
ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.24: ಚೀನಾ ನಂತರ ಇದೀಗ ಅಮೆರಿಕ ಪ್ರವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ.
ಐಟಿ-ಬಿಟಿ ಕ್ಷೇತ್ರಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸುವುದಕ್ಕಾಗಿ ಐಟಿ ಸಚಿವ ಡಾ.ಎಸ್.ಆರ್. ಪಾಟೀಲ್ ಮತ್ತು ಅಧಿಕಾರಿಗಳ ತಂಡದೊಂದಿಗೆ ಶೀಗ್ರದಲ್ಲಿಯೇ ಅಮೆರಿಕ ವಾಣಿಜ್ಯ ಪ್ರವಾಸಕ್ಕೆ ತೆರಳಲಿದ್ದಾರೆ. ಐಟಿ-ಬಿಟಿ ಸಚಿವ ಡಾ.ಎಸ್.ಆರ್ ಪಾಟೀಲ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಪ್ರವಾಸಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಸದ್ಯದಲ್ಲೇ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು ಹೊರತುಪಡಿಸಿ ಎರಡು ಮತ್ತು ಮೂರನೇ ಹಂತದ ನಗರದಲ್ಲಿ ಐಟಿ ಉದ್ಯಮವನ್ನು ಬೆಳೆಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಹೊಸ ಕೈಗಾರಿಕಾ ನೀತಿಯಲ್ಲಿ ಹೇರಳ ಸೌಲಭ್ಯಗಳನ್ನು ಪ್ರಕಟಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ಬೇರೆ ನಗರದಲ್ಲಿ ಕೈಗಾರಿಕೆ ಆರಂಭಿಸುವವರಿಗೆ 30 ವರ್ಷ ಉಚಿತವಾಗಿ ಭೂಮಿಯನ್ನು ಲೀಸ್ ನೀಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳನ್ನು ಸೆಳೆಯಲು ಸರ್ಕಾರ ನಿರ್ಧರಿಸಿದೆ. ಸಿಲಿಕಾನ್ ವ್ಯಾಲಿಗೆ ಸರಿಸಮವಾಗಿ ರಾಜ್ಯದ ಐಟಿ ಕ್ಷೇತ್ರವನ್ನು ಬೆಳೆಸುವುದು ಸರ್ಕಾರದ ಉದ್ದೇಶವೆಂದರು. 2020ರ ವೇಳೆಗೆ ಐಟಿ ಕ್ಷೇತ್ರದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 40 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ. ನಾವು ಅಧಿಕಾರಕ್ಕೆ ಬಂದಾಗ 7 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿದ್ದೆವು. ಆದರೆ ಸಾಧನೆ ಇನ್ನೂ ಹೆಚ್ಚಲಿದೆ ಎಂದು ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ ಬೆಂಗಳೂರಿನ ಕೆಂಗೇರಿಯಲ್ಲಿರುವ ಎಸ್‌ಜೆಬಿ ತಾಂತ್ರಿಕ ಮಹಾವಿದ್ಯಾಲಯ, ಬಿಜಿಎಸ್ ಹೆಲ್ತ್ ಮತ್ತು ಎಜುಕೇಷನ್ ಕೇಂದ್ರದಲ್ಲಿ ಡಿ.27ರಿಂದ 31ರವರೆಗೆ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಆಯೋಜಿಸಲಾಗಿದೆ. ದೇಶದ 36 ರಾಜ್ಯ ಮತ್ತು ಕೇಂದ್ರೀಯ ವಿದ್ಯಾಲಯದ 850 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
Advertisement