ಮುನಿರತ್ನ ಪ್ರಕರಣ : ಸಿಬಿಐ ತನಿಖೆಗೆ ಆಗ್ರಹ

ಶಾಸಕ ಮುನಿರತ್ನ ಅವರಿಗೆ ಸೇರಿದೆ ಎನ್ನಲಾದ ಕಚೇರಿ ಮೇಲೆ ನಡೆದ ಲೋಕಾಯುಕ್ತ ದಾಳಿ ಪ್ರಕರಣ ಮಂಗಳವಾರ...
ಬಿಬಿಎಂಪಿ ಸಭೆ
ಬಿಬಿಎಂಪಿ ಸಭೆ

ಬೆಂಗಳೂರು: ಶಾಸಕ ಮುನಿರತ್ನ ಅವರಿಗೆ ಸೇರಿದೆ ಎನ್ನಲಾದ ಕಚೇರಿ ಮೇಲೆ ನಡೆದ ಲೋಕಾಯುಕ್ತ  ದಾಳಿ ಪ್ರಕರಣ ಮಂಗಳವಾರ ಬಿಬಿಎಂಪಿ ಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು.
ಶಾಸಕರಿಗೆ ಸೇರಿದೆ ಎನ್ನಲಾದ ಕಟ್ಟಡದಲ್ಲಿ ಬಿಬಿಎಂಪಿಗೆ ಸೇರಿದ 1000ಕ್ಕೂ ಹೆಚ್ಚಿನ ಕಡತಗಳ  ವಿಲೇವಾರಿಯಾಗಿದೆ ಎಂದು ಶಂಕಿಸಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.

ಬಿಬಿಎಂಪಿ ಕಡತಗಳು ಶಾಸಕರ ಕಚೇರಿಯಲ್ಲಿ ವಿಲೇವಾರಿಯಾಗಿದ್ದು, ಇದರಲ್ಲಿ ಭಾರೀ ಅಕ್ರಮ ನಡೆದಿದೆ. ಆದ್ದರಿಂದ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಡಳಿತ ಪಕ್ಷ ಸದಸ್ಯರು ದಿನವಿಡೀ ಪ್ರತಿಭಟನೆ ನಡೆಸಿದರು. ಹಾಗೆಯೇ ಕಾಂಗ್ರೆಸ್ ಸದಸ್ಯರು ಯಾವುದೇ ಸಮರ್ಥನೆಗೆ ಮುಂದಾಗದೆ ಮೌನ ವಹಿಸಿದರು. ಪರಿಣಾಮ ಬಿಬಿಎಂಪಿ ಸಭೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸುವ  ನಿರ್ಣಯ ಅಂಗೀಕರಿಸಿತು.

ಸಭೆ ಆರಂಭದಿಂದ ಅಂತ್ಯದ ವರೆಗೂ ಆಡಳಿತ ಪಕ್ಷ ಬಿಜೆಪಿ ಸದಸ್ಯರಾದ ರವೀಂದ್ರ, ನಾಗರಾಜು, ನಂಜುಂಡಪ್ಪ, ಎ.ಎಚ್ ಬಸವರಾಜು, ಗಂಗಭೈರಯ್ಯ ಅವರು ಮುನಿರತ್ನ ವಿರುದ್ಧ ಕೂಗಾಡಿದರು. ಅದರಲ್ಲೂ ಬಿಜೆಪಿಯ ರವೀಂದ್ರ, ಲೋಕಾಯುಕ್ತ ದಾಳಿ ನಡೆದಿರುವುದು ಶಾಸಕ ಮುನಿರತ್ನ ಕಚೇರಿ ಮೇಲೆ ಎಂದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಇದನ್ನು ಸಿಬಿಐಗೆ ವಹಿಸಲೇಬೇಕು ಎಂದು ಆಗ್ರಹಿಸಿದರು. ನಂತರ ಶಾಸಕರನ್ನು ಬಂಧಿಸಬೇಕೆಂದು ಪ್ರತಿಭಟನೆಗಿಳಿದರು. ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇತು. ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು . ಬಿಜೆಪಿ ಸದಸ್ಯರ ಜತೆ ಕಾಂಗ್ರೆಸ್‌ನ ಸದಸ್ಯರೊಬ್ಬರು ದನಿಗೂಡಿಸಿದರು.

ನಂತರ ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಲು ಸಭೆ ತೀರ್ಮಾನಿಸಿತು. ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು. ಕಚೇರಿಯಲ್ಲಿದ್ದ ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು. ಕಟ್ಟಡದ ಮಾಲೀಕರ ವಿರುದ್ಧವೂ ಕ್ರಮಕ್ಕೆ  ಮುಂದಾಗಬೇಕೆಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.

