ಷರು, ಸದಸ್ಯರ ನೇಮಕದಲ್ಲಿ ಉ.ಕರ್ನಾಟಕಕ್ಕೆ ಆದ್ಯತೆ.
ರಾಜ್ಯೋತ್ಸವ ಪ್ರಶಸ್ತಿಗೆ ಉತ್ತರ ಕರ್ನಾಟಕ ಭಾಗದ ಗಣ್ಯರ ಗಣನೆಗೆ.
ಹೊಸ ಕೈಗಾರಿಕಾ ನೀತಿ ಅನ್ವಯ 51 ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರದೇಶ
ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣ
2017-18ರ ಅಂತ್ಯದೊಳಗೆ ರಾಜ್ಯ ಬಯಲು ಬಹಿರ್ದೆಸೆ ಮುಕ್ತ
ಬೆಂಬಲ ಬೆಲೆಯಲ್ಲಿ ಅಗತ್ಯ ವಸ್ತು ಖರೀದಿಗೆ ಕೇಂದ್ರದ ಮೇಲೆ ಒತ್ತಡ

ನೇಮಕಕ್ಕೆ ಸಾವಿರ ಕೋಟಿ
2014-15ನೇ ಸಾಲಿನಲ್ಲಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ 1000 ಕೋಟಿ ಬಿಡುಗಡೆ ಮಾಡಲು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ. ಆದರೆ ಸಕಾಲದಲ್ಲಿ ಹಣ ಖರ್ಚು ಮಾಡುವುದಕ್ಕೆ ಈ ಭಾಗದಲ್ಲಿ ಅಧಿಕಾರಿಗಳ ಕೊರತೆ ಇದೆ. ಈ ಭಾಗಕ್ಕೆ 1.11 ಲಕ್ಷ ಸರ್ಕಾರಿ ನೌಕರರನ್ನು ನಿಯೋಜಿಸಲಾಗಿದ್ದು, 81 ಸಾವಿರ ಹುದ್ಧೆ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಡಿಸೆಂಬರ್ ಅಂತ್ಯದೊಳಗೆ ಖಾಲಿ ಇರುವ ಹುದ್ದೆಗಳನ್ನು ಘೋಷಿಸಿ, ಜೂನ್ ಅಂತ್ಯದೊಳಗೆ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com