
ಬೆಂಗಳೂರು: ನರ್ಮ್ ಯೋಜನೆಯಲ್ಲಿ ರಾಜ್ಯ ಸರ್ಕಾರ ಕಳುಹಿಸಿದ್ದ ರು.7000 ಕೋಟಿ ಮೊತ್ತದ ಪ್ರಸ್ತಾವನೆ ವಾಪಸ್ ಕಳುಹಿಸಿದ್ದ ಕೇಂದ್ರ ಸರ್ಕಾರ ಇದೀಗ ನರೇಗಾದಲ್ಲೂ ರಾಜ್ಯಕ್ಕೆ ಕೊಡಬೇಕಾದ ಪಾಲಿಗೆ ಕತ್ತರಿ ಹಾಕಲು ನಿರ್ಧರಿಸಿದೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ರಾಜ್ಯಕ್ಕೆ ಬಿಡುಗಡೆಯಾಗಬೇಕಿದ್ದ ಬರೋಬ್ಬರಿ ರು.12000 ಕೋಟಿ ಅನುದಾನಕ್ಕೆ ಕತ್ತರಿ ಹಾಕುವ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದ್ದು, ರಾಜ್ಯ ಸರ್ಕಾರವನ್ನು ಆತಂಕದ ಮಡುವಿಗೆ ದೂಡಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಸಚಿವ ಎಚ್.ಕೆ ಪಾಟೀಲ್ ಅವರೇ ಪತ್ರಿಕಾಗೋಷ್ಠಿಯಲ್ಲಿ ಈ ಆತಂಕ ವ್ಯಕ್ತಪಡಿಸಿದ್ದು, ಜ.3 ಅಥವಾ 4 ರಂದು ದೆಹಲಿಗೆ ಭೇಟಿ ನೀಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕಾರ್ಯಕ್ರಮಗಳಿಗೆ ತೊಂದರೆ
ಕೇಂದ್ರ ಸರ್ಕಾರದ ಈ ನೀತಿಯಿಂದ ಉದ್ಯೋಗ ಖಾತ್ರಿಯ ಅನೇಕ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತದೆ. ಗ್ರಾಮೀಣಾಭಿವೃದ್ಧಿ ಕುಂಠಿತಗೊಳ್ಳುವುದರ ಜತೆಗೆ ನಮ್ಮ ಹೊಲ- ನಮ್ಮ ರಸ್ತೆ , ಕೆರೆ ಸಂರಕ್ಷಣೆಗೆ ಧಕ್ಕೆಯಾಗುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಅವರು ಈಗಾಗಲೇ ಈ ಸಂಬಂಧ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದ ನಿಯೋಗ ಸದ್ಯದಲ್ಲೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅನುದಾನ ಕಡಿತ ಮಾಡದಂತೆ ಮನವಿ ಸಲ್ಲಿಸಲಿದೆ ಎಂದರು.
