
ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಜೆಡಿಎಸ್ ಮುಖಂಡ ಅಬ್ದುಲ್ ಅಜೀಂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅವರು ಬುಧವಾರ ಸಂಜೆ ಪಕ್ಷಕ್ಕೆ ಸೇರಿದರು. ಅವರ ಜತೆಗೆ 20ಕ್ಕೂ ಅಧಿಕ ಮುಸ್ಲಿಂ ಮುಖಂಡರು ಸೇರಿದ್ದಾರೆ.
ಯಾವುದೇ ಷರತ್ತು ಇಲ್ಲದೇ ಪಕ್ಷದ ಸಿದ್ಧಾಂತಗಳನ್ನು ನಂಬಿ ಬಿಜೆಪಿಗೆ ಅಜೀಂ ಬಂದಿದ್ದಾರೆ. ಸೂಕ್ತ ಸಮಯದಲ್ಲಿ ಅವರಿಗೆ ಅರ್ಹ ಹುದ್ದೆಗಳನ್ನು ನೀಡಲಾಗುವುದು. ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಮುಸ್ಲಿಂ ಮುಖಂಡರು ಬಿಜೆಪಿಗೆ ಸೇರುತ್ತಿರುವುದು ಒಳ್ಳೆಯ ಸಂಗತಿ. ಪಕ್ಷದ ಮೇಲೆ ಅನವಶ್ಯಕವಾಗಿ ಗೂಬೆ ಕೂರಿಸುತ್ತಿರುವವರಿಗೆ ಸಂದೇಶ ಸಿಕ್ಕಂತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು. ಈ ವಾರದಲ್ಲಿಯೇ ಮತ್ತೊಬ್ಬ ಮಾಜಿ ಶಾಸಕ, ಜೆಡಿಎಸ್ ಮುಖಂಡ ಸುನೀಲ್ ಹೆಗಡೆ ಕೂಡ ಬಿಜೆಪಿಗೆ ಸೇರಲಿದ್ದಾರೆ ಎಂದು ಅವರು ತಿಳಿಸಿದರು.
ಮೋದಿ ಮುಸ್ಲಿಂ ವಿರೋಧಿಯಲ್ಲಿ: ನಾನು ಬಿಜೆಪಿ ಸೇರಲು ಪ್ರಧಾನಿ ನರೇಂದ್ರ ಮೋದಿಯೇ ಕಾರಣ. ಅವರ ಅಭಿವೃದ್ಧಿ ಪರ ನಿಲುವು ಹಾಗೂ ದೇಶದ ಬಗ್ಗೆ ಅವರಿಗಿರುವ ಕಾಳಜಿ ಮೆಚ್ಚಿ ಬಿಜೆಪಿಗೆ ಸೇರಿದ್ದೇನೆ ಎಂದು ಅಬ್ದುಲ್ ಅಜೀಂ ಹೇಳಿದ್ದಾರೆ.
ರಾಜಕೀಯ ಉದ್ದೇಶಗಳಿಗೆ ಕಾಂಗ್ರೆಸ್ ಮುಖಂಡರು ಮೋದಿಯನ್ನು ಮುಸ್ಲಿಂ ವಿರೋಧಿ ಎಂಬಂತೆ ಬಿಂಬಿಸಿದ್ದಾರೆ. ಅವರು ಮುಸ್ಲಿಂ ವಿರೋಧಿಯಲ್ಲ ಎನ್ನುವುದನ್ನು ಜನರು ತಿಳಿದುಕೊಳ್ಳಬೇಕಿದೆ. ದೇಶದ ಪ್ರತಿಯೊಬ್ಬ ನಾಗರಿಕರನ್ನು ಸಮಾನ ದೃಷ್ಟಿಯಿಂದ ನೋಡುತ್ತಾರೆ. ಆದರೆ, ಕಾಂಗ್ರೆಸ್ ಮುಖಂಡರು ಮುಸ್ಲಿಂರನ್ನು ಕೇವಲ ಓಲೈಕೆಗೆ ಒಳಸಿಕೊಂಡಿದ್ದಾರೆ. ಅವರ ಏಳಿಗೆಗೆ ಯಾವುದೇ ಕೆಲಸ ಮಾಡಿಲ್ಲ. ಮುಸ್ಲಿಂರು ಇದನ್ನು ಮನಗಾಣಬೇಕು ಎಂದು ಹೇಳಿದರು.
ನಮ್ಮ ಸಂವಿಧಾನದಲ್ಲಿ ಕೋಮುವಾದಿ ಅಥವಾ ಜಾತ್ಯತೀತ ಎಂಬ ವಿಭಾಗವೇ ಇಲ್ಲ. ಶಾಶ್ವತವಾಗಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮುಖಂಡರು ಕೋಮುವಾದಿ ಎಂದು ಬಿಜೆಪಿಗೆ ಹಣೆಪಟ್ಟಿ ಕಟ್ಟಿದ್ದಾರೆ. ಬಿಜೆಪಿ ಎಂದಿಗೂ ಕೋಮುವಾದಿ ಅಲ್ಲ ಎಂದರು.
Advertisement