ನೈಸ್ ಅಕ್ರಮದಲ್ಲಿ ಡಿಕೆಶಿ ನೇರ ಭಾಗಿ: ಎಚ್.ಡಿ.ದೇವೇಗೌಡ

ನೈಸ್ ಅಕ್ರಮದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನೇರ ಕೈವಾಡವಿದ್ದು, ರೈತರಿಂದ ಅಕ್ರಮವಾಗಿ ಭೂಮಿ ಪಡೆದುಕೊಂಡಿದ್ದಾರೆ..
ಸಾಂದರ್ಭಿಕ ಚಿತ್ರ-ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ
ಸಾಂದರ್ಭಿಕ ಚಿತ್ರ-ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ

ಬೆಂಗಳೂರು: ನೈಸ್ ಅಕ್ರಮದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನೇರ ಕೈವಾಡವಿದ್ದು, ರೈತರಿಂದ ಅಕ್ರಮವಾಗಿ ಭೂಮಿ ಪಡೆದುಕೊಂಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡ ಅವರು, ನೈಸ್ ಸಂಸ್ಥೆಗೆ ಭೂಮಿ ನೀಡುವಲ್ಲಿ ವ್ಯಾಪಕ ಅಕ್ರಮವಾಗಿದ್ದು, ಅಂದು ಭೂಮಿ ಮಂಜೂರಾತಿ ಸಮಿತಿಯ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರು ರೈತರಿಂದ ಹೆಚ್ಚುವರಿಯಾಗಿ ಭೂಮಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ನೈಸ್ ರಸ್ತೆ ಕಾಮಗಾರಿ ಪ್ರಯುಕ್ತ ಬಿಎಂಐಸಿಯು ರೈತರಿಂದ ಭೂಮಿ ಪಡೆದುಕೊಳ್ಳುವಾಗ ಭೂಮಿ ಮಂಜುರಾತಿ ಸಮಿತಿಯ ಅಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್ ಅವರು, ಅಗತ್ಯಕ್ಕಿಂತ  ಹೆಚ್ಚು ಪ್ರಮಾಣದ ಭೂಮಿಯನ್ನು ರೈತರಿಂದ ಪಡೆದುಕೊಂಡು, ಬಿಎಂಐಸಿಗೆ ನೀಡಿದ್ದಾರೆ. ಹೀಗಾಗಿ ಭೂಮಿ ಮಂಜೂರಾತಿ ಹಗರಣದ ಕುರಿತು ಕೂಡಲೇ ತನಿಖೆಯಾಗಬೇಕು ಎಂದು ದೇವೇಗೌಡ ಒತ್ತಾಯಿಸಿದರು.