ಅನುದಾನ ಕಡಿತ ಸಂದರ್ಭದಲ್ಲಿ ಕರ್ನಾಟಕವನ್ನು ಮಾತ್ರ ಗುರಿಯಾಗಿರಿಸಿಕೊಳ್ಳಲಾಗಿದೆಯೆ? ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಅವರು, ಆಂಧ್ರ ಪ್ರದೇಶಕ್ಕೆ ಈ ಸೂತ್ರ ಅನ್ವಯವಾಗಿಲ್ಲ. ರು. 42,000 ಕೋಟಿಯನ್ನು ಒಂದೇ ಕಂತಿನಲ್ಲಿ ಆಂಧ್ರಕ್ಕೆ ಬಿಡುಗಡೆ ಮಾಡಲಾಗಿದೆ. ನರೇಗಾದಲ್ಲಿ ರಾಜ್ಯದ ಸಾಧನೆಯನ್ನು ಕೇಂದ್ರ ಮೆಚ್ಚಿದ್ದರೂ ಏಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಅರ್ಥವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
10 ಲಕ್ಷ ಶೌಚಾಲಯ
ರಾಜ್ಯದಲ್ಲಿ ಈ ವರ್ಷ 10 ಲಕ್ಷ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಈಗಾಗಲೇ 5.10 ಲಕ್ಷ ಶೌಚಾಲಯ ನಿರ್ಮಾಣವಾಗಿದ್ದು, ರಾಮನಗರದಲ್ಲಿ ಶೇ. 175, ರಾಮನಗರ ಶೇ. 104 , ಬೆಳಗಾವಿ ಉತ್ತರಕನ್ನಡದಲ್ಲಿ ಶೇ.100ರಷ್ಟು ಸಾಧನೆಯಾಗಿದೆ ಎಂದರು. 2018ರ ವೇಳೆಗೆ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಬೇಕೆಂಬುದು ಸರ್ಕಾರದ ಸಂಕಲ್ಪ. ಜನವರಿ 26ರಂದು ರಾಜ್ಯದ 1000 ಗ್ರಾಮಗಳನ್ನು ಅಧಿಕೃತವಾಗಿ ಬಯಲು ಬಹಿರ್ದೆಸೆ ಮುಕ್ತಗೊಳಿಸಬೇಕೆಂಬುದು ಸರ್ಕಾರದ ಸಂಕಲ್ಪ. ಜನವರಿ ಬಹಿರ್ದೆಸೆ ಮುಕ್ತ ಗ್ರಾಮ ಎಂದು ಘೋಷಿಸಲಾಗುವುದು. ಜನವರಿ 25ರೊಳಗೆ ಇದಕ್ಕೆ ಅಗತ್ಯವಾದ ಆಡಿಟಿಂಗ್‌ನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಜವಾಬ್ದಾರಿ ನಿಗದಿ ಇಲ್ಲ
ಅಕ್ರಮ ಗಣಿಗಾರಿಕೆ ತನಿಖೆ ಹಿನ್ನೆಲೆಯಲ್ಲಿ ರಚನೆಗೊಂಡಿರುವ ಸಂಪುಟ ಉಪಸಮಿತಿಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿಲ್ಲ ಎಂಹುದು ಸತ್ಯ. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳದ ಮುಖ್ಯಸ್ಥರನ್ನು ಕರೆಸಿ ಚರ್ಚೆ ನಡೆಸಿದ್ದೇವೆ. ಆದರೆ ಈ ಸಮಿತಿಗೆ ಯಾವುದೇ ರೀತಿಯ ವರದಿ ನೀಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿಗದಿ ಮಾಡಿಲ್ಲ ಎಂದು ಹೇಳಿದರು.
ಸದ್ಯದಲ್ಲೇ ಸಭೆ
ಪಂಚಾಯತ್ ರಾಜ್ ವ್ಯವಸ್ಥೆ ಸುಧಾರಣೆ ಹಿನ್ನೆಲೆಯಲ್ಲಿ ಶಾಸಕ ರಮೇಶ್ ಕುಮಾರ್ ಮತ್ತು ನಂಜಯ್ಯನ ಮಠ್ ಸಮಿತಿ ವರದಿ ಬಗ್ಗೆ ಇಡಿ ದಿನ ಚರ್ಚೆ ನಡೆಸುವುದಕ್ಕೆ ದಿನಾಂಕ ನಿಗದಿ ಮಾಡುವಂತೆ ಬೆಳಗಾವಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬಗ್ಗೆ ಸದ್ಯದಲ್ಲೇ ಸಿಎಂ ಸಿದ್ಧರಾಮಯ್ಯ ಅವರ ಜತೆ ಚರ್ಚೆ ನಡೆಸಿ ದಿನಾಂಕ ನಿಗದಿ ಮಾಡಲಾಗುವುದು . ಪಂಚಾಯತ್ ಚುನಾವಣೆಯನ್ನು ಮುಂದೂಡುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
Advertisement