
ಬೆಂಗಳೂರು: ನಿಗಮ-ಮಂಡಳಿ ನೇಮಕ ಪ್ರಕ್ರಿಯೆಯಲ್ಲಿ ತಮ್ಮ ಬೆಂಬಲಿಗರಿಗೆ ಅವಕಾಶ ಸಿಗದೇ ಇರುವ ಹಿನ್ನಲೆಯಲ್ಲಿ ವಸತಿ ಸಚಿವ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಬೆಂಬಲಿಗ ಅಮರಾವತಿ ಚಂದ್ರಶೇಖರ್ ಅವರಿಗೆ ಅವಕಾಶ ಕೈ ತಪ್ಪಿರುವ ಹಿನ್ನಲೆಯಲ್ಲಿ ಅವರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಮಂಡ್ಯ ಕಾಂಗ್ರೆಸ್ ನಿಯೋಗ ಅಂಬರೀಶ್ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚಿಸಿದ್ದು, ತಮ್ಮ ವಿರೋಧಿ ಬಣಕ್ಕೆ ಮಣೆ ಹಾಕಿರುವ ಬಗ್ಗೆ ಕಿಡಿಕಾರಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್, ಸಂಭಾವ್ಯರ ಪಟ್ಟಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಬಲಗೊಳಿಸಲು ಅಮರಾವತಿ ಚಂದ್ರಶೇಖರ್ ಸಾಕಷ್ಟು ಶ್ರಮವಹಿಸಿದ್ದಾರೆ. ಈ ಅವಧಿಯಲ್ಲಿ ಅವರು ಸಾಕಷ್ಟು ಪೆಟ್ಟೂ ತಿಂದಿದ್ದಾರೆ. ಹೀಗಾಗಿ ಪಕ್ಷ ಅಧಿಕಾರಕ್ಕೆ ಬಂದಾಗ ಅಂಥಹವರಿಗೆ ಅವಕಾಶ ನೀಡಬೇಕು. ಅವರು ಕಷ್ಟಪಟ್ಟಾಗ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ಈಗಲಾದರೂ ಅವರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ ನೀಡಲಿ ಎಂದು ಆಗ್ರಹಿಸಿದರು.
Advertisement