ಇನ್ನು ಪ್ರಕರಣ ಸಂಬಂಧ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ದೇವೇಗೌಡ ಅವರು, ಡಿಕೆಶಿ ರಾಜ್ಯದ ಸಚಿವರಾಗಿರಬಹುದು. ಆದರೆ ಅವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಸರ್ಕಾರ ಅವರನ್ನು ರಕ್ಷಿಸುವ ಕೆಲಸ ಮಾಡಬಾರದು. ಶಿವಕುಮಾರ್ ಅವರು ಶೋಭಾ ಡೆವಲಪರ್ಸ್ ಸಂಸ್ಥೆಯ ಹೆಸರಿನಲ್ಲಿ ಅಕ್ರಮಕ್ಕೆ ಮುಂದಾಗಿದ್ದು, ಪಂತರ ಪಾಳ್ಯ ಮತ್ತು ಮಂಡಿಪಂಡಾರಪಾಳ್ಯದಲ್ಲಿ ಕಾಪೌಂಡ್ ಹಾಕಿಕೊಂಡಿದ್ದಾರೆ. ಇದಲ್ಲದೆ ಮಾವಿನ ತೋಟದ ಮಾಲೀಕರಾಗಿದ್ದ ಮಾಮೂ ಷರೀಫ್ ಎಂಬಾತನ ತೋಟವನ್ನು ಸರ್ವನಾಶ ಮಾಡಿ ಆ ಭೂಮಿಯನ್ನು ಕೂಡ ಇವರು ವಶಪಡಿಸಿಕೊಂಡಿದ್ದಾರೆ. ಇದೀಗ ಆತ ನಿಲ್ಲಲು ಕೂಡ ನೆಲೆ ಇಲ್ಲದೆ ಪರದಾಡುತ್ತಿದ್ದಾನೆ. ಇವಿಷ್ಟೇ ಅಲ್ಲದೆ ಇನ್ನು ಆರು ಕಡೆಗಳಲ್ಲಿ ಡಿಕೆಶಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ತನಿಖಾಧಿಕಾರಿಗಳು ಕರೆದರೆ ನಾನೇ ಸ್ವತಃ ಅವರೊಂದಿಗೆ ತೆರಳಿ ಅಕ್ರಮದ ಜಾಗಗಳನ್ನು ತೋರಿಸುತ್ತೇನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಅಕ್ರಮದ ಕುರಿತು ತಿಳಿದಿದ್ದು, ಪ್ರಕರಣವನ್ನು ಜಂಟಿ ಸದನ ಸಮಿತಿಗೆ ತನಿಖೆಗೆ ವಹಿಸಬೇಕು. ಇದಕ್ಕಾಗಿ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಲಿಖಿತ ಮನವಿ ನೀಡಿದ್ದೇನೆ. ಕಾಗೋಡು ತಿಮ್ಮಪ್ಪ ಅವರು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗಾಗಿ ಸದನ ಸಮಿತಿಯನ್ನು ನೇಮಕ ಮಾಡಿದ್ದಾರೆ ಎಂದು ಹೇಳಿದರು.

ಸೋನಿಯಾಗೆ ಸವಾಲು
ಇದೇ ವೇಳೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಸವಾಲು ಹಾಕಿರುವ ದೇವೇಗೌಡ ಅವರು, ಡಿಕೆಶಿ ಅವರ ಅಕ್ರಮದ ಕುರಿತು ಸೋನಿಯಾ ಗಾಂಧಿ ಅವರು ತನಿಖೆ ನಡೆಸಲಿ. ಅವರ ಪುತ್ರ ರಾಹುಲ್ ಗಾಂಧಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನಡೆಯುವ ಅಕ್ರಮವನ್ನು ತಡೆಯಲು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದರು. ಆದರೆ ಅವರದೇ ಪಕ್ಷದ ಮುಖಂಡನೊಬ್ಬ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸೋನಿಯಾ ಗಾಂಧಿ ಅವರು ಬೇಕಿದ್ದರೆ ಈ ಅಕ್ರಮದ ಕುರಿತು ತನಿಖೆ ನಡೆಸಲಿ ಎಂದು ದೇವೇಗೌಡ ಅವರು ಸವಾಲು ಹಾಕಿದರು.

ಟೋಪಿವಾಲ ಖೇಣಿ
ನೈಸ್ ಅಕ್ರಮದ ಕುರಿತು ನಾನು ಹೋರಾಟ ಮುಂದುವರೆಸುತ್ತಿದ್ದಂತೆಯೇ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ಆದರೆ ನಾನು ಈವರೆಗೂ ಯಾರಿಗೂ ಮೋಸ ಮಾಡಿಲ್ಲ. ನಾನು ಅನ್ಯ ರಾಜಕಾರಣಿಗಳಂತೆ ತೂಕಡಿಸುವ ರಾಜಕಾರಣಿ ಅಲ್ಲ. ದಿನದ 20 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ನಾನು ಅಥವಾ ನನ್ನ ಕುಟುಂಬ ಅಕ್ರಮದಲ್ಲಿ ಭಾಗಿಯಾಗಿದ್ದರೆ ನನ್ನ ವಿರುದ್ಧವೂ ತನಿಖೆಯಾಗಲಿ. ನಾನು ಅಕ್ರಮ ಮಾಡಿದ್ದೇನೆ ಎಂದು ಹೇಳುತ್ತಿರುವ ಆ ಟೋಪಿವಾಲ ಅಶೋಕ್ ಖೇಣಿ ವಿರುದ್ಧವೂ ತನಿಖೆಯಾಗಲಿ ಎಂದು ದೇವೇಗೌಡ ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com