ನಿಗಮ ಸುಗಮ

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ನೀಡಿದೆ.
ದೆಹಲಿ ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ ಸಿಂಗ್‌ರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ
ದೆಹಲಿ ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ ಸಿಂಗ್‌ರನ್ನು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ

ನವದೆಹಲಿ: ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ನೀಡಿದೆ.

95 ನಿಗಮ ಮಂಡಳಿಗಳ ಅಧ್ಯಕ್ಷರನ್ನು ಯಾವುದೇ ಕ್ಷಣದಲ್ಲಿ ನೇರವಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಲಿದೆ. ಶುಕ್ರವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಅವರೊಂದಿಗೆ ಒಂದು ತಾಸು ಸಮಾಲೋಚನೆ ನಡೆಸಿದ ನಂತರ ಉಭಯ ನಾಯಕರು ಸಲ್ಲಿಸಿದ 95 ನಿಗಮ ಮಂಡಳಿಗಳ ಪಟ್ಟಿಗೆ ಅನುಮೋದನೆ ನೀಡಿದ್ದಾರೆ.

ಎಲ್ಲ ಅಧ್ಯಕ್ಷರ ಅಧಿಕಾರವಧಿಯನ್ನು 18 ತಿಂಗಳಿಗೆ ಸೀಮಿತಗೊಳಿಸಲಾಗಿದೆ. 18 ತಿಂಗಳ ನಂತರ ಅಧಿಕಾರ ವಂಚಿತ ಬೇರೆ ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತದೆ. ಅಧ್ಯಕ್ಷರ ನೇಮಕದ ಆದೇಶ ಹೊರಬಿದ್ದ ಒಂದು ವಾರದೊಳಗೆ ನಿಗಮ ಮಂಡಳಿಗಳ ಸದಸ್ಯರು, ನಿರ್ದೇಶಕರ ನೇಮಕ ಮಾಡಲಾಗುತ್ತದೆ.

ಮೂರು ತಾಸು ಸಭೆ
ರಾಹುಲ್ ಜತೆ ಸಮಾಲೋಚನೆ ಮುನ್ನ ಸಿದ್ದರಾಮಯ್ಯ, ಡಾ.ಜಿ ಪರಮೇಶ್ವರ ಬೆಳಗ್ಗೆ ಕರ್ನಾಟಕ ಭವನದಲ್ಲಿ ಮೂರು ತಾಸು ಸಮಾಲೋಚನೆ ನಡೆಸಿದರು. ನಂತರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರೊಂದಿಗೂ ಎರಡು ತಾಸು ಸಮಾಲೋಚನೆ ನಡೆಸಿದರು. ನಂತರ ಮಧ್ಯಾಹ್ನ 3 ಗಂಟೆಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು.

ಶಾಸಕರು ಹಾಗು ಸೋತವರಿಗೆ ಅವಕಾಶ ನೀಡದೇ ಸಿದ್ದಪಡಿಸಿದ್ದ ಪಟ್ಟಿಯನ್ನು ನೋಡಿ ರಾಹುಲ್ ಶ್ಲಾಘಿಸಿದರು. ಟಿಕೆಟ್ ಸಿಗದೇ ಇರುವ ಜಿಲ್ಲಾ ಅಧ್ಯಕ್ಷರು, ಕೆಪಿಸಿಸಿ ಸದಸ್ಯರು, ಪಕ್ಷಕ್ಕಾಗಿ ದುಡಿದ ಮುಖಂಡರಿಗೆ ಅವಕಾಶ ನೀಡಲಾಗಿದೆ. ಈ ಪೈಕಿ ಪ್ರತಿ ಜಿಲ್ಲೆಗೆ ಕನಿಷ್ಠ ಎರಡು ಅಧ್ಯಕ್ಷ ಸ್ಥಾನ ನೀಡಲಾಗಿದೆ. ಉಳಿದಂತೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಜಾತಿ , ಪಂಗಡಗಳಿಗೆ ಪ್ರಮುಖ ಕೋಮುಗಳಾದ ಲಿಂಗಾಯುತ ಮತ್ತು ಒಕ್ಕಲಿಗ ಸಮುದಾಯಕ್ಕೂ ಗಣನೀಯ ಪ್ರಾತಿನಿಧ್ಯ ನೀಡಲಾಗಿದೆ. ಅಲ್ಪಸಂಖ್ಯಾತರಿಗೂ ಆಧ್ಯತೆ ನೀಡಲಾಗಿದೆ.