ಇದಕ್ಕೂ ಮುನ್ನ ಶಾಸಕ ಮುನಿರತ್ನ ತಮ್ಮದೇನೂ ತಪ್ಪಿಲ್ಲ ಎಂದು ವಾದಿಸಲು ಮುಂದಾದರು. ಲೋಕಾಯುಕ್ತ ದಾಳಿಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿದರಲ್ಲದೆ, ಪ್ರಕರಣವನ್ನು ಸಿಬಿಐ  ತನಿಖೆಗೆ ಒಪ್ಪಿಸುವುದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ ಎಂದರು.  ಈ ಸಂದರ್ಭದಲ್ಲಿ ಭಾರೀ ಗದ್ದಲ ಉಂಟಾಗಿ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.

ದಿನವಿಡೀ ಪ್ರತಿಭಟನೆ: ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯ  ಎನ್. ಆರ್. ರಮೇಶ್ ವಿಷಯ ಪ್ರಸ್ತಾಪಿಸಿ, ಕಟ್ಟಡದಲ್ಲಿದ್ದ ಬಿಬಿಎಂಪಿ ಅಧಿಕಾರಿಗಳಾದ ಟೆಂಡನ್, ಶೈಲಜಾ ಹಾಗೂ ವಿಶ್ವಾಸ್ ಎಂಬುವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಮಂಜುನಾಥ್ ರೆಡ್ಡಿ ಹಾಗೂ ಮಾಡಿ ನಾಯಕ ಉದಯ ಶಂಕರ್, ಅಧಿಕಾರಿ ವಿರುದ್ಧ ಸಾಕಷ್ಟು ಕೇಸುಗಳಿವೆ.  ಆದರೂ ಏಕೆ ಅವರನ್ನು ಬಿಬಿಎಂಪಿಯಲ್ಲಿ ಇರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಉತ್ತರ ನೀಡಿದ ಆಯುಕ್ತ ಎಂ. ಲಕ್ಷ್ಮೀ ನಾರಾಯಣ್ ನಿಯಮದ ಪ್ರಕಾರ ಬಿಬಿಎಂಪಿ ಸಿಬ್ಬಂದಿ ಕಡತಗಳನ್ನು ಕಚೇರಿಯಲ್ಲೇ ವಿಲೇವಾರಿ ಮಾಡಬೇಕು. ತೀರಾ ಅಗತ್ಯವಿದ್ದರೆ ಆಯಕ್ತರು ಕಡತಗಳನ್ನು ಮನೆಗೆ ಕೊಂಡೊಯ್ಯುವುದುಂಟು. ಆದರೆ ಸದ್ಯ ಬಿಬಿಎಂಪಿ  ಸಿಬ್ಬಂದಿ ಖಾಸಗಿ ಕಟ್ಟಡದಲ್ಲಿ ಕಡತ ವಿಲೇವಾರಿ ಮಾಡಿದ್ದಾರೆ ಎಂದು ತಿಳಿದಿದೆ.  ಆದ್ದರಿಂದ  ಈ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದರು. ಆಗ ಬಿಜೆಪಿ ಎಲ್ಲಾ ಸದಸ್ಯರು ಈ ಪ್ರಕರಣದಲ್ಲಿ 100 ಕೋಟಿಗೂ ಹೆಚ್ಚು ಮೌಲ್ಯದ ಕಾಮಗಾರಿಗಳ ಕಡತ ವಿಲೇವಾರಿಯಾಗಿದೆ. ಆದ್ದರಿಂದ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದರು. ಸಭೆಯ ಅಂತ್ಯದಲ್ಲಿ ಇನ್ನುಮುಂದೆ ವಲಯ ಆಯುಕ್ತರ ಹುದ್ದೆಗಳಿಗೆ ಕೆಎಎಸ್  ಮತ್ತು ಐಎಎಸ್ ಅಧಿಕಾರಿಗಳನ್ನು ಮಾತ್ರ ನಿಯೋಜಿಸಬೇಕೆಂದು ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನೂ ಅಂಗೀಕರಿಸಲಾಯಿತು . ಆರಂಭದಲ್ಲಿ ಭಾರತ ರತ್ನ ಪಡೆದ ವಾಜಪೇಯಿ ಹಾಗೂ ಮಾಳವೀಯ ಅವರ ಗುಣಗಾನ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com