

ಮೈಸೂರು: ಪ್ರತಿಪಕ್ಷಗಳು, ಮಠಮಾನ್ಯಗಳಿಂದ ಮಾತ್ರವಲ್ಲದೇ ಸ್ವಪಕ್ಷೀಯರಿಂದಲೂ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ ತಿದ್ದುಪಡಿ ವಿಧೇಯಕ-2014 ಅನ್ನು ಜನವರಿ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಸ್ವತಃ ಈ ವಿಷಯ ತಿಳಿಸಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು , ಇದು ಮಠಗಳ ನಿಯಂತ್ರಣಕ್ಕೆ ತರುವ ವಿಧೇಯಕ ಎಂಬ ತಪ್ಪು ಕಲ್ಪನೆ ಉಂಟಾಗಿದೆ. ವಾಸ್ತವವಾಗಿ ಸರ್ಕಾರಕ್ಕೆ ಮಠಗಳನ್ನು ನಿಯಂತ್ರಿಸುವ ಉದ್ದೇಶವಿಲ್ಲ. 2007ರಲ್ಲಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ, ಬಿಎಸ್ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ -ಬಿಜೆಪಿ ಸಮ್ಮಿಶ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣ ಪತ್ರದ ಆಧಾರದ ಮೇಲೆ ಈ ವಿಧೇಯಕ ಸಿದ್ಧಪಡಿಸಲಾಗಿತ್ತು ಎಂದರು. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶ ನದಲ್ಲಿ ಈ ವಿಧೇಯಕ ಮಂಡನೆಯಾದ ನಂತರ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಸುದೀರ್ಘವಾಗಿ ಚರ್ಚಿಸಿ, ವಿಧೇಯಕವನ್ನು ವಾಪಸ್ ಪಡೆಯುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.