ಆಚಾರವಿಲ್ಲದ ನಾಲಗೆ: ಈಶ್ವರಪ್ಪ ಹೇಳಿಕೆಗೆ ಸಿಎಂ ಸಿದ್ದು ತಿರುಗೇಟು

ಅತ್ಯಾಚಾರ ಪ್ರಕರಣ ಕುರಿತಂತೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಗಳು ಇದೀಗ ವಿವಾದಕ್ಕೆ ಕಾರಣವಾಗಿದ್ದು..
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ-ಸಂಗ್ರಹ ಚಿತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ-ಸಂಗ್ರಹ ಚಿತ್ರ

ಬೆಂಗಳೂರು: ಅತ್ಯಾಚಾರ ಪ್ರಕರಣ ಕುರಿತಂತೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಗಳು ಇದೀಗ ವಿವಾದಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಮಕ್ಕಳ ಮೇಲೆ ಅತ್ಯಾಚಾರವಾಗಿದ್ದರೆ ಅವರಿಗೆ ಸಂದರ್ಭದ ಗಂಭೀರತೆ ಅರಿವಾಗುತ್ತದೆಯೇನೋ..? ಎಂದು ಖಾರವಾಗಿ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ವಿರೋಧ ವ್ಯಕ್ತವಾಗುತ್ತಿದ್ದು, ಈಶ್ವರಪ್ಪ ಅವರ ಬೆಂಗಳೂರಿನ ನಿವಾಸದೆದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನು ಈಶ್ವರಪ್ಪ ಅವರ ಹೇಳಿಕೆ ಕುರಿತಂತೆ ನವದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಶ್ವರಪ್ಪ ಅವರು ಮೇಲ್ಮನೆಯ ಪ್ರತಿಪಕ್ಷ ನಾಯಕರಾಗಿದ್ದಂತಹವರು. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡಬಾರದು. ಇದು ಅವರ ಆಚಾರ ಮತ್ತು ಸಂಸ್ಕೃತಿಯನ್ನು ತೋರಿಸುತ್ತದೆ. ಈಶ್ವರಪ್ಪ ಅವರ ಹೇಳಿಕೆಯಿಂದ ನನಗೇನೂ ಅಚ್ಚರಿಯಾಗಿಲ್ಲ. ಅವರು ಇರುವುದೇ ಹಾಗೇ. ಅವರ ಮಾತುಗಳೇ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಇತ್ತ ತಮ್ಮ ಹೇಳಿಕೆ ಕುರಿತಂತೆ ವ್ಯಕ್ತವಾಗುತ್ತಿರುವ ಪ್ರತಿಭಟನೆ ವಿಚಾರ ತಿಳಿದ ಈಶ್ವರಪ್ಪ ಅವರು ಕೂಡಲೇ ತಮ್ಮ ಹೇಳಿಕೆಗೆ ಕುರಿತಂತೆ ಸಮರ್ಥನೆ ನೀಡಿದರು. ನಾನು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವರ ಮಕ್ಕಳ ಮೇಲೆ ಅತ್ಯಾಚಾರವಾಗಲಿ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ನಾನು ಹೇಳಿದ್ದು ಇಷ್ಟೇ..ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ ರಾಜ್ಯ ಸರ್ಕಾರ ಗಂಭೀರವಾಗಿ ಈ ಬಗ್ಗೆ ಚಿಂತಿಸುತ್ತಿಲ್ಲ. ಬಹುಶಃ ಅವರ ಮಕ್ಕಳ ಮೇಲೇನಾದರೂ ಅತ್ಯಾಚಾರವಾದರೆ ಆಗ ಕೂಡ ಸರ್ಕಾರ ಇದೇ ರೀತಿಯಲ್ಲಿ ನಿರ್ಲಕ್ಷ್ಯವಾಗಿ ನಡೆದುಕೊಳ್ಳುತ್ತದೆ ಎನ್ನುವ ಅರ್ಥದಲ್ಲಿ ಹೇಳಿದ್ದೆ. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ ಎಂದು ಈಶ್ವರಪ್ಪ ಹೇಳಿದರು.

ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಕುರಿತಂತೆ ಉತ್ತರಿಸಿದ ಈಶ್ವರಪ್ಪ ಅವರು, ನಾನು ನನ್ನ ಮನೆಯ ಮುಂದೆ ಇಂತಹ ಇನ್ನೂರಕ್ಕೂ ಅಧಿಕ ಪ್ರತಿಭಟನೆಗಳನ್ನು ಕಂಡಿದ್ದೇನೆ. ಇಂತಹ ಬೆದರಿಕೆಗಳಿಗೆಲ್ಲಾ ನಾನು ಬೆದರುವವನಲ್ಲ. ಈಗಲೂ ನಾನು ಹೇಳುತ್ತೇನೆ. ನಾನು ಯಾವೊಬ್ಬ ಮಗಳ ಮಾನಹರಣವಾಗಲಿ ಎಂದು ಹೇಳಿಲ್ಲ ಎಂದು ಈಶ್ವರಪ್ಪ ಹೇಳಿದರು.

ಒಟ್ಟಾರೆ ರಾಜ್ಯದಲ್ಲಿ ದಿನೇ ದಿನೇ ಅತ್ಯಾಚಾರದಂತಹ ಹೀನಕೃತ್ಯಗಳ ಸರಮಾಲೆ ಹೆಚ್ಚಾಗುತ್ತಿದ್ದು, ಸರ್ಕಾರದ ವಿಳಂಬ ಧೋರಣೆಯನ್ನು ಪ್ರತಿಪಕ್ಷಗಳು ತಮ್ಮ ಅಸ್ತ್ರವಾಗಿ ಬಳಸಿಕೊಳ್ಳಲಾರಂಭಿಸಿವೆ. ಅತ್ಯಾಚಾರದಂತಹ ಗಂಭೀರ ಸಮಸ್ಯೆಗಳ ಕುರಿತು ಸರ್ಕಾರದ ಕಣ್ಣು ತೆರೆಸುವ ಮಹತ್ವದ ಜವಾಬ್ದಾರಿ ಪ್ರತಿಪಕ್ಷಗಳ ಮೇಲಿದೆಯಾದರೂ, ಸರ್ಕಾರದ ಮೇಲೆ ಸವಾರಿ ಮಾಡುವ ಭರದಲ್ಲಿ ಅಥವಾ ಪ್ರತಿಪಕ್ಷಗಳ ಕಾಲು ಎಳೆಯುವ ಅವಸರದಲ್ಲಿ ಯಾವೊಬ್ಬ ಜನಪ್ರತಿನಿಧಿಯೂ ಕೂಡ ವೈಯುಕ್ತಿಕ ವಿಚಾರಗಳನ್ನು ಕೆದಕಿ ಟೀಕೆ ಮಾಡಬಾರದು. ಇದಕ್ಕಿಂತ ಮೊದಲು ಅವರೊಬ್ಬ ಜನಪ್ರತಿನಿಧಿ ಎಂಬ ವಿಚಾರವನ್ನು ಮರೆಯಬಾರದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com