ಅತೃಪ್ತರನ್ನು ಸಮಾಧಾನ ಪಡಿಸಲೆಂದೇ ಅಧಿಕಾರ ಹಂಚಿಕೆ ಸೂತ್ರಕ್ಕೆ ಮೊರೆ ಹೋಗಲಾಗಿದೆ. ಈ ಬಾರಿ ಅವಕಾಶ ಸಿಗದವರಿಗೆ 18 ತಿಂಗಳ ನಂತರ ಅವಕಾಶ ನೀಡುವುದಾಗಿ ಸಮಾಧಾನ ಮಾಡುವುದು ಸಿದ್ದರಾಮಯ್ಯ ಕಾರ್ಯತಂತ್ರ.

ಸೋತವರಿಗಿಲ್ಲ ಸ್ಥಾನ
ಶಾಸಕರಿಗೆ ಮತ್ತು ಸೋತವರಿಗೂ ಅವಕಾಶ ಕಲ್ಪಿಸುವ ಇರಾದೆ ಸಿದ್ದರಾಮಯ್ಯ ಅವರಿಗಿತ್ತು. ಹೀಗಾಗಿ ಶಾಸಕರನ್ನೂ ಒಳಗೊಂಡ ಪಟ್ಟಿಯನ್ನೂ ರಾಹುಲ್ ಗಾಂಧಿ ಅವರ ಬಳಿಗೆ ಒಯ್ದಿದ್ದರು. ಆದರೆ ಆರಂಭದಲ್ಲೇ ಶಾಸಕರಿಗೆ ಹಾಗೂ ಸೋತವರಿಗೆ ಅವಕಾಶ ನೀಡಬಾರದೆಂದು ರಾಹುಲ್ ಗಾಂಧಿ ಹೇಳಿದ್ದರಿಂದ ಶಾಸಕರು, ಸೋತವರಿಲ್ಲದ ಪಟ್ಟಿಯನ್ನು ನೀಡಿ ಆಯ್ಕೆ ಬಗ್ಗೆ ವಿವರಿಸಿದರು. ಜಿಲ್ಲಾವಾರು, ಜಾತಿ, ಸಮುದಾಯವಾರು ಪ್ರಾತಿನಿಧ್ಯ ನೀಡಿರುವ ಬಗ್ಗೆ ಸಂತೃಪ್ತರಾದ ರಾಹುಲ್ ಯಾವುದೇ ಬದಲಾವಣೆ ಇಲ್ಲದೇ 95 ಅಧ್ಯಕ್ಷರ ನೇಮಕ ಪಟ್ಟಿಗೆ ಅನುಮೋದಿಸಿದರು.

ವಿಸ್ತರಣೆ ಸದ್ಯಕ್ಕಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟವನ್ನು ಬರುವ ಏಪ್ರಿಲ್‌ವರೆಗೆ ವಿಸ್ತರಣೆ ಮಾಡುವ ಸಾಧ್ಯತೆ ಇಲ್ಲ. ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕದ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರಾದರೂ, ಸದ್ಯಕ್ಕೆ ವಿಸ್ತರಣೆಗೆ ಹೈಕಮಾಂಡ್ ಸಮ್ಮತಿಸಿಲ್ಲ ಎನ್ನಲಾಗಿದೆ. ಈಗ ಸುಸೂತ್ರವಾಗಿ ಆಡಳಿತ ನಡೆದುಕೊಂಡು ಹೋಗುತ್ತಿದೆ.

ಹೀಗೇ ನಡೆದುಕೊಂಡು ಹೋಗಲಿ, ಏಪ್ರಿಲ್ ವೇಳೆಗೆ ವಿಸ್ತರಣೆ ಅಥವಾ ಪುನಾರಚನೆ ಮಾಡಬಹುದು ಎಂದು ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆ ವೇಳೆಗೆ ಹೇಗೂ ಸಂಪುಟದಲ್ಲಿರುವವರು ಎರಡು ವರ್ಷ ಅಧಿಕಾರ ಪೂರೈಸಿದಂತಾಗುತ್ತದೆ. ಸಂಪುಟದಿಂದ ಸಾಕಷ್ಟು ಮಂದಿ ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡುವುದು ರಾಹುಲ್ ಗಾಂಧಿ ಅವರ ಚಿಂತನೆ ಎನ್ನಲಾಗಿದೆ. ಸಂಪುಟದಿಂದ ಕೈ ಬಿಡುವ ಸಚಿವರಿಗೆ ಪಕ್ಷ ಸಂಘಟನೆಯ ಗುರುತರ ಜವಾಬ್ದಾರಿ ವಹಿಸಿಕೊಡಲಾಗುತ್ತದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com