ಹನಿಯಲ್ಲಿ ಸಿಹಿ

ರಾಜ್ಯದ ಐದು ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿರುವ ಕಬ್ಬನ್ನು ಹನಿ ನೀರಾವರಿ ವ್ಯಾಪ್ತಿಗೆ ತಂದು, ರೈತರಿಗೆ ಬೆಳೆ..
ಎಂ.ಬಿ. ಪಾಟೀಲ್
ಎಂ.ಬಿ. ಪಾಟೀಲ್

ಬೆಂಗಳೂರು: ರಾಜ್ಯದ ಐದು ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿರುವ  ಕಬ್ಬನ್ನು ಹನಿ ನೀರಾವರಿ ವ್ಯಾಪ್ತಿಗೆ ತಂದು, ರೈತರಿಗೆ ಬೆಳೆ- ಆದಾಯ ದ್ವಿಗುಣಗೊಳಿಸುವ ಜತೆಗೆ ನೂರಾರು  ಟಿಎಂಸಿ ನೀರು, ನೂರಾರು ಮೆಗಾವ್ಯಾಟ್  ವಿದ್ಯುತ್ ಉಳಿಸುವ ಯೋಜನೆಯನ್ನು ಜನವರಿಯಿಂದ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ.

ಹನಿ ನೀರಾವರಿ ಅವಳವಡಿಸಿಕೊಳ್ಳಲು ಸರ್ಕಾರ ರೈತರಿಗೆ ಶೇ.33ರಿಂದ ಶೇ.50ರಷ್ಟು ಸಹಾಯಧನ ನೀಡಲಿದ್ದು ಉಳಿದ ಹಣವನ್ನು  ಸಾಲದ ರೂಪದಲ್ಲಿ ಸಕ್ಕರೆ ಕಾರ್ಖಾನೆಗಳೇ ಒದಗಿಸಲಿವೆ. ಒಂದೇ ಬೆಳೆಯಲ್ಲಿ ಹೂಡಿಕೆಯ ಹಣ ವಾಪಸ್ ಆಗಲಿದ್ದು, ಕಬ್ಬು ಖರೀದಿಯ ಬಿಲ್‌ನಲ್ಲಿ ಸಾಲವನ್ನು ಕಾರ್ಖಾನೆಗಳು ಕಡಿತಗೊಳಿಸಿಕೊಳ್ಳಲಿವೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ. ಪಾಟೀಲ್ ಅವರು ಮಂಗಳವಾರ ತಿಳಿಸಿದರು.

ರಾಜ್ಯದಲ್ಲಿ ಎಲ್ಲ ಕಬ್ಬು ಬೆಳೆಗಾರರೂ ಹನಿ ನೀರಾವರಿಯನ್ನು ಅಳವಡಿಸಿಕೊಂಡರೆ 184 ಟಿಎಂಸಿ ನೀರು, ಸುಮಾರು  ರು.400 ಕೋಟಿ ಮೌಲ್ಯದ ವಿದ್ಯುತ್ ಉಳಿತಾಯವಾಗಲಿದೆ. ಬೆಳೆ ಉತ್ಪಾದನೆ ದ್ವಿಗುಣವಾಗಲಿದ್ದು ಕೀಟನಾಶಕ ಹಾಗೂ ಕೂಲಿ ವೆಚ್ಚ ತಲಾ ಶೇ. 50ರಷ್ಟು ಕಡಿಮೆಯಾಗಲಿದೆ. ಮೂರು ವರ್ಷಗಳಲ್ಲಿ ಯೋಜನೆಯನ್ನು ಎಲ್ಲೆಡೆ ಅನುಷ್ಠಾನ ಮಾಡುವ ಉದ್ದೇಶ ಹೊಂದಲಾಗಿದೆ. ರು.4500 ಕೋಟಿ ಮೌಲ್ಯದ ಯೋಜನೆ ಇದಾಗಿದ್ದು, ಸರ್ಕಾರ ಪ್ರತಿ ವರ್ಷ ರು.500 ಕೋಟಿ ವ್ಯಯ ಮಾಡಲಿದೆ ಎಂದು ವಿವರಿಸಿದರು,

ರು.10 ಸಾವಿರ ಸಹಾಯಧನ: ಹನಿ ನೀರಾವರಿ ಅಳವಡಿಸಿಕೊಳ್ಳಲು ಪ್ರತಿ ಎಕರೆಗೆ  ರು.40 ಸಾವಿರ ವೆಚ್ಚವಾಗಲಿದೆ. ಜಲ ಸಂಪನ್ಮೂಲ ಇಲಾಖೆಯಿಂದ ರು. 10 ಸಾವಿರ ಸಹಾಯಧನ ನೀಡಲಾಗುತ್ತದೆ. ಸಕ್ಕರೆ ಕಾರ್ಖಾನೆಗಳು ರು.5 ಸಾವಿರ ನೀಡುವ ಜತೆಗೆ ಸಾಲಕ್ಕೆ ಖಾತರಿಯನ್ನೂ ನೀಡಲಿವೆ. ಇದಲ್ಲದೆ, ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿಕೊಳ್ಳಲಾಗಿದೆ.ರಾಜ್ಯದ ಇಂಧನ ಇಲಾಖೆಗೆ ಸಾಕಷ್ಟು ವಿದ್ಯುತ್ ಉಳಿತಾಯ ಆಗುವುದರಿಂದ ಸಹಾಯಧನ ನೀಡುವಂತೆ ಕೋರಲಾಗಿದೆ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com